ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ರಾಯಚೂರು ಬಂದ್ ಪೂರ್ಣ

Last Updated 7 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ರಾಯಚೂರು: ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಖಂಡಿಸಿ ನೀಡಿದ ಕರ್ನಾಟಕ ಬಂದ್ ಕರೆಯ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ( ಶಿವರಾಮೇಗೌಡ ಬಣ) ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು, ಜನಪರ, ಸಾಮಾಜಿಕ ಸಂಘಟನೆಗಳು ಶನಿವಾರ ನೀಡಿದ್ದ `ರಾಯಚೂರು ಬಂದ್~ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ಶಾಲಾ-ಕಾಲೇಜುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲ ಸರ್ಕಾರಿ ಕಚೇರಿಗಳು ಬಂದ್ ಆಗಿದ್ದವು. ಬ್ಯಾಂಕ್, ತರಕಾರಿ ಮಾರುಕಟ್ಟೆ, ಕೃಷಿ ಉತ್ಪನ್ನ ಮಾರುಕಟ್ಟೆ ಬಂದ್ ಆಗಿದ್ದವು.ಬೆಳಿಗ್ಗೆ 8ರಿಂದ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಪರ ಊರಿನಿಂದ ಒಳ ಬರುವ ಮತ್ತು ಹೊರ ಹೋಗುವ ಬಸ್ ಕೇಂದ್ರ ಬಸ್ ನಿಲ್ದಾಣ, ಡಿಪೋಗಳಲ್ಲಿ ನಿಲುಗಡೆಗೊಂಡವು.

ದೂರ ಊರಿಗೆ ಹೊಗಬೇಕಾದ ಪ್ರಯಾಣಿಕರು, ಬಂದ್ ಇರುವುದು ಗೊತ್ತಿಲ್ಲದೇ ನಗರಕ್ಕೆ ಧಾವಿಸಿದ ಗ್ರಾಮೀಣ ಪ್ರದೇಶದ ಜನತೆ ಬಸ್ ನಿಲ್ದಾಣದಲ್ಲಿ ಕಾಲ ಕಳೆದರು. ಸಮೀಪದ ಗ್ರಾಮದ ಜನ ಖಾಸಗಿ ವಾಹನ, ಟೆಂಪೋ, ಟಂ ಟಂ ವಾಹನಗಳಲ್ಲಿ ಊರಿಗೆ ತೆರಳಿದರು.

ನಗರದ ಹೃದಯಭಾಗವಾದ ಸೂಪರ್ ಮಾರುಕಟ್ಟೆ, ಹರಿಹರ ರಸ್ತೆ, ಬಟ್ಟೆ ಬಜಾರ, ಸರಾಫ್ ಬಜಾರನ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಸೂಪರ್ ಮಾರ್ಕೆಟ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ನೇತೃತ್ವದಲ್ಲಿ ಮುಂಜಾನೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ವಿವಿಧ ಸಂಘಟನೆಗಳು ಪ್ರತಿಭಟನಾ ಧರಣಿ ನಡೆಸಿದವು.

ಕಾವೇರಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಮಂತ್ರಿಗಳು ತಮಿಳು ನಾಡಿಗೆ ನೀರು ಬಿಡಲು ಆದೇಶಿಸಿ ಕರ್ನಾಟಕಕ್ಕೆ ಮಾಡಿದ ಅನ್ಯಾಯವನ್ನು ಖಂಡಿಸಿದರು. ವಸ್ತು ಸ್ಥಿತಿ ಗಮನಿಸದೇ ತಮಿಳು ನಾಡಿಗೆ ನೀರು ಬಿಡಲು ಕೈಗೊಂಡ ನಿರ್ಧಾರ ಖಂಡನೀಯ.

ಈ ಧೋರಣೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ ವ್ಯಕ್ತವಾಗುತ್ತಿದ್ದರೂ ಸ್ಪಂದಿಸುತ್ತಿಲ್ಲ. ಕಾವೇರಿ ವಿಚಾರದಲ್ಲಿ ಇಡೀ ರಾಜ್ಯದ ಜನತೆ ಒಂದೇ. ಆ ಭಾಗ ಈ ಭಾಗ ಎಂಬ ಬೇಧ ಬೇಡ. ಕಾವೇರಿ ನದಿ ಪಾತ್ರದ ಜನತೆ ನಡೆಸುತ್ತಿರುವ ಹೋರಾಟಕ್ಕೆ ಈ ರೀತಿ ಬಂದ್ ಮಾಡುವ ಮೂಲಕ ಸಂಪೂರ್ಣ ಬೆಂಬಲವನ್ನು ಈ ಭಾಗದ ಜನತೆಯೂ ಕೊಟ್ಟಿದ್ದಾರೆ ಎಂದು ವಿವಿಧ ಸಂಘಟನೆ ಮುಖಂಡರು ತಮ್ಮ ಭಾಷಣದಲ್ಲಿ ಹೇಳಿದರು.

120 ವರ್ಷ ಹಳೆಯ ವಿವಾದ ಇದಾಗಿದ್ದು ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಮಳೆ ಕೊರತೆ ಇರಲಿ. ಇಲ್ಲದೇ ಇರಲಿ. ಶಾಶ್ವತವಾಗಿ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಪರಿಹಾರ ಸೂತ್ರ ರೂಪಿಸಬೇಕು.

ಅಕ್ಕಪಕ್ಕದ ರಾಜ್ಯಗಳು ಸಹೋದರತ್ವ,ಸಹಬಾಳ್ವೆಯಿಂದ ಬದುಕಲು ಈ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ನಗರ, ಜಿಲ್ಲೆಯ ವಿವಿಧ ತಾಲ್ಲೂಕಿನ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಬೈಕ್ ರ‌್ಯಾಲಿ, ಟ್ರ್ಯಾಕ್ಸ್‌ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ ನಡೆಸಿದರು. ನಗರದ ವ್ಯಾಪಾರಸ್ಥರು, ಸಾರ್ವಜನಿಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ( ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಜೈನ್ ಪ್ರತಿಭಟನೆ ನೇತೃತ್ವವಹಿಸಿದ್ದರು.

ಜಯ ಕರ್ನಾಟಕ ಸಂಘಟನೆ ಶಿವಕುಮಾರ ಯಾದವ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ  ಪಿ ಪ್ರಕಾಶ ವಕೀಲ, ಕನ್ನಡ ಚಳವಳಿಯ ಕೆ ಗೋವಿಂದರಾಜ್, ಕ್ರಾಂತಿಯೋಗಿ ಬಸವೇಶ್ವರ ಸಂಘದ ಅಧ್ಯಕ್ಷ ಕೆ. ರಾಜೇಶಕುಮಾರ, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಕೆ.ಎಂ ಮೈತ್ರಿಕರ್, ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ಅಧ್ಯಕ್ಷ ಅಂಬಣ್ಣ ಅರೋಲಿಕರ್, ದಲಿತ ಸಂಘರ್ಷ ಸಮಿತಿ ಕಾರ್ಮಿಕ ಘಟಕದ ಅಧ್ಯಕ್ಷ ಧರ್ಮರಾಜ, ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎನ್ ಮಹಾವೀರ, ಸಂಜೀವಿನಿ ಆಟೋ ಸಂಘದ ಅಧ್ಯಕ್ಷ ಪಿ ಅಮರೇಶ, ಆಜಾದ ಆಟೋ ಸಂಘದ ಅಧ್ಯಕ್ಷ ಬಾಷಾಖಾನ್,

ಕಲ್ಯಾಣ ಕರ್ನಾಟಕ ನವನಿರ್ಮಾಣ ವೇದಿಕೆಯ ಶಿವು ಪೋ.ಪಾ, ಕರವೇ ನಗರ ಅಧ್ಯಕ್ಷ ಖಲೀಲ ಪಾಷಾ, ಕರವೇ ಗ್ರಾಮಾಂತರ ಅಧ್ಯಕ್ಷ ಎಂ ಭೀಮಣ್ಣ, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾನಸಿಂಗ್ ಠಾಕೂರ್, ಕರವೇ ಗ್ರಾಮಾಂತರ ಘಟಕದ ಕಾರ್ಯಾಧ್ಯಕ್ಷ ಮಹೆಬೂಬ ಪಟೇಲ್, ಕನ್ನಡ ಅಭಿಮಾನಿಗಳ ಸಂಘದ ಜಿ.ಕೆ. ಗುರುರಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT