ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಜಿಲ್ಲಾಧಿಕಾರಿ ಕಚೇರಿ ಸುತ್ತ ಬಿಗಿ ಭದ್ರತೆ

ಕಚೇರಿ 100 ಮೀಟರ್‌ ವ್ಯಾಪ್ತಿಯಲ್ಲಿ ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗೆ ಮೂರು ವಾಹನಗಳ ಬಳಕೆಗೆ ಅವಕಾಶ
Published 13 ಏಪ್ರಿಲ್ 2024, 6:19 IST
Last Updated 13 ಏಪ್ರಿಲ್ 2024, 6:19 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ದಾಖಲಿಸಲು ಶುಕ್ರವಾರದಿಂದ ಆವಕಾಶ ಕಲ್ಪಿಸಲಾಗಿದ್ದು, ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

ಕಲಬುರಗಿಯ ಭಾರತೀಯ ಜನ ಸಾಮ್ರಾಟ ಪಕ್ಷದ ಶಾಮರಾವ್ ಬಾಬುರಾವ್ ಮೇದಾರ್ ಅವರು ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಉಮೇದುದಾರರು ಹಾಗೂ ಸೂಚಕರು ಹಾಜರಿದ್ದರು.

ರಾಜಕೀಯ ಪಕ್ಷಗಳು ಶಕ್ತಿ ಪ್ರದರ್ಶನ ಮಾಡಲು ಭಾರಿ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜನದಟ್ಟಣೆ ಉಂಟಾಗುತ್ತದೆ. ಹೀಗಾಗಿ ಮುಖ್ಯದ್ವಾರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಖಾಸಗಿ ವಾಹನ ಸಂಚಾರ ನಿಷೇಧಿಸಲಾಗಿದೆ.

ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕೊಠಡಿಗೆ ಐವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಚೇರಿಯ 100 ಮೀಟರ್‌ ವ್ಯಾಪ್ತಿಯಲ್ಲಿ ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗೆ ಮೂರು ವಾಹನಗಳ ಬಳಕೆಗೆ ಅವಕಾಶ ನೀಡಲಾಗಿದೆ.

ಪ್ರಖರ ಬಿಸಿಲು ಇರುವ ಕಾರಣ ಅರೆ ಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಬಳಲುವಂತಾಗಿದೆ. ಹೀಗಾಗಿ ಬೊಂಬುವಿನಿಂದ ಮಾಡಿದ ತಟ್ಟಿಯ ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.

18ಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು ಏಪ್ರಿಲ್‌ 18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಶರಣಪ್ರಕಾಶ ಪಾಟೀಲ, ಎನ್.ಎಸ್.ಬೋಸರಾಜು, ಕೆಪಿಸಿಸಿ‌ ಕಾರ್ಯಾಧ್ಯಕ್ಷ ವಸಂತಕುಮಾರ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ಪಾಲ್ಗೊಳ್ಳಲಿದ್ದಾರೆ. 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭದ್ರತಾ ಸಿಬ್ಬಂದಿಗೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭದ್ರತಾ ಸಿಬ್ಬಂದಿಗೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ

ಒಂದೇ ದಿನ ಎರಡು ಪಕ್ಷಗಳಿಂದ ಶಕ್ತಿ ಪ್ರದರ್ಶನ ಜಿಲ್ಲೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಹೆಚ್ಚಳ 15 ದಿನಗಳ ಮೊದಲೇ ಕಾರುಗಳ ಬುಕ್

ಬಿಜೆಪಿಯಲ್ಲಿ ಮುಂದುವರಿದ ಗೊಂದಲ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದರೂ ಬಿ.ವಿ.ನಾಯಕ ಬೆಂಬಲಿಗರು ಪಕ್ಷದ ಬಿ.ಫಾರಂ ಬಿ.ವಿ.ನಾಯಕ ಅವರಿಗೇ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೊ ಟಿಕೆಟ್‌ ಪಡೆಯುವ ಪ್ರಯತ್ನ ಮುಂದುವರಿಸಲು ನಿರ್ಧರಿಸಿದ್ದಾರೆ. ಇದು ಪಕ್ಷ ಘೋಷಿತ ಅಭ್ಯರ್ಥಿಗೆ ಹಾಗೂ ಪಕ್ಷದ ಜಿಲ್ಲಾ ಘಟಕಕ್ಕೂ ತಲೆ ನೋವಾಗಿದೆ. ಅಮರೇಶ್ವರ ನಾಯಕ ಏಪ್ರಿಲ್ 18ರಂದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ವಿಜಯೇಂದ್ರ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರಲ್ಲಿನ ಗೊಂದಲ ನಿವಾರಿಸಲು ಏಪ್ರಿಲ್‌ 13ರಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ರಾಧಾ ಮೋಹನದಾಸ್‌ ಅಗರವಾಲ್‌ ರಾಯಚೂರಿಗೆ ಬರಲಿದ್ದಾರೆ. ಪಕ್ಷದೊಳಗಿನ ಉಭಯ ಬಣಗಳ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಈ ಗೊಂದಲಕ್ಕೆ ಪಕ್ಷದಲ್ಲಿನ ವರಿಷ್ಠರೇ ಕಾರಣವಾಗಿದ್ದಾರೆ. ಚುನಾವಣೆ ಘೋಷಣೆಯಾಗುವ ಮೊದಲು ಮುಖಂಡರು ಕ್ಷೇತ್ರದಲ್ಲಿ ಸಿದ್ಧತೆ ಆರಂಭಿಸುವಂತೆ ಬಿ.ವಿ.ನಾಯಕ ಹಾಗೂ ತಿಪ್ಪರಾಜು ಹವಾಲ್ದಾರ್‌ ಅವರಿಗೆ ಸೂಚನೆ ನೀಡಿದ್ದೇ ಪಕ್ಷಕ್ಕೆ ಮುಳುವಾಗಿದೆ. ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿ ಪ್ರಚಾರ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ರಾಧಾ ಮೋಹನದಾಸ್‌ ಅಗರವಾಲ್‌ ಅವರು ಪಕ್ಷದ ಮುಖಂಡರ ಸಭೆ ನಡೆಸಿದ ನಂತರ ಭಿನ್ನಾಭಿಪ್ರಾಯ ಶಮನಗೊಳ್ಳಲಿದೆಯೇ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT