ಸೋಮವಾರ, ಮಾರ್ಚ್ 8, 2021
22 °C

ವೈದ್ಯಕೀಯ ಶುಲ್ಕ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟುಗಳ ಶುಲ್ಕ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ಆದೇಶವನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಜಿಲ್ಲಾ ಸಮಿತಿ ಖಂಡಿಸಿ, ಶುಲ್ಕ ಇಳಿಕೆಗೆ ಒತ್ತಾಯಿಸಿ‌ದೆ.

ಈ ಕುರಿತು ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ವ್ಯಾಪಾರೀಕರಣ ತೀವ್ರಗೊಳಿಸಿದೆ. ಇದರಿಂದ ಭವಿಷ್ಯದ ವೈದ್ಯರು ಜನರಿಂದ ದುಬಾರಿ ಹಣ ಪಡೆದು ಆರೋಗ್ಯ ಸೇವೆ ಮಾರಾಟ ಮಾಡುವ ವ್ಯವಸ್ಥೆ ನಿರ್ಮಾಣ ಆಗುತ್ತದೆ ಎಂದು ದೂರಿದ್ದಾರೆ.

ವಿದ್ಯಾರ್ಥಿ ವಿರೋಧಿ ಆದೇಶ 2020-21 ಸಾಲಿಗೆ ಅನ್ವಯವಾಗುವಂತೆ ಖಾಸಗಿ ಕೋಟಾದಡಿಯಲ್ಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟುಗಳಿಗೆ ಶೇ 30 ಅಂದರೆ ಈಗಿರುವ ₹8.7 ಲಕ್ಷದಿಂದ ₹11.5 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟಿನ ಶುಲ್ಕವನ್ನು ಶೇ 20 ಅಂದರೆ ₹5.8 ಲಕ್ಷದಿಂದ  ₹7.13 ಲಕ್ಷವರೆಗೆ ಹೆಚ್ಚಿಸಲಾಗಿದೆ.

ಈಗಾಗಲೇ ಸರ್ಕಾರವು ಸರ್ಕಾರಿ ಸೀಟುಗಳ ಶುಲ್ಕವನ್ನು 2019 ರಲ್ಲೇ ಶೇ 5 ಹೆಚ್ಚಿಸಿತ್ತು. ಈಗ ₹1.13 ಲಕ್ಷಕ್ಕೆ ಬಂದು ನಿಂತಿದೆ. ಇದೇ ಸಂದರ್ಭದಲ್ಲಿ ರಾಜ್ಯದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳ ಶಿಷ್ಯ ವೇತನ ಇತರೆ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಿದೆ. ಅಲ್ಲದೇ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣದ ಶುಲ್ಕಗಳನ್ನು ಭರಿಸಲು ಶಿಕ್ಷಣದ ಸಾಲುಗಳನ್ನು ಪಡೆದುಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ಸಮೂಹದಿಂದ ರಾಜ್ಯದಾದ್ಯಂತ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಾಳ, ಜುನೈದ್ ಮರ್ಚೇಡ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.