ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಅಧ್ಯಯನದಿಂದ ಯಶಸ್ಸು: ಜಿಲ್ಲಾಧಿಕಾರಿ ದುರುಗೇಶ

ಎನ್‌ಇಕೆಆರ್‌ಟಿಸಿ ರಾಯಚೂರು ವಿಭಾಗದ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
Last Updated 30 ಸೆಪ್ಟೆಂಬರ್ 2020, 15:00 IST
ಅಕ್ಷರ ಗಾತ್ರ

ರಾಯಚೂರು: ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಯನ ಮಾಡಿದರೆ ಮಾತ್ರ ಯಶಸ್ಸು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ರಾಯಚೂರು ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ‘ನಿಗಮದ ಸಿಬ್ಬಂದಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದು ದಿನದ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಠಿಣ ಪರಿಶ್ರಮದಿಂದ ಓದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಸುಲಭ. ಓದುವ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಬರೀ ಪಠ್ಯಪುಸ್ತಕಗಳನ್ನು ಓದುವುದಕ್ಕೆ ಸಿಮೀತವಾಗಬಾರದು. ಸುತ್ತಮುತ್ತಲಿನ ಪ್ರಪಂಚದ ಜ್ಞಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಐಎಎಸ್‌, ಕೆಎಎಸ್‌, ಐಪಿಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಇದಕ್ಕಾಗಿ ಪ್ರತಿದಿನ ತಪ್ಪದೇ 6 ರಿಂದ 8 ಗಂಟೆ ಅಧ್ಯಯನ ಮಾಡಬೇಕು. ನಿರಂತರ ಓದಿನ ಹವ್ಯಾಸ ಬೆಳೆಸಿಕೊಂಡ ಮಕ್ಕಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಸೌಲಭ್ಯಗಳ ಕೊರತೆ ಮಧ್ಯೆಯೂ ವಿಭ್ಯಾಬ್ಯಾಸ ಮಾಡುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಓದುವುದಕ್ಕೆ ಸೌಲಭ್ಯಗಳು ಮುಖ್ಯವಾಗುವುದಿಲ್ಲ. ದೃಢವಾದ ನಿರ್ಧಾರ, ಮನಸ್ಸು ಮಾಡಬೇಕು. ಇದಕ್ಕಾಗಿ ಪಾಲಕರು, ಶಿಕ್ಷಕರು ಸದಾಕಾಲ ಪ್ರೋತ್ಸಾಹಿಸುವ ಕೆಲಸ ಮುಂದುವರಿಸಬೇಕು ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿಯೂ ಸಾಕಷ್ಟು ಪ್ರತಿಭಾನ್ವಿತರಿದ್ದು, ಇತ್ತೀಚೆಗೆ ಹೊರಬಂದ ಕೆಎಎಸ್‌ ಅಧಿಕಾರಿಗಳ ಆಯ್ಕೆ ಪಟ್ಟಿಯಲ್ಲಿ 20 ಕ್ಕೂ ಹೆಚ್ಚು ಆಕಾಂಕ್ಷಿಗಳು ಆಯ್ಕೆಯಾಗಿದ್ದಾರೆ. ಶಿಕ್ಷಣದಲ್ಲಿ ರಾಯಚೂರು ಜಿಲ್ಲೆ ಕೂಡಾ ದಾಪುಗಾಲು ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ವಿವಿಧ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಎನ್‌ಇಕೆಆರ್‌ಟಿಸಿ ರಾಯಚೂರು ವಿಭಾಗದ ಸಿಬ್ಬಂದಿ ಮಕ್ಕಳನ್ನು ಗೌರವಿಸಲಾಯಿತು.

ರಾಯಚೂರು ಉಪವಿಭಾಗಾಧಿಕಾರಿ ಸಂತೋಷಕುಮಾರ ಕಾಮಗೌಡ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಮಾರ್ಗದರ್ಶನ ಮಾಡಿದರು.ಜಿಲ್ಲಾ ಮಾನಸಿಕ ಮತ್ತು ನರರೋಗ ತಜ್ಞ ಡಾ.ಮನೋಹರ ವೈ.ಪತ್ತಾರ ಅವರು ಕೋವಿಡ್‌–19 ಮಹಾಮಾರಿ ದಿನಗಳಲ್ಲಿ ಮಾನಸಿಕ ಆರೋಗ್ಯ ಸಂರಕ್ಷಿಸಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಿದರು. ಚಾಲುಕ್ಯ ಕರಿಯರ್‌ ಅಕಾಡೆಮಿಯ ಸಂಗಮೇಶ ಮಂಗನವರ್‌ ಅವರು ಸ್ಪರ್ಧಾತ್ಮಕ ಪರೀಕ್ಷೆಗಳು ಹೇಗಿರುತ್ತವೆ ಎಂಬುದನ್ನು ತಿಳಿಸಿದರು.

ಸಮಾರಂಭದಲ್ಲಿ ಸುನೀಲಕುಮಾರ್‌ ಚಂದರಗಿ, ನಾರಾಯಣ ಗೌಡಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT