ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ರವೀನಾ, ಸಹನಾ ಪ್ರಥಮ

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ: ಜಮಖಂಡಿ ತಾಲ್ಲೂಕಿನ ಮಕ್ಕಳ ಸಾಧನೆ
Last Updated 9 ಮೇ 2018, 7:45 IST
ಅಕ್ಷರ ಗಾತ್ರ

ಬಾಗಲಕೋಟೆ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಮಖಂಡಿಯ ತುಂಗಳ ಅಂಗ್ಲ ಮಾಧ್ಯಮ ಪ್ರೌಢಶಾಲೆಯ ರವೀನಾ ರಂಗನಗೌಡ ಪಾಟೀಲ 620 ಅಂಕಗಳನ್ನು ಪಡೆದು ಶೇ 99.20ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರವೀನಾಗೆ ನಿಕಟ ಪೈಪೋಟಿ ನೀಡಿರುವ ಜಮಖಂಡಿ ತಾಲ್ಲೂಕಿನ ಆಲಗೂರು ಆರ್.ಸಿ ಆದರ್ಶ ವಿದ್ಯಾಲಯ ಶಾಲೆಯ ಸಹನಾ ಮಲ್ಲಪ್ಪ ಹಳಿಂಗಳಿ 619 ಅಂಕ ಪಡೆದು ಶೇ 99.04ರಷ್ಟು ಫಲಿತಾಂಶ ಪಡೆದಿದ್ದಾರೆ. ಕೂದಲೆಳೆ ಅಂತರದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದ ಅವಕಾಶದಿಂದ ವಂಚಿತರಾಗಿದ್ದಾರೆ.

ಜಮಖಂಡಿಯ ತುಂಗಳ ಅಂಗ್ಲ ಮಾಧ್ಯಮ ಶಾಲೆಯ ಸಾಗರ್ ಸುರೇಶ ಕನ್ನೂರ 618 ಅಂಕ ಪಡೆದು ಶೇ 98.88ರಷ್ಟು ಫಲಿತಾಂಶ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.

ಜಮಖಂಡಿಯ ಸರ್ಕಾರಿ ಪಿ.ಬಿ. ಪ್ರೌಢಶಾಲೆಯ ಮೊಹಮ್ಮದ್‌ ಕೈಫ್ ಮನಿಯಾರ್ 617 ಅಂಕ ಪಡೆದು ಶೇ 98.72ರಷ್ಟು ಫಲಿತಾಂಶ ಪಡೆದು ನಾಲ್ಕನೇ ಸ್ಥಾನ ಹಾಗೂ ಹುನಗುಂದ ಆದರ್ಶ ವಿದ್ಯಾಲಯ ಶಾಲೆಯ ಅರ್ಪಿತಾ ಕಡಗದ 616 ಅಂಕ ಪಡೆದು ಶೇ 98.56ರಷ್ಟು ಫಲಿತಾಂಶ ಪಡೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ತಿಳಿಸಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಮುಧೋಳ ತಾಲ್ಲೂಕಿನ ಸೋರಗಾವಿಯ ಸರ್ಕಾರಿ ಆರ್.ಎಂ.ಎಸ್.ಎ ಪ್ರೌಢಶಾಲೆಯ ಪವಿತ್ರಾ ಪರಮಾನಂದ ಅರೇನಾಡ 614 ಅಂಕಗಳನ್ನು ಪಡೆದು ಶೇ 98.24, ಜಮಖಂಡಿ ತಾಲ್ಲೂಕಿನ ರಾಮಪುರದ ಜ್ಞಾನೋದಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಅಮೃತಾ ಶ್ರೀಶೈಲ ಮುರಗುಂಡಿ 614 ಅಂಕಗಳನ್ನು ಪಡೆದು ಶೇ 98.24, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಬಸವಾನಂದ ಪ್ರೌಢಶಾಲೆಯ ಮುತ್ತುರಾಜ ರೇವಪ್ಪ ಧರಮಟ್ಟಿ 613 ಅಂಕಗಳನ್ನು ಪಡೆದು ಶೇ 98.08, ಬಾದಾಮಿ ತಾಲ್ಲೂಕು ಪಟ್ಟದಕಲ್‌–ಕಾಟಾಪುರದ ವೀರಪುಲಿಕೇಶಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಹಣಮಂತ ಸುಭಾಷ ನಕ್ಕರಗುಂದಿ 612 ಅಂಕಗಳನ್ನು ಪಡೆದು ಶೇ 97.92, ಹಾಗೂ ಬಾದಾಮಿ ತಾಲೂಕಿನ ಗುಳೇದಗುಡ್ಡದ ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪೂಜಾ ಬಸವರಾಜ ಶೇಬಿನಕಟ್ಟಿ 611 ಅಂಕಗಳನ್ನು ಪಡೆದು ಶೇ 97.76ರಷ್ಟು ಫಲಿತಾಂಶ ಪಡೆದಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಪ್ರೌಢಶಾಲೆಗಳಲ್ಲಿ ಒಟ್ಟು 16,493 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಅವರಲ್ಲಿ 11,726 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 71.10 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿರುವ ಪ್ರೌಢಶಾಲೆಗಳಲ್ಲಿ 9812 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7580 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 77.25 ರಷ್ಟು ಫಲಿತಾಂಶ ಬಂದಿದೆ.

ಒಟ್ಟು 18,228 ವಿದ್ಯಾರ್ಥಿಗಳಲ್ಲಿ ವಿಷಯವಾರು ಫಲಿತಾಂಶ: ಕನ್ನಡ ಶೇ 91.94, ಇಂಗ್ಲಿಷ್ 83.60, ಹಿಂದಿ 93.55, ಗಣಿತ 81.34, ವಿಜ್ಞಾನ 88.52, ಸಮಾಜ ವಿಜ್ಞಾನ 91.29 ಫಲಿತಾಂಶ ಬಂದಿದೆ ಎಂದು ಕಾಮಾಕ್ಷಿ ತಿಳಿಸಿದ್ದಾರೆ.

ಕನ್ನಡದಲ್ಲಿ 209 ಮಂದಿಗೆ 125 ಅಂಕ!

ಜಿಲ್ಲೆಯಲ್ಲಿ ಕನ್ನಡ ವಿಷಯದಲ್ಲಿ 209 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದಿದ್ದಾರೆ. ಇಂಗ್ಲಿಷ್‌ನಲ್ಲಿ ಮೂವರು, ಹಿಂದಿ 187, ಗಣಿತ 13, ವಿಜ್ಞಾನ ಇಬ್ಬರು ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 38 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.

ಅಂಗಲ ವಿದ್ಯಾರ್ಥಿಗಳಾಗಿರುವ ಮುಧೋಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವೈಶಾಲಿ ಮಲ್ಲಪ್ಪ ಪೂಜಾರಿ 550 ಅಂಕ ಹಾಗೂ ಹುನಗುಂದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ಪ್ರಿಯಾಂಕ ಸಂಗನಗೌಡ ಪಾಟೀಲ 485 ಅಂಕ ಪಡೆದಿದ್ದಾರೆ.

**
ಜಿಲ್ಲೆಯಲ್ಲಿ ಈ ಬಾರಿ ಶೂನ್ಯ ಫಲಿತಾಂಶ ಯಾವ ಶಾಲೆಗೂ ಬಂದಿಲ್ಲ. ಬೀಳಗಿಯ ಬೀರೇಶ್ವರ ಪ್ರೌಢ<br/>ಶಾಲೆ ಮಾತ್ರ ಶೇ 9ರಷ್ಟು ಫಲಿತಾಂಶ ಪಡೆದು ಕಳಪೆ ಸಾಧನೆ ಮಾಡಿದೆ
- ಎಂ.ಆರ್.ಕಾಮಾಕ್ಷಿ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT