ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಸದಸ್ಯೆ ಆಶಾಬೀ ಪರಿಸರ ಪ್ರೇಮ

Last Updated 29 ಅಕ್ಟೋಬರ್ 2017, 9:22 IST
ಅಕ್ಷರ ಗಾತ್ರ

ಸಿಂಧನೂರು: ನಗರಸಭೆ ವ್ಯಾಪ್ತಿಯಲ್ಲಿ ಉದ್ಯಾನಕ್ಕೆ ಮೀಸಲಾದ ನಿವೇಶನಗಳು ಒಂದೆಡೆ ಒತ್ತುವರಿಯಾದರೆ, ಮತ್ತೊಂದೆಡೆ ಸಾರ್ವಜನಿಕ ಜಾಗಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ಮಾರುವ ದೂರುಗಳೇ ಹೆಚ್ಚು ಕೇಳಿ ಬರುತ್ತವೆ. ಆದರೆ ಇಂಥದ್ದಕ್ಕೆಲ್ಲ ಅವಕಾಶ ನೀಡದೇ ನಗರಸಭೆ ಸದಸ್ಯೆ ಆಶಾಬೀ ಉದ್ಯಾನ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದಾರೆ. ಬಡ ಮತ್ತು ಅನಕ್ಷರಸ್ಥರಾದ ಅವರು 17ನೇ ವಾರ್ಡ ವೆಂಕಟೇಶ್ವರ ಕಾಲೊನಿ ಪ್ರತಿನಿಧಿಸುತ್ತಾರೆ.

ಉದ್ಯಾನಕ್ಕೆ ಮೀಸಲಿಟ್ಟ ಕೆಲ ಜಾಗಗಳನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿದ್ದರು. ತಮ್ಮ ಪುತ್ರ ನನ್ನುಸಾಬ್‌ ಮೇಸ್ತಿಯವರ ನೆರವಿನೊಂದಿಗೆ ಆಶಾಬೀ ಅವರು ಜಾಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಿದರು. ಉದ್ಯಾನದ ಜಾಗ ಸುತ್ತಲೂ ತಂತಿ ಬೇಲಿ ನಿರ್ಮಿಸಿದರು. ಶಾಸಕ ಹಂಪನಗೌಡ ಬಾದರ್ಲಿ ಅವರ ಅನುದಾನದಿಂದ ಎರಡು ಉದ್ಯಾನ ಗಳನ್ನು ನಿರ್ಮಿಸಿದರು. ಇದರಿಂದ ಜನರ ಪ್ರೋತ್ಸಾಹವೂ ದೊರೆಯಿತು. ಅದೇ ಸ್ಫೂರ್ತಿಯಿಂದ ಅವರು ಮತ್ತೊಂದು ಉದ್ಯಾನ ನಿರ್ಮಿಸಿದರು.

60 ವರ್ಷದ ಅನಕ್ಷರಸ್ಥೆ ಆಶಾಬೀ ಅವರು ಬೆಳಗಿನ ಜಾವ ವಾರ್ಡ್‌ನ ಪ್ರಮುಖ ಸ್ಥಳಗಳಲ್ಲಿ ಸುತ್ತಾಡಿ ಜನರ ಅಹವಾಲು ಆಲಿಸುತ್ತಾರೆ. ಚರಂಡಿ ನೀರು ಸಮರ್ಪಕವಾಗಿ ಹರಿಯುವಂತೆ, ಎಲ್ಲಿ ಬೇಕೆಂದಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನಿಗಾ ವಹಿಸುತ್ತಾರೆ. ಯಾವುದಾದರೂ ವಿಷಯ ಅರ್ಥವಾಗದಿದ್ದರೆ ಅಥವಾ ನಗರಸಭೆ ಅಧಿಕಾರಿಗಳಿಗೆ ಅರ್ಥ ಮಾಡಿಸುವುದು ಕಷ್ಟವಾದರೆ, ಪುತ್ರನ ನೆರವು ಪಡೆಯುತ್ತಾರೆ.

ಬಾಬಾರಾಮದೇವ್ ದೇವಸ್ಥಾನದ ಬಳಿ ಎರಡು ಮತ್ತು ಯಮಹಾ ಶೋರೂಂ ಹಿಂಬದಿ ಒಂದು ಉದ್ಯಾನವಿದ್ದು ಎಸ್ಎಫ್‌ಸಿ ಅನುದಾನದ ₹ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ಯಮಹಾ ಶೋರೂಂ ಹಿಂದುಗಡೆ ನಿರ್ಮಿಸಲಾದ ಉದ್ಯಾನವನದ ಕಾಂಪೌಂಡ್ ಮೇಲೆ ಪರಿಸರ ಸಂರಕ್ಷಣೆ ಕುರಿತ ಚಿತ್ರಗಳು ಆಕರ್ಷಕವಾಗಿವೆ.
ವಾರ್ಡ್‌ಗಳಲ್ಲಿ ಉದ್ಯಾನಗಳ ನಿರ್ಮಾಣಕ್ಕೆ ಗಮನ ಹರಿಸಬೇಕು. ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಜಾಗೃತಿ ಆಂದೋಲನ ಕೈಗೊಳ್ಳಬೇಕು. ಶೌಚಾಲಯ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಆಶಾಬೀ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT