ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿಎ ಪದವಿಗೆ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳು ಹೆಚ್ಚಾಗಿದ್ದು, ತರಗತಿಯಲ್ಲಿ ಕುಳಿತುಕೊಳ್ಳಲು ಜಾಗ ಕೊಡದಿದ್ದರೂ ಪ್ರವೇಶಾಕಾಶ ಕಲ್ಪಿಸುವಂತೆ ಕೇಳಿಕೊಳ್ಳುತ್ತಿದ್ದಾರೆ!
ಸರ್ಕಾರಿ ಸುತ್ತೋಲೆ ಪ್ರಕಾರ, ಪ್ರವೇಶ ಬಯಸಿ ಬರುವ ಯಾವುದೇ ವಿದ್ಯಾರ್ಥಿಯನ್ನು ಮರಳಿ ಕಳುಹಿಸುವುದಿಲ್ಲ. ಇದುವರೆಗೂ ಬಿಎ ಪದವಿ ಓದುವುದಕ್ಕಾಗಿ ಒಟ್ಟು 900 ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡಲಾಗಿದೆ. ಸೆಪ್ಟೆಂಬರ್ 31 ರವರೆಗೂ ಪ್ರವೇಶ ಪ್ರಕ್ರಿಯೆ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಏರಿಕೆಯಾಗಲಿದೆ.
ಕಳೆದ ವರ್ಷ ಬಿಎ ಕೋರ್ಸ್‌ಗೆ 663, ಬಿಕಾಂ ಕೋರ್ಸ್‌ಗೆ 388, ಬಿಎಸ್‌ಸಿ ಕೋರ್ಸ್‌ಗೆ 171 ಹಾಗೂ ಬಿಸಿಎ ಕೋರ್ಸ್‌ಗೆ 40 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಒಟ್ಟಾರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 3,551 ರಷ್ಟಿತ್ತು. ಈ ವರ್ಷ ಕಲಾ ವಿಭಾಗದಲ್ಲಿಯೇ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಎಂದಿನಂತೆ ಅತ್ಯಧಿಕವಾಗಿದ್ದು, ಹಿಂದಿನ ವರ್ಷಕ್ಕಿಂತಲೂ ದುಪ್ಪಟ್ಟಾಗಬಹುದು.
ಆದರೆ ಬಿಕಾಂ ಕೋರ್ಸ್‌ಗೆ 165 ಹಾಗೂ ಬಿಎಸ್‌ಸಿ ಕೋರ್ಸ್‌ಗೆ 50 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಸಿಇಟಿ ಫಲಿತಾಂಶವನ್ನು ಎದುರು ನೋಡುತ್ತಿದ್ದು, ಫಲಿತಾಂಶದ ಬಳಿಕ ಬಿಎಸ್‌ಸಿ ಪ್ರವೇಶ ಪಡೆಯುವವರು ಹೆಚ್ಚಳವಾಗಲಿದ್ದಾರೆ. ಈ ವರ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೆಲ್ಲರೂ ತೇರ್ಗಡೆ ಆಗಿರುವುದರಿಂದ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳು ಅಧಿಕವಾಗಿದ್ದಾರೆ.
ಕವಿತಾಳ, ದೇವದುರ್ಗ ಹಾಗೂ ಸಿರವಾರದಲ್ಲಿ ಸರ್ಕಾರಿ ಪದವಿ ಕಾಲೇಜುಗಳಿವೆ. ಆದರೂ 50 ಕಿಲೋ ಮೀಟರ್ ದೂರ ಲೆಕ್ಕಿಸದೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಯಚೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ರಾಯಚೂರು ನಗರದಲ್ಲೇ ಪ್ರತ್ಯೇಕ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿದೆ. ಆದರೂ ಆ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಕಡಿಮೆ ಸಂಖ್ಯೆಯಲ್ಲಿದ್ದಾರೆ.
ದಟ್ಟಣೆಗೆ ಕಾರಣ ಏನು: ಜಿಲ್ಲೆಯಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ 19,271 ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 10,863, ವಾಣಿಜ್ಯ ವಿಭಾಗದಲ್ಲಿ 5,132 ಹಾಗೂ ವಿಜ್ಞಾನ ವಿಭಾಗದಲ್ಲಿ 3,276 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಒಟ್ಟು 15,428 ನಗರ ವಾಸಿಗಳಾಗಿದ್ದರೆ, 3,843 ಗ್ರಾಮೀಣ ಭಾಗದ ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿರುವ ಬಹುತೇಕ ವಿದ್ಯಾರ್ಥಿಗಳೆಲ್ಲರೂ ಗ್ರಾಮೀಣ ಭಾಗದವರು.
ಈ ವರ್ಷ ರಾಯಚೂರು ವಿಶ್ವವಿದ್ಯಾಲಯವು ಕಾರ್ಯಾರಂಭ ಮಾಡಿದ್ದು, ಈ ವರ್ಷ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳೆಲ್ಲರಿಗೂ ನೂತನ ವಿಶ್ವವಿದ್ಯಾಲಯದಿಂದಲೇ ಅಂಕಪತ್ರ ನೀಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.