ಶುಕ್ರವಾರ, ಅಕ್ಟೋಬರ್ 18, 2019
23 °C

ತೋಟದಬಾವಿಯಲ್ಲಿ ಸ್ವಚ್ಛತಾ ಆಂದೋಲನ

Published:
Updated:
Prajavani

ರಾಯಚೂರು: ಇಲ್ಲಿನ ವಾಸವಿನಗರದ ಪುರಾತನ ತೋಟದಬಾವಿಯಲ್ಲಿ ಭಾನುವಾರ ಸ್ವಚ್ಛತಾ ಆಂದೋಲನ ನಡೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ನೇತೃತ್ವ ವಹಿಸಿಕೊಂಡಿದ್ದು ವಿಶೇಷವಾಗಿತ್ತು.

ಗ್ರೀನ್‌ ರಾಯಚೂರು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾಗಿ, ಬಾವಿಯಲ್ಲಿ ಭರ್ತಿಯಾಗಿದ್ದ ತ್ಯಾಜ್ಯವನ್ನು ವಿಲೇವಾರಿಗೊಳಿಸಿದರು. ಬಾವಿಯ ಗೋಡೆಗಳಲ್ಲಿ ಬೆಳೆದಿದ್ದ ಮುಳ್ಳುಕಂಟಿ, ಕಸದ ಗಿಡಗಳನ್ನು ತೆರವು ಮಾಡಲಾಯಿತು.

ಸಾರ್ವಜನಿಕರು ತಂದು ಎಸೆಯುವ ಪೂಜಾ ಸಾಮಗ್ರಿಗಳ ರಾಶಿ ಬಾಯಿಯಲ್ಲಿ ತುಂಬಿಕೊಂಡಿದ್ದು, ಹಾರ, ಕಾಯಿ, ಹಳೆಯ ದೇವರ ಪೋಟೊಗಳನ್ನು ಈ ಬಾವಿಯಿಂದ ಹೊರಕ್ಕೆ ತೆಗೆಯುವ ಕೆಲಸ ನಡೆಯಿತು. ಸಂಪ್ರದಾಯದ ಹೆಸರಿನಲ್ಲಿ ಪುರಾತನ ಬಾವಿಗೆ ತ್ಯಾಜ್ಯ ಎಸೆದು ಜನರು ಉಸಿರುಗಟ್ಟಿಸುತ್ತಿದ್ದು, ಇನ್ನು ಮೇಲಾದರೂ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬೇಕು ಎಂದು ಗಣ್ಯರು ಮನವಿ ಮಾಡಿದರು.

ವಾರ್ಡ್‌ ಸಂಖ್ಯೆ 17 ರ ಆಸಕ್ತಿ ಇರುವ ಸಾರ್ವಜನಿಕರು ಹಾಗೂ ನಗರಸಭೆ ಪರಿಸರ ಎಂಜಿನಿಯರ್‌ ಶರಣಪ್ಪ ಹಾಗೂ ಗ್ರೀನ್‌ ರಾಯಚೂರು ಮುಖ್ಯಸ್ಥ ಕೊಂಡ ಕೃಷ್ಣಮೂರ್ತಿ, ಸಿ.ಬಿ. ಪಾಟೀಲ, ಸರಸ್ವತಿ, ರಾಜೇಂದ್ರ ಕುಮಾರ, ಬಿಜೆಪಿ ಮುಖಂಡ ಶಂಕ್ರಪ್ಪ, ಯುವ ಬ್ರಿಗೇಡ್ ಪದಾಧಿಕಾರಿಗಳು ಭಾಗವಹಿಸಿದ್ದರು.

ವಾಸವಿ ನಗರದ ವಿವಿಧೆಡೆ ಸಸಿಗಳನ್ನು ನೆಡಲಾಯಿತು. ಗಣ್ಯರು ವೃಕ್ಷವನ್ನು ಅಪ್ಪಿಕೊಂಡು ವೃಕ್ಷ ರಕ್ಷಣೆಯ ಬಗ್ಗೆ ತಿಳಿವಳಿಕೆ ನೀಡಿದರು. ಮನೆಗಳಿಂದ ಹೊರಬರುವ ಕೊಳಚೆ ನೀರನ್ನು ಸಸಿಗಳನ್ನು ಬೆಳೆಸಲು ಬಳಸಿಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಲಾಯಿತು. ಇಂಗುಗುಂಡಿಗಳನ್ನು ನಿರ್ಮಿಸಿಕೊಂಡರೆ, ಅಂತರ್ಜಲ ಹೆಚ್ಚುತ್ತದೆ ಎಂಬುದನ್ನು ತಿಳಿಸಲಾಯಿತು.

Post Comments (+)