ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯ ಸಂಕಲ್ಪ ಯಾತ್ರೆ: ಸಿಂಧನೂರಿನಲ್ಲಿ ಭರ್ಜರಿ ರೋಡ್ ಶೋ

ಸಿಂಧನೂರಿಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಭರ್ಜರಿ ರೋಡ್ ಶೋ
Last Updated 12 ಮಾರ್ಚ್ 2023, 7:42 IST
ಅಕ್ಷರ ಗಾತ್ರ

ಸಿಂಧನೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಶನಿವಾರ ಸಿಂಧನೂರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಭರ್ಜರಿ ರೋಡ್ ಶೋ ನಡೆಸಿದರು.

ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಯಾತ್ರೆಯು ಬಾಬು ಜಗಜೀವನರಾಂ ವೃತ್ತ ಬಸವೇಶ್ವರ ವೃತ್ತದ ಮೂಲಕ ಮಹಾತ್ಮಗಾಂಧಿ ವೃತ್ತಕ್ಕೆ ಆಗಮಿಸಿತು.

ಬಿ.ಎಸ್. ಯಡಿಯೂರಪ್ಪ ಮಾತನಾಡಿ ‘ನನ್ನ ಮೇಲೆ ಜನರು ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ಋಣಿಯಾಗಿದ್ದೇನೆ. ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 2 ಟಿಎಂಸಿ ನೀರು ಹರಿಸಿ, ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಬೆಳೆದ ಬೆಳೆಗಳನ್ನು ಸರ್ಕಾರ ರಕ್ಷಣೆ ಮಾಡಲಿದೆ. ಏಪ್ರಿಲ್ 10ರವೆರೆಗೂ ನಾಲೆಗೆ ನೀರು ಹರಿಸಲಾಗುವುದು. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದರು.

ಸಚಿವ ಬಿ.ಶ್ರೀರಾಮುಲು ಮಾತನಾಡಿ ‘ಈ ಭಾಗದ ರೈತರ ಹಿತದೃಷ್ಟಿಯಿಂದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ₹1 ಸಾವಿರ ಕೋಟಿ ಅನುದಾನ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ₹ 5 ಸಾವಿರ ಕೋಟಿ ಬಜೆಟ್‍ನಲ್ಲಿ ಮೀಸಲಿಟ್ಟಿದೆ. ಅಲ್ಲದೆ ರಾಯಚೂರಿನಲ್ಲಿ ವಿಮಾನ ನಿಲ್ದಾಣ, ಐಐಐಟಿ, ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಆದ್ದರಿಂದ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು. ಸಿಂಧನೂರಿನಲ್ಲಿ ಯಾರೇ ಅಭ್ಯರ್ಥಿ ಆಗಲಿ, ಒಗ್ಗಟ್ಟಿನಿಂದ ಗೆಲ್ಲಿಸಿ ಪಕ್ಷದ ಧ್ವಜ ಹಾರಿಸಬೇಕು’ ಎಂದರು.

ತದನಂತರ ರೋಡ್‌ ಶೋ ಸಾರ್ವಜನಿಕ ಆಸ್ಪತ್ರೆ ರಸ್ತೆ, ಕನಕದಾಸ ವೃತ್ತ, ರಾಣಿ ಚನ್ನಮ್ಮ ವೃತ್ತ, ಹಿರೇಹಳ್ಳ ಸೇತುವೆ, ಪಿಡಬ್ಲ್ಯುಡಿ ಕ್ಯಾಂಪಿನ ಅಂಬೇಡ್ಕರ್ ವೃತ್ತಕ್ಕೆ ತಲುಪಿತು. ರೋಡ್ ಶೋ ಉದ್ದಕ್ಕೂ ನಾಯಕರು ಯಾತ್ರೆ ವಾಹನದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ನೋಡುತ್ತಿದ್ದ ನಾಗರಿಕರತ್ತ ಕೈಮುಗಿದು ಆಶೀರ್ವಾದ ಕೋರಿದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಮಾಜಿ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಎಚ್.ಗಿರಿಗೌಡ, ವಿಜಯ ಸಂಕಲ್ಪ ಯಾತ್ರೆಯ ಸಹಸಂಚಾಲಕ ಅಮರ ನಾಥ ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮಾಜಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಅಮರೇಗೌಡ ವಿರುಪಾಪುರ, ಮುಖಂಡರಾದ ಕೆ.ಮರಿಯಪ್ಪ, ರಾಜೇಶ ಹಿರೇಮಠ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ್ ಆಚಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಜೆಪಿ ಜಿಲ್ಲಾ ಘಟಕದ ಸಂಘಟನಾ ಪ್ರಭಾರಿ ಶಶಿಕಲಾ ಟೆಂಗಳಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಕೆ.ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷ ನಿರುಪಾದೆಪ್ಪ ಜೋಳದರಾಶಿ ವಕೀಲ, ವೆಂಕನಗೌಡ ಮಲ್ಕಾಪುರ, ದೇವೇಂದ್ರಪ್ಪ ಯಾಪಲ ಪರ್ವಿ, ಕೆ.ವೆಂಕಟೇಶ, ಕೆ.ಹನುಮೇಶ, ನೀಲಮ್ಮ ಇದ್ದರು.

‘ಮಹಿಳೆಯರಿಗೆ ಪ್ರತಿ ತಿಂಗಳು ₹ 1 ಸಾವಿರ’

ರಾಜ್ಯ ಬಿಜೆಪಿ ಸರ್ಕಾರ ಜನಪರ, ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಬಡ ಮತ್ತು ರೈತ ಮಹಿಳೆಯರಿಗೆ ಪ್ರತಿ ತಿಂಗಳು ₹ 1 ಸಾವಿರ ನಗದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಖರೀದಿಗಾಗಿ 60 ಸಾವಿರ ರೈತರಿಗೆ ₹ 10 ಸಾವಿರ ಸಹಾಯಧನ, ₹ 180 ಕೋಟಿಯನ್ನು ರಾಜ್ಯ ಸರ್ಕಾರವೇ ರೈತರ ಜೀವ ವಿಮೆ ತುಂಬಲಿದೆ. ರೈತರು ಮರಣ ಹೊಂದಿದರೆ ತಲಾ ₹ 2 ಲಕ್ಷ ನೀಡಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿರುವ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ, ಕುರುಬರ ಹಟ್ಟಿಗಳಲ್ಲಿ ವಾಸಿಸುವ ಕುಟುಂಬಗಳಿಗೆ ಈಗಾಗಲೇ 50 ಸಾವಿರ ಹಕ್ಕುಪತ್ರಗಳನ್ನು ಕಲಬುರಗಿಯಲ್ಲಿ ವಿತರಿಸಲಾಗಿದೆ. ದಾವಣಗೆರೆಯಲ್ಲಿ ತಾಂಡಾದ ಕುಟುಂಬಗಳಿಗೆ 12 ಸಾವಿರ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುವುದು. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಿ ಶಕ್ತಿ ತುಂಬಲಾಗಿದೆ. ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆ, ವಿಮಾನ ನಿಲ್ದಾಣ, ಐಐಐಟಿ ಸ್ಥಾಪಿಸಲಾಗುತ್ತಿದೆ. ಈ ಎಲ್ಲ ಯೋಜನೆಗಳು ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಪಕ್ಷಕ್ಕೆ ಶ್ರೀರಕ್ಷೆಯಾಗಲಿವೆ’ ಎಂದು ತಿಳಿಸಿದರು.

‘ಸಮಿತಿಯಲ್ಲಿ ಚರ್ಚಿಸಿ ಪಟ್ಟಿ ಬಿಡುಗಡೆ’

‘ಯಾರಿಗೆ ಬಿಜೆಪಿ ಟಿಕೆಟ್ ಕಟ್ ಮಾಡುತ್ತೇನೆ ಅಂತ ನಾನು ಹೇಳಿಲ್ಲ. ಮೋದಿ, ಅಮಿತ್‍ಶಾ ಒಳಗೊಂಡು ಚುನಾವಣಾ ಸಮಿತಿಯ ಸಭೆಯಲ್ಲಿ ಚರ್ಚಿಸಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಗೆಲ್ಲುವ ಅಭ್ಯರ್ಥಿಗಳಿಗೆ ಚುನಾವಣಾ ಕೆಲಸ ಮಾಡುವಂತೆ ಸೂಚಿಸಲಾಗಿದೆ’ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಧ್ರುವನಾರಾಯಣ ನಿಧನ ನೋವು ತಂದಿದೆ’

‘ಕಾಂಗ್ರೆಸ್ ಪಕ್ಷದ ಧ್ರುವನಾರಾಯಣ ಅವರು ಅಕಾಲಿಕವಾಗಿ ನಿಧನರಾಗಿರುವುದು ನೋವು ತಂದಿದೆ. ಅವರು ಪ್ರಾಮಾಣಿಕ, ಕ್ರಿಯಾಶೀಲ ಮತ್ತು ಪಕ್ಷನಿಷ್ಠರಾಗಿದ್ದರು. ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ’ ಎಂದು ಯಡಿಯೂರಪ್ಪ ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT