ಅಸಂಘಟಿತ ಕಾರ್ಮಿಕರಿಗೆ ವೃತ್ತಿ ಕೌಶಲ ತರಬೇತಿ

7
ಕಾರ್ಮಿಕರಿಗೆ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಕಾರ್ಮಿಕ ಸಚಿವ ವೆಂಕಟರಮಣಪ್ಪ

ಅಸಂಘಟಿತ ಕಾರ್ಮಿಕರಿಗೆ ವೃತ್ತಿ ಕೌಶಲ ತರಬೇತಿ

Published:
Updated:
Deccan Herald

ರಾಯಚೂರು: ‘ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ, ಆಸಕ್ತರಿಗೆ ವೃತ್ತಿ ಕೌಶಲ ತರಬೇತಿ ನೀಡುವುದಕ್ಕೆ ಕಾರ್ಮಿಕ ಇಲಾಖೆ ತಯಾರಿ ಮಾಡಿಕೊಂಡಿದೆ’ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ವಿವಿಧ ಸೌಲಭ್ಯಗಳ ವಿವರಣೆ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ಮೊಬೈಲ್‌ ದುರಸ್ತಿ, ಗ್ಯಾಸ್‌ ಸಿಲಿಂಡರ್‌ ತರಬೇತಿ ನೀಡಲಾಗುವುದು. ಸದ್ಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ರೀತಿಯ ದುರಸ್ತಿ ಸೌಲಭ್ಯಗಳಿಲ್ಲದ ಕಾರಣ, ಜನರು ತಾಲ್ಲೂಕು ಕೇಂದ್ರಗಳಿಗೆ ಬರುವ ಅನಿವಾರ್ಯತೆ ಇದೆ. ಆಸಕ್ತರನ್ನು ಗುರುತಿಸಿ ತರಬೇತಿ ಕೊಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಇಲಾಖೆಯಲ್ಲಿ ಲಭ್ಯವಿರುವ ಅನುದಾನವನ್ನು ಕಾರ್ಮಿಕರ ಕಲ್ಯಾಣಕ್ಕೆ ವಿನಿಯೋಗಿಸಲು ಯೋಜಿಸಲಾಗಿದೆ. ಪ್ರತಿ ತಾಲ್ಲೂಕಿಗೂ ಕಾರ್ಮಿಕರ ಭವನ ನಿರ್ಮಿಸಲಾಗುವುದು ಮತ್ತು ತಾಲ್ಲೂಕು ಮಟ್ಟದ ಕಾರ್ಮಿಕ ಅಧಿಕಾರಿಯನ್ನು ನೇಮಕ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೋಂದಾಯಿತ ಕಾರ್ಮಿಕರಿಗೆ ಹಂತಹಂತವಾಗಿ ತರಬೇತಿ ಆಯೋಜಿಸಿ ಅಗತ್ಯ ಸರ್ಕಾರಿ ಸಲಕರಣೆಗಳನ್ನು ವಿತರಿಸಲಾಗುವುದು. ರಾಜ್ಯದಲ್ಲಿ ಮೊದಲ ತರಬೇತಿ ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿದ್ದು, ತರಬೇತಿ ಪೂರ್ಣಗೊಳಿಸಿದವರಿಗೆ ಕಿಟ್‌ ವಿತರಿಸಲಾಗಿದೆ ಎಂದು ಹೇಳಿದರು.

ನೋಂದಣಿ ಮಾಡಿಕೊಂಡ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹಧನ ಹಾಗೂ ಅವರ ಮದುವೆಗೆ ₨ 50 ಸಾವಿರ ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕಾರ್ಮಿಕರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ವಿಶೇಷವಾಗಿ ಬಡಿಗ, ಮಡಿವಾಳ, ಕುಂಬಾರ. ಕಮ್ಮಾರ ಎಂಬ ಸಣ್ಣ ಸಣ್ಣ ಜಾತಿಗಳು ಕಾರ್ಮಿಕ ಕೆಲಸಗಳನ್ನು ಮಾಡುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಕಾರ್ಮಿಕರಿಗೆ ತರಬೇತಿ ನೀಡುವ ಮೂಲಕ ಅವರ ಆರೋಗ್ಯ ದೃಷ್ಟಿಯಿಂದ ಸುರಕ್ಷತಾ ಕಿಟ್‌ಗಳನ್ನು ಅವರಿಗೆ ವಿತರಿಸಲಾಗುತ್ತಿದೆ. ಸರ್ಕಾರದ ಇಲಾಖೆಗಳಾದ ಭೂಸೇನಾ ನಿಗಮ, ಕ್ಯಾಸುಟೆಕ್‌ನಂತಹ ಸಂಸ್ಥೆಗಳು ಅವರಿಗೆ ಕೆಲಸ ಕೋಡಬೇಕು. ಇಲ್ಲದಿದ್ದರೆ ಅವರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ದದ್ದಲ್, ಕಾರ್ಮಿಕ ಇಲಾಖೆಯ ಆಯುಕ್ತ ಎಸ್.ಪಾಲಯ್ಯ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಅತುಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !