ಗುರುವಾರ , ಜುಲೈ 29, 2021
21 °C

ರಾಯಚೂರು: ಮೂರು ದಶಕಗಳಿಂದ ಪಕ್ಷ ಸಂಘಟನೆ ಮಾಡಿದ್ದ ಅಶೋಕ ಗಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಭಾರತೀಯ ಜನತಾ ಪಾರ್ಟಿಯಲ್ಲಿ ಮೂರು ದಶಕಗಳಿಂದ ನಿಷ್ಠಾವಂತರಾಗಿ ಸದಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ರಾಯಚೂರು ನಗರ ವಾಸಿಯಾಗಿರುವ ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯರಾಗುವ ಅವಕಾಶ ಒದಗಿ ಬಂದಿದೆ. ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

‘ಈ ಬಗ್ಗೆ ನನಗೆ ಯಾವುದೇ ಸುಳಿವು ಇರಲಿಲ್ಲ. ನನ್ನ ಹತ್ತಿರ ಹಣವೂ ಇಲ್ಲ, ಪ್ರಭಾವವೂ ಇಲ್ಲ. ಆದರೆ, ಪಕ್ಷದಿಂದ ಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಬರುತ್ತಿದ್ದೇನೆ. ತಾಳ್ಮೆ, ಪರಿಶ್ರಮ ಹಾಗೂ ಜನಸೇವೆ ಮಾಡಬೇಕೆನ್ನುವ ಹಂಬಲ ಇದೆ. ಇದನ್ನು ಪಕ್ಷದ ವರಿಷ್ಠರು ಗುರುತಿಸಿದ್ದಕ್ಕೆ ಸಂತೋಷವಾಗಿದೆ’ ಎಂದು ಅಶೋಕ ಗಸ್ತಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಬಿಎ ಎಲ್‌ಎಲ್‌ಬಿ ಶಿಕ್ಷಣದ ನಂತರ ವಕೀಲರಾಗಿ ವೃತ್ತಿ ಆರಂಭಿಸಿದ್ದರು. 1989 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದರು. ಸಾರ್ವತ್ರಿಕ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಕ್ಷದ ಸಂಘಟನೆ ಮಾಡುತ್ತಾ ಬರುತ್ತಿದ್ದಾರೆ. 2009 ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು. ಆನಂತರ ಹಿಂದುಳಿದ ವರ್ಗಗಳ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅಧ್ಯಕ್ಷರಾಗಿದ್ದರು.

56 ವರ್ಷದ ಅಶೋಕ ಗಸ್ತಿ ಅವರು ಸವಿತಾ ಸಮಾಜಕ್ಕೆ ಸೇರಿದವರು. ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಪಕ್ಷ ಪ್ರಭಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು