ರಾಯಚೂರು: ಮತದಾನದಲ್ಲಿ ಹಿಂದೆ ಬಿದ್ದ ಮಹಿಳೆಯರು!

ಶನಿವಾರ, ಮೇ 25, 2019
33 °C
ರಾಯಚೂರು ಲೋಕಸಭೆ ಕ್ಷೇತ್ರ: ಶೇ 57.91 ರಷ್ಟು ಮತದಾನ

ರಾಯಚೂರು: ಮತದಾನದಲ್ಲಿ ಹಿಂದೆ ಬಿದ್ದ ಮಹಿಳೆಯರು!

Published:
Updated:
Prajavani

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಶೇ 1.69 ರಷ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮತದಾನ ಮಾಡುವಲ್ಲಿ ಮಹಿಳಾ ಮತದಾರರು ಹಿಂದೆ ಉಳಿದಿದ್ದಾರೆ!

9,71,805 ಮಹಿಳಾ ಮತದಾರರ ಪೈಕಿ 5,54,265 (ಶೇ 75.03) ಮತದಾರರು ಮತ ಚಲಾಯಿಸಿದ್ದಾರೆ. ಲೋಕಸಭೆ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಸುರಪುರ, ಶಹಾಪುರ ಹೊರತುಪಿಡಿಸಿ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತಲೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮತದಾನ ಕೂಡಾ ಇದೇ ಅನುಪಾತದಲ್ಲಿ ನಡೆಯಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಮತದಾನ ಪಟ್ಟಿಯಲ್ಲಿರುವ ಮಹಿಳೆಯರಲ್ಲಿ ಅನೇಕರು ಮತದಾನ ಮಾಡುವುದಕ್ಕೆ ನಿರಾಸಕ್ತಿ ತೋರಿಸಿದ್ದಾರೆ.

ಅತಿಹೆಚ್ಚು ಮಹಿಳಾ ಮತದಾರರು ಇರುವ ಮಾನ್ವಿ ತಾಲ್ಲೂಕಿನಲ್ಲಿ ಶೇ 52.68 ಮಹಿಳೆಯರು ಮತ ಚಲಾಯಿಸಿದ್ದಾರೆ. ಆದರೆ, ಪುರುಷರ ಮತದಾನವು ಶೇ 55.98 ರಷ್ಟು ದಾಖಲಾಗಿದೆ. ಯಾದಗಿರಿಯಲ್ಲಿ ಪುರುಷ ಮತದಾರರು ಶೇ 57.74 ರಷ್ಟು ಮತ ಚಲಾವಣೆ ಮಾಡಿದ್ದಾರೆ. ಆದರೆ ಮಹಿಳೆಯರು ಶೇ 55.22 ರಷ್ಟು ಮತದಾನ ಮಾಡುವ ಮೂಲಕ ಅನೇಕರು ಮತ ಚಲಾಯಿಸದೆ ನಿರಾಸಕ್ತಿ ತೋರಿದ್ದಾರೆ.

ರಾಯಚೂರು ಗ್ರಾಮೀಣ ಕ್ಷೇತ್ರವೊಂದರಲ್ಲಿ ಮಾತ್ರ ಅತಿಹೆಚ್ಚು ಮಹಿಳೆಯರು ಮತದಾನ ಹಕ್ಕು ಚಲಾಯಿಸಿ ಉತ್ಸಾಹ ಪ್ರದರ್ಶಿಸಿದ್ದಾರೆ. 1,16,186 ಪುರುಷ ಮತದಾರರ ಪೈಕಿ ಶೇ 61.35 ರಷ್ಟು ಮತದಾನ ಮಾಡಿದ್ದರೆ, 1,21,118 ಮಹಿಳಾ ಮತದಾರರಲ್ಲಿ 72,272 ಮಹಿಳೆಯರು ಮತ ಚಲಾವಣೆ ಮಾಡಿದ್ದಾರೆ. ಶೇಕಡಾವಾರು ಪ್ರಮಾಣದಲ್ಲಿ ಮತದಾನ ಕಡಿಮೆ ಮಾಡಿದ್ದರೂ, ಸಂಖ್ಯಾತ್ಮಕವಾಗಿ ಪುರುಷರಿಗಿಂತಲೂ ಅತಿಹೆಚ್ಚು ಮಹಿಳೆಯರು ಮತದಾನ ಮಾಡಿರುವುದು ವಿಶೇಷ.

ತೃತೀಯ ಲಿಂಗಿಗಳ ನಿರಾಸಕ್ತಿ:

ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 367 ತೃತೀಯ ಲಿಂಗಿಗಿಗಳು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದರೂ ಮತದಾನ ಮಾಡಿದ್ದು ಕೇವಲ 14 ಮಾತ್ರ. ಅತಿಹೆಚ್ಚು ತೃತೀಯ ಲಿಂಗಿಗಳು ಇರುವ ರಾಯಚೂರು ಗ್ರಾಮೀಣ ಮತ್ತು ರಾಯಚೂರು ನಗರದಲ್ಲಿ ಕೇವಲ 6 ಮಂದಿ ಮತದಾನ ಮಾಡಿದ್ದಾರೆ.

ಸ್ವೀಪ್‌ನಿಂದ ಜಾಗೃತಿ:

ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದಲೂ ಮತದಾರರ ಜಾಗೃತಿಗಾಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರಿಂದ ಮತದಾನ ಹೆಚ್ಚಳವಾಗುವ ನಿರೀಕ್ಷೆ ಇತ್ತು. ಆದರೆ, ಕಳೆದ ಲೋಕಸಭೆ ಚುನಾವಣೆಗಿಂತಲೂ ಮತದಾನ ಕಡಿಮೆಯಾಗಿದೆ. ತೃತೀಯ ಲಿಂಗಿಗಳ ಮತದಾನ ಜಾಗೃತಿಗಾಗಿ ವಿಶೇಷ ಅಭಿಯಾನ ಕೂಡಾ ಹಮ್ಮಿಕೊಳ್ಳಲಾಗಿತ್ತು. ಕನಿಷ್ಠ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಮತದಾನ ಮಾಡಿಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !