ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ | ಬರಿದಾದ ಜಲಮೂಲ: ನೀರಿಗೆ ಪರದಾಟ

Published 27 ಫೆಬ್ರುವರಿ 2024, 6:12 IST
Last Updated 27 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಮಸ್ಕಿ: ಕುಡಿಯುವ ನೀರಿನ ಕೆರೆ ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಹತ್ತಕ್ಕೂ ಹೆಚ್ಚು ವಾರ್ಡ್‌ಗಳಿಗೆ ಪುರಸಭೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದೆ.

ಗಾಂಧಿ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಬಿಂದಿಗೆ ನೀರಿಗೆ ಜನ ಪರದಾಡುವಂತಾಗಿದೆ. ಬಾವಿಗಳು ಬತ್ತಿ ಹೋಗಿವೆ. ನಲ್ಲಿಗಳಲ್ಲಿ ನೀರು ಬಾರದ ಕಾರಣ ಕೊಡ ಹಿಡಿದು ಬೀದಿ ಬೀದಿ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತೀವ್ರ ನೀರಿನ ಅಭಾವ ಇರುವ ವಾರ್ಡ್‌ಗಳಲ್ಲಿ ಎಂಟಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದ ಪುರಸಭೆ, ನೀರು ಪೂರೈಸಲು ಮುಂದಾಗಿದೆ. ಒಂದೊಂದು ವಾರ್ಡ್‌ಗೆ ಹತ್ತು ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದರೂ ಪರದಾಟ ಕಡಿಮೆಯಾಗಿಲ್ಲ.

ನೀರು ತುಂಬಿದ ಟ್ಯಾಂಕರ್‌ಗಳು ವಾರ್ಡ್‌ಗಳಿಗೆ ಬರುತ್ತಿದ್ದಂತೆ ಮಹಿಳೆಯರು, ಮಕ್ಕಳು, ವೃದ್ಧರು ಬಿಂದಿಗೆ ಹಿಡಿದು ನೀರು ತುಂಬಿಸಿಕೊಳ್ಳಲು ಮುಗಿ ಬಿಳುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕೆಲ ವಾರ್ಡ್‌ಗಳಲ್ಲಿ ನೀರು ತುಂಬಿಸಿಕೊಳ್ಳುವ ವೇಳೆ ನೂಕು–ನುಗ್ಗಲು, ಗಲಾಟೆಗಳಾಗುತ್ತಿವೆ. ಅದನ್ನು ನಿಯಂತ್ರಿಸಲು ಪುರಸಭೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಪುರಸಭೆ ಆಡಳಿತ ಈಗಾಗಲೇ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳ ಸಹಾಯ ಪಡೆದಿದೆ. ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಂದು ಕೆರೆ ತುಂಬುವವರೆಗೆ ಸಾರ್ವಜನಿಕರ ನೀರಿನ ದಾಹ ತೀರಿಸಲು ಶತ ಪ್ರಯತ್ನ ನಡೆಸುತ್ತಿದೆಯಾದರೂ ದಿನ ಬೆಳಗಾದರೆ ನೀರಿನ ಸಮಸ್ಯೆ ಹೊತ್ತು ಪುರಸಭೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.

ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಬಿಡದ ಕಾರಣ ಈ ಸಮಸ್ಯೆ ಉಂಟಾಗಿದೆ. ಮಾರ್ಚ್‌ 5 ರ ನಂತರ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇರುವ ಕಾರಣ ಅಲ್ಲಿವರೆಗೆ ವಾರ್ಡ್‌ಗಳಿಗೆ ನೀರು ಮುಟ್ಟಿಸುವುದು ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಟ್ಯಾಂಕರ್‌ಗಳಿಗೆ ಹೆಚ್ಚಿದ ಬೇಡಿಕೆ: ಪಟ್ಟಣದಲ್ಲಿ ನೀರಿನ ಅಭಾವ ಇರುವ ಕಾರಣ ಖಾಸಗಿ ವ್ಯಕ್ತಿಗಳ ನೀರಿನ ಟ್ಯಾಂಕರ್‌ ಗಳಿಗೆ ಭಾರಿ ಬೇಡಿಕೆ ಬಂದಿದೆ. ದಿನವೊಂದಕ್ಕೆ ₹600 ರಿಂದ ₹700 ವರೆಗೆ ಬಾಡಿಗೆ ನಿಗದಿ ಮಾಡಲಾಗಿದೆ.

ಮಸ್ಕಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಪುರಸಭೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮಂಗಳವಾರದಿಂದಲೇ 16 ಕಡೆ ಕೊಳವೆಬಾವಿ ಕೊರೆಯಿಸಿ ಎರಡು ದಿನಗಳಲ್ಲಿ ಎಲ್ಲರಿಗೂ ನೀರು ಮುಟ್ಟುವಂತೆ ಮಾಡಲು ಸಿದ್ಧತೆ ಮಾಡಿಕೊಂಡಿದೆ

ನರಸರೆಡ್ಡಿ, ಮುಖ್ಯಾಧಿಕಾರಿ ಪುರಸಭೆ ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT