ಬುಧವಾರ, ಜೂನ್ 29, 2022
26 °C
ಕನ್ನಾಳ- ನಾಗಲಾಪುರ ಸಂಪರ್ಕ ಕಡಿತ

ತುಂಬಿ ಹರಿಯುತ್ತಿರುವ ಹಳ್ಳ: ಮಸ್ಕಿ ಜಲಾಶಯದಿಂದ ನೀರು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ತಾಲ್ಲೂಕಿನ ಮಾರಲದಿನ್ನಿ ಸಮೀಪದ 0.5 ಟಿಎಂಸಿ (29 ಅಡಿ ನೀರು ಸಂಗ್ರಹ) ಸಾಮಾರ್ಥ್ಯದ ಮಸ್ಕಿ ಜಲಾಶಯ ಭರ್ತಿಯಾಗಿದೆ. ಜಲಾಶಯದ ಎರಡು ಗೇಟ್ ಗಳ ಮೂಲಕ 500 ಕ್ಯೂಸೆಕ್ ನೀರನ್ನು ಹಿರೇ ಹಳ್ಳಕ್ಕೆ ಬಿಡಲಾಗುತ್ತಿದೆ. ಬರಿದಾಗಿದ್ದ ಜಲಾಶಯವು ಒಂದೇ ದಿನದಲ್ಲಿ ಭರ್ತಿಯಾಗಿದೆ.

ಹಳ್ಳದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿರುವ ಕಾರಣ ಹಳ್ಳದ ದಂಡೆಯ ಗ್ರಾಮಸ್ಥರು ಹಳ್ಳದಲ್ಲಿ ಇಳಿಯಬಾರದು ಎಂದು ತಾಲ್ಲೂಕು ಆಡಳಿತ ಮತ್ತು ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ.

‘ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಗುರುವಾರ ರಾತ್ರಿ ವೇಳೆಗೆ 25 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಶುಕ್ರವಾರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನೀರಿನ ಒಳ ಹರಿವು ಹೆಚ್ಚಿರುವ ಕಾರಣ ಜಲಾಶಯದ ಗೇಟ್ ಗಳ ಮೂಲಕ ಹಳ್ಳಕ್ಕೆ ನೀರು ಬಿಡಲಾಗಿದೆ. ಇದರ ಕುರಿತು ತಾಲ್ಲೂಕು ಆಡಳಿತ ಅಲ್ಲದೇ ಹಳ್ಳದ ವ್ಯಾಪ್ತಿಯ ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಜಲಾಶಯದ ಎಂಜನಿಯರ್ ದಾವುದ್ ತಿಳಿಸಿದ್ದಾರೆ.

ಬಿಡದ ಮಳೆ: ಶುಕ್ರವಾರ ಬೆಳಿಗ್ಗೆಯಿಂದ ಮಸ್ಕಿ ಸೇರಿ ತಾಲ್ಲೂಕಿನಾದ್ಯಂತ ಮಳೆ ಸುರಿಯತೊಡಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ಜನರು ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಪರ್ಕ ಕಡಿತ: ನಾಗಲಾಪೂರ ಕನ್ನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಈ ಮಾರ್ಗದ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಈ ಗ್ರಾಮಗಳ ಸಾರ್ವಜನಿಕರು ಪರದಾಡುವಂತಾಗಿದೆ.

ಪಟ್ಟಣದ ವಾರ್ಡ್‌ಗಳ ರಸ್ತೆಗಳು ಹಾಗೂ ಚರಂಡಿಗಳು ತುಂಬಿ ಹರಿಯುತ್ತಿವೆ. ಸೋಮನಾಥ ನಗರ, ವಾಲ್ಮೀಕಿ ನಗರ, ಗಾಂಧಿ ನಗರದ ಪ್ರಮುಖ ಬಡಾವಣೆಗಳು, ರಾಮಕೃಷ್ಣ ಕಾಲೂನಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

‘ತಾಲ್ಲೂಕಿನಲ್ಲಿ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಇನ್ನೆರಡು ದಿನ ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದ್ದು, ಸಾರ್ವಜನಿಕರು ಜಾಗ್ರತೆಯಿಂದ ಇರಬೇಕು’ ಎಂದು ತಹಶೀಲ್ದಾರ್ ಕವಿತಾ. ಆರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು