ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಂಡ’ಕ್ಕೂ ಮಣಿಯದ ಪ್ಲಾಸ್ಟಿಕ್ ಹಾವಳಿ!

ಮೇಲುಗೈ ಸಾಧಿಸಿದ ವ್ಯಾಪಾರಿಗಳು; ದುರ್ಬಲವಾದ ಸ್ಥಳೀಯ ಸಂಸ್ಥೆಗಳು
Last Updated 5 ಜೂನ್ 2018, 11:00 IST
ಅಕ್ಷರ ಗಾತ್ರ

ರಾಯಚೂರು: ಪ್ಲಾಸ್ಟಿಕ್ ವ್ಯಾಪಾರ ಮತ್ತು ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಸ್ಥಳೀಯ ಆಡಳಿತ ಸಂಸ್ಥೆಗಳು ಆಗಾಗ್ಗೆ ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ನಡೆಸುತ್ತವೆ.

ದಂಡ ಪಾವತಿಸುವ ವ್ಯಾಪಾರಿಗಳು ತೆರೆಮರೆಯಲ್ಲಿ ಮತ್ತೆ ಪ್ಲಾಸ್ಟಿಕ್‌ ಚೀಲಗಳ ವ್ಯಾಪಾರ ಶುರು ಮಾಡಿಕೊಳ್ಳುತ್ತಾರೆ. ಇದೇ ರೀತಿಯ ಪ್ರಹಸನ ಹಲವು ವರ್ಷಗಳಿಂದ ಮುಂದುವರೆಯುತ್ತಾ ಬಂದಿದೆ.

ಪ್ಲಾಸ್ಟಿಕ್‌ ನಿಷೇಧ ಮಾಡುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಕೇಳಿದರೆ ‘ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ. ಪರಿಸರ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಪ್ರಭಾರ ಜವಾಬ್ದಾರಿ ವಹಿಸಿದ್ದೇವೆ. ಆಗಾಗ್ಗೆ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ಹಾಕುತ್ತಿದ್ದಾರೆ. ವ್ಯಾಪಾರಿಗಳು ಮತ್ತು ಜನರು ಸಹಕಾರ ನೀಡಿದರೆ ಮಾತ್ರ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಪ್ಲಾಸ್ಟಿಕ್‌ ನಿಷೇಧದ ಪ್ರಯತ್ನ ನಿಲ್ಲಿಸಿಲ್ಲ’ ಎಂದು ಹೇಳುತ್ತಾರೆ.

ಜಿಲ್ಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಸ್ಥಗಿತಗೊಂಡಿಲ್ಲ. ಆದರೆ, ಪ್ಲಾಸ್ಟಿಕ್ ಚೀಲಗಳನ್ನು ಬಳಕೆ ಮಾಡುವವರ ಮನಸ್ಥಿತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಬೆರಳೆಣಿಕೆಯಷ್ಟು ವ್ಯಾಪಾರಿಗಳು ಗ್ರಾಹಕರಿಗೆ ತಾವು ಮಾರಾಟ ಮಾಡುವ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೊಡುವುದನ್ನು ಕೈ ಬಿಟ್ಟಿದ್ದಾರೆ. ಪ್ರಮುಖವಾಗಿ ಹೋಟೆಲ್‌ಗಳು, ಬಟ್ಟೆ ಅಂಗಡಿಗಳು ಹಾಗೂ ಕೆಲವು ಬೇಕರಿಗಳಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ತ್ಯಜಿಸಿದ್ದಾರೆ.

ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿರುವ ಕೇಕ್ ಕಾರ್ನರ್, ಹಾಸನ ಅಯ್ಯಂಗಾರ ಬೇಕರಿ, ಪ್ರಭು ದರ್ಶಿನಿ ಹಾಗೂ ವಿಶಾಲ ಮಾಲ್‌ಗಳಲ್ಲಿ ಪ್ಲಾಸ್ಟಿಕ್ ಚೀಲ ಬಳಸುತ್ತಿಲ್ಲ. ತೆಳುವಾದ ಪರದೆ ಬಟ್ಟೆಯಿಂದ ಸಿದ್ಧಪಡಿಸಿದ ಚೀಲಗಳು ಹಾಗೂ ಪೇಪರ್ ಬ್ಯಾಗ್‌ಗಳನ್ನು ಬಳಸುತ್ತಿದ್ದಾರೆ. ಈ ರೀತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದ ಮಟ್ಟಿಗೆ ಕೈಬಿಟ್ಟಿರುವ ವ್ಯಾಪಾರಿಗಳು ಅಲ್ಲಲ್ಲಿ ಸಿಗುತ್ತಾರೆ.

ಪ್ಲಾಸ್ಟಿಕ್‌ ಚೀಲಗಳ ಬಳಕೆಯಿಂದ ಸಾಕಷ್ಟು ಅಪಾಯವಿದೆ ಎಂಬುದನ್ನು ವ್ಯಾಪಾರಿಗಳು ಮತ್ತು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಪರ್ಯಾಯವಾಗಿ ಏನಾದರೂ ಶೋಧನೆ ಮಾಡಬೇಕು. ಪ್ಲಾಸ್ಟಿಕ್‌ ಚೀಲ ತಯಾರಿಸುವ ಕಂಪೆನಿಗಳಿಗೆ ಸರ್ಕಾರವು ನೋಟಿಸ್‌ ನೀಡಿ, ಸ್ಥಗಿತಗೊಳಿಸಬೇಕು. ಜನರು ಕೇಳುತ್ತಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಆಡಳಿತ ನಡೆಸುವ ಸರ್ಕಾರವು ಈ ಬಗ್ಗೆ ಕ್ರಮ ವಹಿಸಬೇಕು ಎನ್ನುವ ಸಾಮಾನ್ಯ ಅಭಿಪ್ರಾಯ ಪ್ರಜ್ಞಾವಂತ ನಾಗರಿಕರಲ್ಲಿದೆ.

ಪ್ಲಾಸ್ಟಿಕ್‌ ನಿಷೇಧವಿದ್ದರೂ ಮಾರಾಟದವರಿಂದ ಎಷ್ಟು ದಂಡ ಸಂಗ್ರಹಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆ ಬಗ್ಗೆ ಪ್ರಮಾಣ ಬೋಧಿಸಿರುವ ನಗರಸಭೆಯು ಕಡ್ಡಾಯವಾಗಿ ಏಕೆ ಕಾಯ್ದೆಯನ್ನು ಅನುಷ್ಠಾನಗೊಳಿಸಿಲ್ಲ ಎನ್ನವ ಪ್ರಶ್ನೆಗೆ, ‘ಬಿಟ್ಟು ಬಿಡದೆ ಕಾಯ್ದೆ ಜಾರಿಗೊಳಿಸುವ ಕೆಲಸ ಇಲ್ಲಿಯವರೆಗೂ ನಡೆದಿಲ್ಲ. ಹೀಗಾಗಿ ಪ್ಲಾಸ್ಟಿಕ್‌ ನಿಷೇಧ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ನಗರ ನೈರ್ಮಲ್ಯವನ್ನು ಕಾಪಾಡುವ ಸಿಬ್ಬಂದಿಯ ತಂಡವನ್ನು ರಚಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿದಿನ ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು. ದಂಡ ಸಂಗ್ರಹ ಮಾಹಿತಿ ಒಟ್ಟಾಗಿಲ್ಲ. ಮುಂದಿನ ದಿನಗಳಲ್ಲಿ ಮಾಹಿತಿ ಕೊಡುತ್ತೇವೆ’ ಎಂದು ರಾಯಚೂರು ನಗರಸಭೆ ಪೌರಾಯುಕ್ತ ರಮೇಶ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪರ್ಯಾಯಗಳಿಗೆ ಪ್ರಚಾರವಿಲ್ಲ

ಪ್ಲಾಸ್ಟಿಕ್‌ ಚೀಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ದಿನಸಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು, ಹೋಟೆಲ್‌ಗಳು, ತರಕಾರಿ ಅಂಗಡಿಗಳು, ಬೀದಿ ವ್ಯಾಪಾರಿಗಳು, ಚಿಕನ್, ಮಟನ್, ಮೀನು, ಬಟ್ಟೆ ಹಾಗೂ ಹಣ್ಣು ಮಾರಾಟಗಾರಿಗೆ ಪರ್ಯಾಯವಾಗಿ ವ್ಯವಸ್ಥೆ ಬಗ್ಗೆ ಮಾಹಿತಿಯಿಲ್ಲ.

‘ಪ್ಲಾಸ್ಟಿಕ್ ಚೀಲಗಳ ಬದಲು ಬಳಸುವ ಪೇಪರ್ ಬ್ಯಾಗ್, ಅಗ್ಗ ದರದ ಬಟ್ಟೆ ಚೀಲಗಳು ಸುಲಭವಾಗಿ ಖರೀದಿಗೆ ಸಿಗುವುದಿಲ್ಲ. ಇದ್ದರೂ ದುಬಾರಿ ಬೆಲೆ ಕೊಡಬೇಕಾಗುತ್ತದೆ. ಪ್ಲಾಸ್ಟಿಕ್ ನಿಷೇಧ ಮಾಡುವ ಸರ್ಕಾರ ಅದಕ್ಕೆ ಪರ್ಯಾಯವಾಗಿ ಏನು ಬಳಕೆ ಮಾಡಬೇಕು ಎಂಬುದನ್ನು ಪ್ರಚಾರ ಮಾಡಬೇಕು. ಪರ್ಯಾಯ ವಸ್ತುಗಳ ಮಾರಾಟಕ್ಕೆ ಉತ್ತೇಜನ ಒದಗಿಸಬೇಕು. ಮಾರುಕಟ್ಟೆಯಲ್ಲಿ ಸರಳವಾಗಿ ಪರ್ಯಾಯ ವಸ್ತುಗಳ ಮಾರಾಟಕ್ಕೆ ಸ್ಥಳೀಯ ಸಂಸ್ಥೆಯ ಮೂಲಕ ಕ್ರಮ ವಹಿಸಬೇಕು. ಎಂಎಸ್ಐಎಲ್ ಮೂಲಕ ಅಗ್ಗ ದರದಲ್ಲಿ ಬಟ್ಟೆ ಬ್ಯಾಗ್, ಪೇಪರ್ ಬ್ಯಾಗ್ ಮಾರಾಟ ಮಾಡಿದರೆ ಅನುಕೂಲವಾಗುತ್ತದೆ. ಪ್ಲಾಸ್ಟಿಕ್ ಮೇಲಿನ ಜನರ ಅವಲಂಬನೆ ಕಡಿಮೆಗೊಳಿಸಲು ಸರ್ಕಾರವು ಈ ನಿಟ್ಟಿನಲ್ಲಿ ಚುರುಕಾಗಿ ಕ್ರಮ ವಹಿಸಬೇಕು’ ಎನ್ನುತ್ತಾರೆ ಅನ್ನಪೂರ್ಣೇಶ್ವರಿ ಹೋಟೆಲ್ ಮಾಲೀಕ ಸಂಜು.

**
ಪ್ಲಾಸ್ಟಿಕ್ ಬಳಸಿ ವ್ಯಾಪಾರ ಮಾಡುವುದು ಶಿಕ್ಷಾರ್ಹ ಎಂದು ಈಗಾಗಲೇ ಸಾರ್ವಜನಿಕ ಪ್ರಕಟಣೆ ನೀಡಲಾಗಿದೆ. ನಗರದಲ್ಲಿ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಯಾರಿ ಮಾಡುತ್ತಿದ್ದೇವೆ
ರಮೇಶ ನಾಯಕ, ನಗರಸಭೆ ಪೌರಾಯಕ್ತ, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT