ಬುಧವಾರ, ಜನವರಿ 29, 2020
25 °C

ನಿಷ್ಠೆಯಿಂದ ಹೊಲದಲ್ಲಿ ದುಡಿಯಿರಿ: ಸಿದ್ದಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಉದ್ಯೋಗಕ್ಕಾಗಿ ಮಹಾನಗರಗಳಿಗೆ ಹೋಗುವುದು ಬೇಡ. ನಿಷ್ಠೆಯಿಂದ ಹೊಲದಲ್ಲಿ ದುಡಿಯಿರಿ ಭೂತಾಯಿ ತಕ್ಕ ಪ್ರತಿಫಲ ಕೊಡುತ್ತಾಳೆ ಎಂದು ಬಾಗಲಕೋಟೆ ಜಿಲ್ಲೆಯ ಬೀಳಗಿಯ ಪ್ರಗತಿಪರ ರೈತ ಸಿದ್ದಪ್ಪ ಬಿದರಿ ಹೇಳಿದರು.

ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಕೃಷಿ ಮೇಳದ ಮೂರನೇ ದಿನ ಸೋಮವಾರ ’ರೈತರಿಂದ ರೈತರಿಗಾಗಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಯುವಕರು ಉತ್ಕೃಷ್ಠ ಜಮೀನು, ನೀರು, ಎತ್ತು ಎಲ್ಲವನ್ನು ಇಟ್ಟುಕೊಂಡು ಕೃಷಿಯಲ್ಲಿ ತೊಡಗದೇ ಜಮೀನು ಮಾರಿ ಪಟ್ಟಣಕ್ಕೆ ಸೇರಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಗ್ರಾಮದ ಚಹಾ ಅಂಗಡಿಗಳಲ್ಲಿ ಕುಳಿತು ಹರಟೆಹೊಡೆದು, ಮೊಬೈಲ್ ನೋಡಿಕೊಂಡು ಕಾಲ ಹರಣ ಮಾಡುತ್ತಿದ್ದಾರೆ. ಹಿಂದೆ ರೈತರು ಬೆಳಿಗ್ಗೆಯೇ ಎದ್ದು ಎತ್ತುಗಳಿಗೆ ಗಳೆ ಕಟ್ಟಿ ಕೂರಿಗೆ ಗಟ್ಟಲೇ ಹೊಲದಲ್ಲಿ ಗಳೆ ಹೊಡೆಯುತ್ತಿದ್ದರು. ಪ್ರತಿನಿತ್ಯ ಮೈ ದಂಡಿಸಿ ಬೆವರು ಸುರಿಸುತ್ತಿದ್ದರು. ಆದರೆ, ಈಗ ಯಂತ್ರಗಳು ಬಂದಾಗಿನಿಂದ ರೈತರು ಸೋಮಾರಿಗಳಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ಕಾರ ರೈತರಿಗೆ ಬೀಜ, ಗೊಬ್ಬರ, ನೀರು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ಕೊಟ್ಟರೂ ಆಸಕ್ತಿ ವಹಿಸಿ ದುಡಿಯದೇ ಸಾಲ ಮಾಡಿಕೊಳ್ಳುತ್ತಿದ್ದಾರೆ. ಯಾವ ಸರ್ಕಾರವು ರೈತರಿಗೆ ಸಹಾಯ ಮಾಡಲಿಲ್ಲ ಎಂದು ದೂರುವುದು ತಪ್ಪು. ರೈತರ ಕೈ ಯಾವಾಗಲೂ ಕೊಡುತ್ತದೆಯೇ ಹೊರತು ಇನ್ನೊಬ್ಬರಿಂದ ಅಪೇಕ್ಷಿಸುವುದಿಲ್ಲ ಎಂದು ತಿಳಿಸಿದರು.

ಕುಷ್ಟಗಿ ತಾಲ್ಲೂಕಿನ ಕೃಷಿಕ ವಿಜ್ಞಾನಿ ದೇವಿಂದ್ರಪ್ಪ ಬಳ್ಳೂಟಗಿ ಮಾತನಾಡಿ, ಒಕ್ಕಲುತನದಲ್ಲಿ ಲಾಭ ಇಲ್ಲ ಎನ್ನುವ ಮನೋಭಾವ ಬೇಡ ಎಂದರು.

ಕಡಿಮೆ ನೀರು ಬಳಸಿಕೊಂಡು ಶ್ರೀಗಂಧ ಮರ ಬೆಳೆಸಿದ್ದೇನೆ. ಅವುಗಳ ನಡುವೆ ಮಾವು, ಸಪೋಟಾ ಕೂಡ ಹಚ್ಚಿದ್ದೇವೆ. ಆರು ವರ್ಷದಿಂದ ಒಮ್ಮೆಯೂ ರಾಸಾಯನಿಕ ಬಳಸಿಲ್ಲ. ಕಳೆದ ಬೇಸಿಗೆಯಲ್ಲಿ ಮಾವು ಇಳುವರಿ ಕುಸಿತವಾದರೂ, ತೋಟದಲ್ಲಿ ಉತ್ತಮ ಇಳುವರಿ ಬಂದಿದೆ ಎಂದು ತಿಳಿಸಿದರು.

ರಾಯಚೂರು ನಗರದ ಪರಿಸರ ಪ್ರೇಮಿ ಈರಣ್ಣ ಕೋಸಗಿ ಮಾತನಾಡಿ, ಗಿಡಗಳು ಬೆಳಸದಿದ್ದರೇ ಶುದ್ಧ ಗಾಳಿ
ಸಿಗುವುದಿಲ್ಲ. ಮನೆಯ ಮುಂದೆ ಸಸಿ ನೆಡುವಂತೆ ತಿಳಿಸಿದರೆ, ಮನೆಯ ಬುನಾದಿಗೆ ಬೇರು ಹೋಗಿ ಮನೆ ಕುಸಿದು ಬೀಳುತ್ತದೆ ಎಂಬ ತಪ್ಪು ಕಲ್ಪನೆಯನ್ನು ಜನರು ಬಿಡಬೇಕು. ಪ್ರತಿ ಮನೆಗೆ ಗಿಡಗಳು ನೆಟ್ಟು ಪೋಷಿಸಿದರೆ, ಆಗ ಪಟ್ಟಣವೇ ಅರಣ್ಯವಾಗುತ್ತದೆ ಎಂದರು.

ಗ್ರಾಮೀಣ ಮಟ್ಟದಲ್ಲಿ ಮರಗಳ ನೆರಳಿನಿಂದ ಬೆಳೆ ಚೆನ್ನಾಗಿ ಬೆಳೆಯುವುದಿಲ್ಲ ಎಂದು ರೈತರು ಮರಗಳನ್ನು ಕಡಿಯುತ್ತಿದ್ಧಾರೆ. ಅದಕ್ಕೆ, ಮಳೆಯ ಪ್ರಮಾಣ ಕಡಿಮೆಯಾಗಿದೆ. ಪ್ರತಿಯೊಬ್ಬ ರೈತರ ಹೊಲಗಳಲ್ಲಿಯೂ ಸಸಿ ಬೆಳೆಸಬೇಕು ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ.ಎಸ್.ಎ.ಪಾಟೀಲ ಮಾತನಾಡಿ, ಧಾರವಾಡದಲ್ಲಿ ಸೇವೆ ಸಲ್ಲಿಸುವಾಗ ರೈತರು ಎಲ್ಲರಿಗೂ ಒಟ್ಟಿಗೆ ಸೇರುವಂತೆ ರಾಜ್ಯದಲ್ಲಿಯೇ ಮೊದಲು ಕೃಷಿ ಮೇಳೆ ಆರಂಭಿಸಿದೆ. ಅನೇಕ ರೈತರಿಗೆ ಕೃಷಿ ವ್ಯವಸಾಯದ ಜ್ಞಾನಕ್ಕಾಗಿ ಇಂತಹ ಮೇಳ ಆರಂಭಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸಿದ್ದ ಪ್ರಗತಿ ಪರ ರೈತರು ನೀಡಿದ ಸಲಹೆಗಳನ್ನು ಎಲ್ಲಾ ರೈತರು ತಮ್ಮ ಕೃಷಿ ಪದ್ದತಿಯಲ್ಲಿ ಅನುಸರಿಸುವಂತೆ ತಿಳಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅದ್ಯಕ್ಷತೆ ವಹಿಸಿದ್ದರು. ಕುಲಸಚಿವ ಎಮ್.ಜಿ.ಪಾಟೀಲ, ನಬಾರ್ಡ್ ಡಿಡಿಎಮ್ ಸತೀಶ, ಕಲಬುರ್ಗಿ ಶಿಕ್ಷಣ ನಿರ್ದೇಶಕ ಎಸ್.ಎಸ್.ಪಾಟೀಲ, ಕೃವಿವಿಯ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ ಹಾಗೂ ವೀರನಗೌಡ ಪರಸರೆಡ್ಡಿ,ಶಿಕ್ಷಣ ನಿರ್ದೇಶಕ ಡಾ.ಎಸ್.ಮೇಟಿ, ವಿಸ್ತರಣಾ ನಿರ್ದೇಶಕ ಬಿ.ಎನ್.ಚಿತ್ತಾಪುರ, ಸಂಶೋಧನಾ ನಿರ್ದೇಶಕ ಬಿ.ಕೆ.ದೇಸಾಯಿ, ಸ್ನಾತಕೋತ್ತರ ವಿಭಾಗದ ಶಿಕ್ಷಣ ನಿರ್ದೇಶಕ ಐ.ಶಂಕರೇಗೌಡ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು