ಗುರುವಾರ , ಜೂನ್ 24, 2021
22 °C
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಅರ್ಜಿ ಸಲ್ಲಿಸಿದವರಿಗೆಲ್ಲ ವಸತಿ ನಿಲಯಕ್ಕೆ ಪ್ರವೇಶ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೆ ಪ್ರವೇಶಾತಿ ನೀಡುವ ಆದೇಶ ರದ್ದುಪಡಿಸಿ ಶಿಕ್ಷಣದ ಬಾಗಿಲು ಮುಚ್ಚಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವಸತಿ ನಿಲಯ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ಎಲ್ಲರಿಗೂ ಪ್ರವೇಶಾತಿ ನೀಡಲು ಮಾರಕವಾಗಿರುವ ಸುತ್ತೋಲೆಯನ್ನು ರದ್ದುಪಡಿಸಬೇಕು. ವಸತಿ ನಿಲಯದ ನಿಗದಿತ ಸಂಖ್ಯೆಗಿಂತ ಹೆಚ್ಚುವರಿಯಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಖಾಸಗಿ ಕಟ್ಟಡಗಳನ್ನು ಬಾಡಿಗೆ ತೆಗೆದುಕೊಂಡು ವಸತಿ ನಿಲಯ ಪ್ರಾರಂಭಿಸಬೇಕು. ಮೂಲ ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು. ಸರಿಯಾದ ಕಾಲದಲ್ಲಿ ಅನುದಾನ ನೀಡುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು.

ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಬೇಕು. ಎಲ್ಲ ಯೋಜನೆಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಜಾರಿಗೊಳಿಸಬೇಕು. ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ಸಮಿತಿಯನ್ನು ರದ್ದುಪಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧೀನದ ನಿಗಮ ಮಂಡಳಿಗಳಿಗೆ ಸಕಾಲದಲ್ಲಿ ಅರ್ಜಿ ಸಲ್ಲಿಸುವ ಎಲ್ಲರಿಗೂ ಸಾಲ ಮಂಜೂರು ಮಾಡಬೇಕು. ವಸತಿ ಶಾಲೆ, ವಸತಿ ನಿಲಯಗಳಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ತುಂಡುಗೂಲಿ, ದಿನಗೂಲಿ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲ ತಾಲ್ಲೂಕುಗಳಿಗೆ ಇಲಾಖಾವಾರು 5 ವಸತಿ ನಿಲಯಗಳನ್ನು ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ಹೊರಗುತ್ತಿಗೆ ಸಂಪನ್ಮೂಲ ಗುತ್ತಿಗೆ ಏಜೆನ್ಸಿ ಎಆರ್‌ಸಿ ಜೆಇ ಎಂಟರ್‌ಪ್ರೈಸೆಸ್ ಗುತ್ತಿಗೆ ಒಪ್ಪಂದದ ನಿಯಮಗಳ ಪ್ರಕಾರ ವೇತನ ನೀಡುತ್ತಿಲ್ಲ. ನಿಯಮಗಳ ಉಲ್ಲಂಘನೆ ಆಧಾರದಲ್ಲಿ ಒಪ್ಪಂದದ ಆದೇಶ ರದ್ದುಪಡಿಸಬೇಕು. ಆಯಾ ಇಲಾಖೆಗಳಿಂದ ವೇತನ ಪಾವತಿಗೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಕನಿಷ್ಠ ವೇತನ ತಿಂಗಳಿಗೆ ₹18 ಸಾವಿರ ನೀಡಬೇಕು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ನೀಡಬೇಕು. ಆಹಾರ ಸಾಮಾಗ್ರಿ ಮತ್ತು ಇತರೆ ಸಾಮಾಗ್ರಿ ಸರಬರಾಜು ನಡೆಸುತ್ತಿರುವ ಗುತ್ತಿಗೆದಾರ ಸಾಗರ್‌ ಅವರ ಪದ್ಮಾವತಿ ಎಂಟರ್ ಪ್ರೈಸೆಸ್ ನಿಯಮಗಳ ಪ್ರಕಾರ ಸರಬರಾಜು ಮಾಡುತ್ತಿಲ್ಲ. ಮೇಲ್ವಿಚಾರಕ ಅನುಕೂಲಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತಿದೆ. ಇದರಿಂದ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ. ಬಿಲ್ ಪಾವತಿ ಮಾತ್ರ ಏಜೆನ್ಸಿ ಹೆಸರಿನಲ್ಲಿ ಮಾಡಲಾಗುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಪ್ರಭುಲಿಂಗ ಮೇಗಳಮನಿ, ಶರಣಪ್ಪ ದಿನ್ನಿ, ಶಿವಗೇನಿ ಕಪಗಲ್, ಲಕ್ಷ್ಮಣ ಕುರ್ಡಿ, ಚಿದಾನಂದ ಆರೋಲಿ, ಪರಶುರಾಮ ಆರೋಲಿ, ಬಸವರಾಜ ಸುಂಕೇಶ್ವರ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು