ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಾಮೇಶ್ವರರ ತತ್ವ ಅಳವಡಿಸಿಕೊಳ್ಳಿ: ಶಾಸಕ

Last Updated 25 ಜನವರಿ 2020, 15:09 IST
ಅಕ್ಷರ ಗಾತ್ರ

ರಾಯಚೂರು: ಸಮಾಜ ಸುಧಾರಕ ಶಿವಯೋಗಿ ಸಿದ್ಧರಾಮೇಶ್ವರ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿವಯೋಗಿ ಸಿದ್ಧರಾಮೇಶ್ವರ ಅವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದರು. ಸಮಸ್ಯೆಗಳಿಗೆ ಹೆದರದೇ ಮುನ್ನುಗ್ಗಿ ಜನರ ಮನಸ್ಸಿನಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಾಮಾಜಿಕ ಸಮಾನತೆಯ ತತ್ವ ಸಂದೇಶಗಳನ್ನು ಸಾರಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರ ವಚನಗಳು ಇಂದಿಗೂ ಪ್ರಸ್ತುತ ಎಂದರು.

ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದಾಗ ಮಾತ್ರ ಒಂದು ಸಮಾಜ ಬಲಿಷ್ಠವಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಜಯಂತಿ ಆಚರಿಸುವುದಕ್ಕೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಶಾಸಕ ಡಾ.ಎಸ್.ಶಿವರಾಜ ಪಾಟೀಲ ಮಾತನಾಡಿ, ಭೋವಿ ಸಮಾಜದವರು ಶ್ರಮ ಜೀವಿಗಳಾಗಿದ್ದು, ಸಮಾಜ ಅಭಿವೃದ್ಧಿಯಾಗಲು ಶಿಕ್ಷಣ ಮುಖ್ಯವಾದ ಆಯುಧವಾಗಿದೆ. ಹಾಗಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.

ಭೋವಿ ಸಮಾಜಕ್ಕೆ ಸರ್ಕಾರದಿಂದ ಒಂದು ಎಕರೆ ಜಮೀನು ಮಂಜೂರಾಗಿದ್ದು ಅಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಭವನ ನಿರ್ಮಾಣ ಮಾಡಿ ಮುಂದಿನ ದಿನಗಳಲ್ಲಿ ಜಯಂತಿ ಆಚರಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ನನಗೆ ಹೇಳಿ ಅವುಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆ ನೀಡಿದರು.

ಭೋವಿ ಸಮುದಾಯದ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು. ಶಿಕ್ಷಕ ಆಂಜನೇಯ ತುರಕಣದೋಣಿ ಉಪನ್ಯಾಸ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆಂಜನೇಯ್ಯ, ನಗರಸಭೆ ಸದಸ್ಯ ವಿ.ನಾಗರಾಜ್, ರಮೇಶ್, ಮಹೇಂದ್ರರೆಡ್ಡಿ, ಎಂ.ನಾಗರಾಜ್ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ ಹಾಗೂ ಸಮಾಜದ ವಿವಿಧ ಮುಖಂಡರು ಸೇರಿದಂತೆ ಇನ್ನಿತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ಬಿ ನಾಯಕ್ ಸ್ವಾಗತಿಸಿದರು. ದಂಡಪ್ಪ ಬಿರಾದರ್ ನಿರೂಪಿಸಿದರು.

ಮೆರವಣಿಗೆ: ಸಿದ್ದರಾಮೇಶ್ವರ ವೃತ್ತದಿಂದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರವರೆಗೆ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT