ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಖಾಸಬಾವಿ'ಗೆ ತಪ್ಪದ ದುಃಸ್ಥಿತಿ!

ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ
Last Updated 2 ಸೆಪ್ಟೆಂಬರ್ 2013, 8:21 IST
ಅಕ್ಷರ ಗಾತ್ರ

ರಾಯಚೂರು: ನಗರದ ಮಾವಿನ ಕೆರೆ ಪಕ್ಕ(ಆಮ್ ತಲಾಬ್) ಇರುವ ಐತಿಹಾಸಿಕ `ಖಾಸಬಾವಿ'ಯಲ್ಲಿ ಕೊಳಚೆ ನೀರು, ತ್ಯಾಜ್ಯ ವಸ್ತುಗಳು ತುಂಬಿದ್ದು, ಈ ಬಾವಿ ಪಕ್ಕ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ.

ವಿಪರ್ಯಾಸವೆಂದರೆ ಪ್ರತಿ ವರ್ಷ `ಗಣೇಶ ಹಬ್ಬ'ದ ಸಮಯದಲ್ಲಿ ನಗರದ ವಿವಿಧ ಬಡಾವಣೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಇದೇ ಬಾವಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ವರ್ಷವೂ ಗಣೇಶ ಹಬ್ಬ ಬಂದೇ ಬಿಟ್ಟಿದೆ. ಒಂದು ವಾರ ಮಾತ್ರ ಬಾಕಿ ಇದೆ. ಆದರೆ, ಖಾಸ ಬಾವಿ ಕಸ, ಕೊಳಚೆ ನೀರಿನಿಂದ ತುಂಬಿಕೊಂಡು ಹಾಗೆ ಇದೆ. ಇನ್ನೂ ಈ ಬಾವಿ ಸ್ವಚ್ಛತೆ ಬಗ್ಗೆ ನಗರಸಭೆಯಾಗಲಿ. ಜಿಲ್ಲಾಡಳಿತವಾಗಲಿ ಗಮನ ಹರಿಸಿಲ್ಲ.

ಈಗ್ಗೆ ಕೆಲ ವರ್ಷಗಳ ಹಿಂದೆ ಈ `ಬಾವಿ' ಕೊಳಚೆ ನೀರು, ಕಸಕಡ್ಡಿ, ಸತ್ತ ಪ್ರಾಣಿಗಳಿಂದ ತುಂಬಿ ಮುಚ್ಚಿಯೇ ಹೋಗುವ ಸ್ಥಿತಿಯಲ್ಲಿತ್ತು. ಕೆಲ ಸಂಘಟನೆಗಳ, ಸಾರ್ವಜನಿಕರು ಈ ಐತಿಹಾಸಿಕ ಬಾವಿ ಸಂರಕ್ಷಣೆಗೆ ಧ್ವನಿ ಎತ್ತಿದರು. ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಎಡತಾಕಿ ಒತ್ತಾಯ ಮಾಡಿದರು.

ಅದರೆ ಪರಿಣಾಮ ಖಾಸಬಾವಿ ಅಭಿವೃದ್ಧಿ ಮತ್ತು ಸಂರಕ್ಷಣೆಗೆ 1 ಕೋಟಿ ಅನುದಾನ ಹರಿದು ಬಂದಿತು. ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಆಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಆಗಿದ್ದ ಸಂದರ್ಭದಲ್ಲಿ ನಗರಕ್ಕೆ ಭೇಟಿ ನೀಡಿದ್ದರು. ಮಾವಿನಕೆರೆ ದಂಡೆಯಲ್ಲಿ ವಾಯುವಿಹಾರ ಮುಗಿಸಿ ಹೋಗುವ ಸಂದರ್ಭದಲ್ಲಿ ಈ ಬಾವಿ ಸಂರಕ್ಷಣೆಗೆ ಕೆಲವರು ಮನವಿ ಮಾಡಿದಾಗ ವೀಕ್ಷಣೆ ಮಾಡಿದ್ದರು.ಅಲ್ಲದೇ ಮುಖ್ಯಮಂತ್ರಿ ನಿಧಿಯಡಿ 50 ಲಕ್ಷ ಮಂಜೂರು ಮಾಡಿದ್ದರು.

ಹಾಗೆಯೇ, ಆಗಿನ ವಿಧಾನ ಪರಿಷತ್ ಸದಸ್ಯರು ಹಾಗೂ ಈಗಿನ ರಾಜ್ಯ ಹಿಂದುಳಿದ ವರ್ಗಗಗಳ ಆಯೋಗದ ಅಧ್ಯಕ್ಷ ಎನ್ ಶಂಕರಪ್ಪ ಅವರು 49 ಲಕ್ಷ ಅನುದಾನ ದೊರಕಿಸಿದ್ದರು. ಹೀಗೆ ಒಂದು ಕೋಟಿ ಮೊತ್ತದಲ್ಲಿ ಈ ಬಾವಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡಿದ್ದರೂ ಕೋಟಿ ಮೊತ್ತದ ಕಾಮಗಾರಿ, ಸಂರಕ್ಷಣೆ ಪ್ರಯತ್ನ ಅಲ್ಲಿ ಕಾಣುತ್ತಿಲ್ಲ. ಮೊದಲಿದ್ದ ಸ್ಥಿತಿಯೇ ಈಗಲೂ ಅಲ್ಲಿದೆ. ಸುತ್ತಮುತ್ತಲಿನ ಪ್ರದೇಶದಿಂದ ಕೊಳಚೆ ನೀರು ಬಾವಿಗೆ ಬಂದು ಸೇರುತ್ತಿದೆ. ಬಾವಿ ಸುತ್ತಲೂ ಶೌಚಾಲಯ, ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ.

ಹಿಂದೂಪರ ಸಂಘಟನೆಗಳೂ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ಕೆಲ ಸಾರ್ವಜನಿಕರು ಈ ಬಾವಿ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ವರ್ಷದುದ್ದಕ್ಕೂ ಆಗಾಗ ಮನವಿ ಸಲ್ಲಿಸುತ್ತಲೇ ಇದ್ದು, ಆಡಳಿತ ವರ್ಗ ಮಾತ್ರ ಕಣ್ತೆರೆದು ನೋಡಿಲ್ಲ. ಗಣೇಶ ಹಬ್ಬದ ಸಂದರ್ಭದಲ್ಲಂತೂ ನಗರಸಭೆ, ಜಿಲ್ಲಾಡಳಿತಕ್ಕೆ ದುಂಬಾಲು ಬಿದ್ದು ಬಾವಿಯಲ್ಲಿ ಕಸಕಡ್ಡಿ, ಕೊಳಚೆ ನೀರು ಸ್ವಚ್ಛಗೊಳಿಸಿ ಕೊಡಬೇಕು ಎಂದು ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳು ಮನವಿ ಮಾಡುತ್ತಲೇ ಇರುತ್ತವೆ. ಕಾಟಾಚಾರಕ್ಕೆ ಸ್ವಲ್ಪ ಸ್ವಚ್ಛಗೊಳಿಸುವುದು. ಗಣೇಶ ಹಬ್ಬ ಮುಗಿದ ಬಳಿಕ ಖಾಸಬಾವಿಯನ್ನು ನಗರಸಭೆ, ಜಿಲ್ಲಾಡಳಿಯ ಅಧಿಕಾರಿಗಳು ಮರೆತು ಬಿಡುತ್ತಾರೆ. ಮತ್ತೆ ವರ್ಷದುದ್ದಕ್ಕೂ `ಖಾಸ ಬಾವಿ' ಜನತೆಗೆ ಗೋಚರಿಸುವುದು ತಿಪ್ಪೆಗುಂಡಿಯಂತೆ!

50 ಲಕ್ಷದಲ್ಲಿ ಕಬ್ಬಿಣದ ಸರಳುಗಳ ಗೋಡೆ ನಿರ್ಮಿಸಿದ್ದು, ಗೇಟ್ ಕಿತ್ತಿ ಹೋಗುತ್ತಿದೆ. ಆಸನಗಳನ್ನು ಅಳವಡಿಸಿಲ್ಲ. ಪಾದಾಚಾರಕ್ಕೆ ಅಳವಡಿಸಿದ ಕಾಂಕ್ರೀಟ್ ಕಲ್ಲುಗಳು ಕಿತ್ತು ಹೋಗುತ್ತಿದ್ದು, ಕಣ್ತೆರೆದು ನೋಡುವವರಿಲ್ಲದಂತಾಗಿದೆ.

ಇನ್ನು ಮೇಲಾದರೂ ಬಾವಿ ಸ್ವಚ್ಛಗೊಳಿಸಿದರೆ ಗಣೇಶ ಹಬ್ಬದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಗೆ ಅನುಕೂಲ ಆಗುತ್ತದೆ. ಗಣೇಶ ಮೂರ್ತಿ ವಿಸರ್ಜನೆ ಹೆಸರಿನಲ್ಲಾದೂ ಈ ಬಾವಿ ರಕ್ಷಣೆ ಆಗಬೇಕು ಎಂದು ಜನ ಒತ್ತಾಯಿಸುತ್ತಾರೆ.

ಕೋಟಿ ಖರ್ಚಾದರೂ ದುರಸ್ತಿಯಾಗಿಲ್ಲ
ಐತಿಹಾಸಿಕ ಖಾಸಬಾವಿ ಸ್ವಚ್ಛತೆ ಮತ್ತು ಸಂರಕ್ಷಣೆಗೆ ಸುಮಾರು ಹತ್ತು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಆಡಳಿತ ವರ್ಗ ಗಮನಹರಿಸಿಲ್ಲ. ಒಂದು ಕೋಟಿ ಮೊತ್ತದ ಕಾಮಗಾರಿ ಆಗಿದೆ ಎಂದು ಹೇಳಲಾಗುತ್ತದೆ. ಆದರೆ 1 ಕೋಟಿ ಕಾಮಗಾರಿ ಅಲ್ಲಿ ಕಾಣಿಸುತ್ತಿಲ್ಲ. ಸುತ್ತಲೂ ಕಬ್ಬಿಣದ ಸರಳುಗಳ ಕಾಂಪೌಂಡ್ ನಿರ್ಮಾಣ, ಸಿಮೆಂಟ್ ಮಾಡಲಾಗಿದೆ. ಬಾವಿ ಸ್ಥಿತಿ ಮಾತ್ರ ಮತ್ತಷ್ಟು ಕೆಟ್ಟಿದೆ.

ಕೋಟಿ ಮೊತ್ತದ ಕಾಮಗಾರಿಯೂ ಕಳಪೆ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಗಣೇಶ ಹಬ್ಬ ಬಂದಾಗ ಸಂಘಟನೆಗಳು, ಸಾರ್ವಜನಿಕರು ಒತ್ತಾಯ ಮಾಡಿದರೆ ಮಾತ್ರ ಜಿಲ್ಲಾಡಳಿತ ಮತ್ತು ನಗರಸಭೆ ಸ್ವಚ್ಛತೆ ಮಾಡಿಸುತ್ತದೆ. ಹೊರಗಿನಿಂದ ಚರಂಡಿ ನೀರು ಬಾವಿ ಸೇರುತ್ತಿದೆ. ತ್ಯಾಜ್ಯ ವಸ್ತು ಇಲ್ಲಿಯೇ ಹಾಕಲಾಗುತ್ತಿದೆ. ಆಡಳಿತ ಯಂತ್ರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಮುತುವರ್ಜಿವಹಿಸಿದರೆ ಮಾತ್ರ ಐತಿಹಾಸಿಕ ಬಾವಿ ಸಂರಕ್ಷಣೆ ಸಾಧ್ಯ.
-ಚಂದ್ರು, ರಾಯಚೂರು

ಜವಾಬ್ದಾರಿ ಮರೆತ ಆಡಳಿತ ವರ್ಗ
ಖಾಸಬಾವಿ ದುರಸ್ತಿಗೆ 1 ಕೋಟಿ ಖರ್ಚು ಮಾಡಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಗಲೀಜು ನೀರು ತುಂಬಿಕೊಂಡಿದೆ. ಐತಿಹಾಸಿಕ ಖಾಸಬಾವಿ ಸಂರಕ್ಷಣೆ ಆಡಳಿತ ವರ್ಗಕ್ಕೆ ಬೇಕಿಲ್ಲ. ಇದು ಐತಿಹಾಸಿಕ ಬಾವಿ ಎಂಬುದನ್ನೇ ಮರೆತು ಮನೆಯಲ್ಲಿನ ಕಸ ಕಡ್ಡಿ ಹಾಗೂ ತ್ಯಾಜ್ಯ ವಸ್ತುಗಳನ್ನು ತಂದು ಈಗಲೂ ಸುರಿಯುತ್ತಾರೆ. ಈ ರೀತಿ ಜನರೇ ಜವಾಬ್ದಾರಿ ಮರೆತರೆ ಹೇಗೆ? ಇದೆಲ್ಲದರ ಪರಿಣಾಮ ಖಾಸಬಾವಿ ಮೊದಲು ಹೇಗಿತ್ತೋ ಹಾಗೆಯೆ ಕೊಳಚೆ ನೀರು, ಕಸಕಡ್ಡಿಯಿಂದು ತುಂಬಿಕೊಂಡಿದೆ. ಇದರ ಅಭಿವೃದ್ಧಿಗೆ ಒಂದು ಕೋಟಿ ಖರ್ಚು ಮಾಡಲಾಗಿದೆ ಎಂಬುದು ಮತ್ತು ಈಗಿರುವ ಖಾಸಬಾವಿ ಸ್ಥಿತಿ ಕಂಡರೆ ಬೇಸರ ಆಗುತ್ತದೆ. ಗಣೇಶೋತ್ಸವ ಬಂದಿದೆ. ಈ ಹಿನ್ನೆಲೆಯಲ್ಲಾದರೂ ಬಾವಿ ಸ್ವಚ್ಛಗೊಳಿಸಿ ಕೊಡಬೇಕು.
ವಿರೇಶ ವಕೀಲ, ರಾಯಚೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT