ಶುಕ್ರವಾರ, ನವೆಂಬರ್ 22, 2019
20 °C
ವಿಜಯಪುರದಿಂದಲೇ ಕಚೇರಿಯ ಕೆಲಸ ನಿರ್ವಹಿಸುವ ಅಧಿಕಾರಿ

ಸೊರಗಿದ ಜಲ ಸಂಪನ್ಮೂಲ ಕಚೇರಿ!

Published:
Updated:
Prajavani

ಕವಿತಾಳ: ಮುಖ್ಯ ಕಾಲುವೆ, ಉಪ ಕಾಲುವೆಗಳ ದುರಸ್ತಿ ಮತ್ತು ವಾರ್ಷಿಕ ನಿರ್ವಹಣೆಗೆ ಸರ್ಕಾರದಿಂದ ‘ಸಂಪನ್ಮೂಲ’ ಹರಿದು ಬರುತ್ತಿದ್ದಾಗ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಸದಾ ಚಟುವಟಿಕೆಯ ಕೇಂದ್ರವಾಗಿದ್ದ ಪಟ್ಟಣದ ಜಲ ಸಂಪನ್ಮೂಲ ಕಚೇರಿ ಇದೀಗ ಪಾಳು ಬಿದ್ದಿದೆ.

ಕಾಂಕ್ರೀಟ್‍ ಬಳಸಿ ಕಾಲುವೆಗಳನ್ನು ಶಾಶ್ವತ ದುರಸ್ತಿ ಮಾಡಿದ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳಿಂದ ಯಾವುದೇ ದುರಸ್ತಿ ಕಾಮಗಾರಿ ನಡೆಯುತ್ತಿಲ್ಲ. ಸಿಬ್ಬಂದಿ ವೇತನ, ವಾಹನಗಳು ಮತ್ತು ನೀರಿನ ನಿರ್ವಹಣೆ ಹೊರತಾಗಿ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಇಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ಪ್ರಸ್ತುತ ಇಬ್ಬರು ಸಹಾಯಕ ಎಂಜಿನಿಯರ್ 7 ಜನ ಕಾಯಂ ಸಿಬ್ಬಂದಿ ಸೇರಿದಂತೆ 56 ಜನ ಹಂಗಾಮಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ವರ್ಗಾವಣೆಯಾಗಿ ಬಂದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ಬಂದಿದ್ದು ಅಪರೂಪ. ಅವರ ಸ್ವಂತ ಊರು ವಿಜಯಪುರ. ಅಲ್ಲಿದ್ದುಕೊಂಡೆ ಕಚೇರಿಯ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.

ಸಿಬ್ಬಂದಿಯೊಬ್ಬರು ಪ್ರತಿ ತಿಂಗಳು ವಿಜಯಪುರಕ್ಕೆ ಹೋಗಿ ಕಡತಗಳಿಗೆ ಅಧಿಕಾರಿಯ ಸಹಿ ಮಾಡಿಸಿಕೊಂಡು ಬರುತ್ತಾರೆ ಎನ್ನಲಾಗಿದೆ.

ಇಲ್ಲಿನ ದ್ವಿತೀಯ ದರ್ಜೆ ಸಹಾಯಕ ಸಿಂಧನೂರಿನಲ್ಲಿ ವಾಸಿಸುತ್ತಿದ್ದು ಕಚೇರಿಗೆ ಬಾರದ ಕಾರಣ ಸಿಂಧನೂರಿಗೆ ಹೋಗಿ ಕಡತಗಳಿಗೆ ಸಹಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹೆಸರು ಹೇಳಲು ಬಯಸದ ಸಿಬ್ಬಂದಿ ತಿಳಿಸಿದ್ದಾರೆ.

‘ಹಿರಿಯ ಅಧಿಕಾರಿಗಳು ಮತ್ತು ಕಚೇರಿಯ ಸಿಬ್ಬಂದಿ ಜೊತೆ ಮೊಬೈಲ್‍ ಸಂಪರ್ಕದಲ್ಲಿದ್ದು ನೀರು ನಿರ್ವಹಣೆ ಮತ್ತಿತರ ಕೆಲಸಗಳಲ್ಲಿ ಲೋಪ ಆಗದಂತೆ ಎಇಇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಗಾಗ ಕಚೇರಿಗೂ ಬರುತ್ತಿರುತ್ತಾರೆ’ ಎಂದು ಸಿಬ್ಬಂದಿಯೊಬ್ಬರು ಅಧಿಕಾರಿಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಶಾಶ್ವತ ದುರಸ್ತಿ ಕಾಮಗಾರಿ ಸಮಯದಲ್ಲಿ ಕಾಲುವೆಯಿಂದ ತೆಗೆದ ಸಿಮೆಂಟ್‍ ಕಲ್ಲುಗಳನ್ನು ಕಚೇರಿ ಆವರಣದಲ್ಲಿ ಗುಡ್ಡೆ ಹಾಕಲಾಗಿದ್ದು, ಇವುಗಳಲ್ಲಿ ಹಾವು ಚೇಳುಗಳ ಹಾವಳಿ ಹೆಚ್ಚಾಗಿದೆ. ಸಂಜೆಯಾಗುತ್ತಲೇ ಬಾಗಿಲು ಮುಚ್ಚಿಕೊಂಡು ಮನೆ ಸೇರುವ ಸಿಬ್ಬಂದಿ ಜೀವ ಭಯದಲ್ಲಿ ವಾಸಿಸುತ್ತಿದ್ದಾರೆ.

ಕರ್ನಾಟಕ ನೀರಾವರಿ ನಿಗಮವಾಗಿ ದಶಕಗಳು ಕಳೆದರೂ ಕಚೇರಿಯ ನಾಮ ಫಲಕ ಬದಲಾಯಿಸಿಲ್ಲ.

ಬೇರೆಡೆ ಈಗಾಗಲೇ ಸಿಮೆಂಟ್‌ ಬಂಡೆಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಿ ಇಲಾಖೆಗೆ ಹಣ ಜಮಾ ಮಾಡಲಾಗಿದೆ. ಆದರೆ, ಇಲ್ಲಿನ ಅಧಿಕಾರಿಗಳ ನಿರ್ಲಕ್ಷದಿಂದ ಇಲ್ಲಿ ಬಂಡೆಗಳು ಹಾಗೇ ಬಿದ್ದಿವೆ. 20 ತಿಂಗಳಿಂದ ಹಂಗಾಮಿ ಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲ. ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದು ಕಿಸಾನ್‍ ಸಭಾ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ.ಮೆಹಬೂಬ್‍ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)