ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ 26ಕ್ಕೆ

ಘಟಿಕೋತ್ಸವ ದಿನವೇ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳ ಘೋಷಣೆ
Published 26 ಜುಲೈ 2023, 14:49 IST
Last Updated 26 ಜುಲೈ 2023, 14:49 IST
ಅಕ್ಷರ ಗಾತ್ರ

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹನ್ನೆರಡನೆಯ ಘಟಿಕೋತ್ಸವ ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನವದೆಹಲಿಯ ಭಾರತೀಯ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕ ಹಿಮಾಂಶು ಪಾಠಕ್ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡುವರು. ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ಉಪಸ್ಥಿತರಿರುವರು ಎಂದು ನಗರದ ಪತ್ರಿಕಾಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಕುಲಪತಿ ಡಾ.ಎಂ.ಹನುಮಂತಪ್ಪ, ಕುಲಸಚಿವ ಡಾ.ಎಂ.ವೀರನಗೌಡ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಪದವಿ ಪುರಸ್ಕೃತ ವಿದ್ಯಾರ್ಥಿಗಳು, ಗಣ್ಯರು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಪಾಲ್ಗೊಳ್ಳುವರು ಎಂದರು.

ಹನ್ನೆರನೆಯ ಘಟಿಕೋತ್ಸವದಲ್ಲಿ 332 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 106 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 42 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುವುದು. ಸ್ನಾತಕ ಪದವಿಯಲ್ಲಿ 25 ಚಿನ್ನದ ಪದಕ, ಸ್ನಾತಕೋತ್ತರ ಪದವಿಯಲ್ಲಿ 14 ಚಿನ್ನದ ಪದಕ ಹಾಗೂ ಪಿಎಚ್‌ಡಿ ಪಡೆದ 13 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಆಹ್ವಾನ ಪತ್ರಿಕೆ ಕಡ್ಡಾಯ:

ಭದ್ರತಾ ಕಾರಣಕ್ಕೆ ಆಹ್ವಾನ ಪತ್ರಿಕೆಯನ್ನು ಕಡ್ಡಾಯ ತರಬೇಕು. ಬೆಳಿಗ್ಗೆ 9.30ರ ಒಳಗೆ ಆಸನಗಳಲ್ಲಿ ಆಸೀನರಾಗಿರಬೇಕು. ಕ್ಯಾಮೆರಾ, ಬ್ಯಾಗು, ಕೈಚೀಲ ಹಾಗೂ 12 ವರ್ಷದೊಳಗಿನ ಮಕ್ಕಳ ಪ್ರವೇಶ ನಿಷೇಧಿಸಲಾಗಿದೆ. ಮೊಬೈಲ್‌ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಕುಲಸಚಿವ ಡಾ.ಎಂ.ವೀರನಗೌಡ ಹೇಳಿದರು.

ವಿಶ್ವವಿದ್ಯಾಲಯದ ಸಾಧನೆ

ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕದ 30 ಸಾವಿರಕ್ಕೂ ಅಧಿಕ ರೈತರಿಗೆ ಮೊಬೈಲ್‌ ಆ್ಯಪ್‌ ಬಳಸಿ ಬೆಳೆ ಸಮೀಕ್ಷೆ ಕೈಗೊಳ್ಳಲು ಮಾಹಿತಿ ನೀಡಿದೆ. ವೈಯಕ್ತಿಕ ಹಿಡುವಳಿ ಮಟ್ಟದಲ್ಲಿ ಸುಧಾರಿತ ಬೆಳೆ ಯೋಜನೆ ಕೈಗೊಳ್ಳಲು ರೈತರಿಗೆ ಮಾರ್ಗದರ್ಶನ ನೀಡಿದೆ ಎಂದು ಕುಲಪತಿ ಡಾ.ಎಂ.ಹನುಮಂತಪ್ಪ ತಿಳಿಸಿದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನೀಡುವ ರಾಷ್ಟ್ರ ಮಟ್ಟದ ಶ್ರೇಣಿಯಲ್ಲಿ 2020–2021ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ 25ನೇ ಶ್ರೇಣಿ ದೊರಕಿದೆ. ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರಮಟ್ಟದ ಕೃಷಿ ಇ–ಮಹೀಂದ್ರಾ ಕೃಷಿ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

ಸಂಸ್ಕೃರಣೆ ಮತ್ತು ಆಹಾರ ತಾಂತ್ರಿಕತೆ ವಿಭಾಗದಲ್ಲಿ ಅನುಷ್ಠಾನಗೊಂಡಿರುವ ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಆಹಾರ ಸಂಸ್ಕರಣೆಯ ತಾಂತ್ರಿಕತೆ ಅರೆಕಾಲಿಕ ಯೋಜನೆಯ ಅತ್ಯುತ್ತಮ ಅನುಷ್ಠಾನಕ್ಕೆ ರಾಷ್ಟ್ರ ಮಟ್ಟದ ಮೂರು ಉತ್ಕೃಷ್ಠ ಕೇಂದ್ರಗಳಲ್ಲಿ ಒಂದಾಗಿ ನಮ್ಮ ವಿಶ್ವವಿದ್ಯಾಲಯ ಗುರುತಿಸಿ 2020ನೇ ಸಾಲಿನ ಅತ್ಯುತ್ತಮ ಕೇಂದ್ರ ಪ್ರಶಸ್ತಿ ಪಡೆದಿದೆ ಎಂದು ತಿಳಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಗುಣಮಟ್ಟದ ಶಿಕ್ಷಣ, ಸಮಗ್ರ ಕೃಷಿ ಹಾಗೂ ಉದ್ಯಮ ಅಭಿವೃದ್ಧಿಗೆ ಪೂರಕವಾದ ಸಂಶೋಧನೆ ಮತ್ತು ಸಂಶೋಧನೆಯ ಫಲಿತಾಂಶಗಳನ್ನು ರೈತ ಸಮುದಾಯಕ್ಕೆ ಒದಗಿಸುವುದಲ್ಲದೇ, ಅವುಗಳನ್ನು ಅಳವಡಿಸಲು ವಿಸ್ತರಣಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ ಪಾಟೀಲ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ ಗೌಡಪ್ಪ, ಡಾ.ಗುರುರಾಜ ಸುಂಕದ, ಸತ್ಯನಾರಾಯಣ, ಬಸವರಾಜ. ಹುಲಗೂರ ಇದ್ದರು.

ಕುಲಪತಿ ಡಾ.ಎಂ.ಹನುಮಂತಪ್ಪ
ಕುಲಪತಿ ಡಾ.ಎಂ.ಹನುಮಂತಪ್ಪ

Cut-off box - ಹಳೆಯ ಸಂಪ್ರದಾಯದಿಂದ ಹೊರ ಬರದ ವಿಶ್ವವಿದ್ಯಾಲಯ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಘಟಿಕೋತ್ಸವ ನಡೆಯುವ ಎರಡು ದಿನ ಮೊದಲು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಹೆಸರು ಪ್ರಕಟಿಸುತ್ತವೆ. ಆದರೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಯಾರ ಹೆಸರನ್ನೂ ಪ್ರಕಟಿಸದೇ ನೇರವಾಗಿ ಘಟಿಕೋತ್ಸವ ದಿನವೇ ಚಿನ್ನದ ಪದಕ ಪ್ರಧಾನ ಮಾಡುವ ಸಂಪ್ರದಾಯ ಹಾಕಿಕೊಂಡು ಬಂದಿದೆ. ‘ಯಾರಿಗೆ ಚಿನ್ನದ ಪದಕಗಳನ್ನು ಕೊಡಬೇಕು ಎನ್ನುವ ಕುರಿತು ವ್ಯವಸ್ಥಾಪನಾ ಮಂಡಳಿಯಲ್ಲಿ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಪಡೆದ ನಂತರ ಮಾಹಿತಿ ಹಂಚಿಕೊಳ್ಳಲಾಗುವುದು’ ಎಂದು ಕುಲಸಚಿವ ಎಂ.ವೀರನಗೌಡ ಹೇಳಿದರು. ‘ಚಿನ್ನದ ಪದಕ ಯಾರಿಗೆ ಕೊಡಬೇಕು ಎನ್ನುವುದನ್ನು ಗೋ‍ಪ್ಯವಾಗಿ ಇಡಲಾಗುತ್ತದೆ. 12ನೇ ಘಟಿಕೋತ್ಸವಗಳಲ್ಲಿ ಇದೇ ಸಂಪ್ರದಾಯ ಹಾಕಿಕೊಂಡು ಬರಲಿದೆ. ಮುಂದಿನ ಬಾರಿ ವ್ಯವಸ್ಥಾಪನಾ ಮಂಡಳಿಯಲ್ಲಿ ಚರ್ಚಿಸಿ ಮಾಹಿತಿ ಕೊಡುವ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಕೃಷಿ ವಿಶ್ವವಿದ್ಯಾಲಯವು ಮೂರು ವರ್ಷಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ರೈತರಿಗೆ ಹೊಸ ಸಂಶೋಧನೆಗಳನ್ನು ಪರಿಚಯಿಸಿದ್ದನ್ನು ಹೇಳಿಕೊಳ್ಳುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT