ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಚ್ಚಲದಿನ್ನಿ ಶಾಲೆಗೆ ಮೆರುಗು ತಂದ ‘ಹೂ ಬನ’

Last Updated 5 ಮಾರ್ಚ್ 2014, 11:24 IST
ಅಕ್ಷರ ಗಾತ್ರ

ರಾಯಚೂರು: ಈ ಶಾಲೆ ಅಂಗಳಕ್ಕೆ ಕಾಲಿಟ್ಟರೆ ಸುಂದರ ಹೂ ಬನದೊಳಗೆ ಕಾಲಿಟ್ಟಂತೆ. ಹೌದು ತಾಲ್ಲೂಕಿನ ಯರಗೇರಿ ಸಮೀಪ ಇರುವ ಪುಚ್ಚಲದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಣುವ ನೋಟವಿದು. ಈ ಶಾಲೆಯ ತೋಟವೆಂದರೆ ಸುಂದರ ತೋಟ.

ಅಂತೆಯೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಶಾಲೆಯ ಆವರಣ ಹಸಿರು ಆವರಣ ಗುರುತಿಸಿ ‘ಹಸಿರು ಶಾಲೆ’ ಎಂದು ಘೋಷಣೆ ಮಾಡಿದೆ. ಮಾ. 5ರಂದು ಹಸಿರು ಶಾಲೆ ಪ್ರಶಸ್ತಿಯು ಶಾಲೆಗೆ ರಾಯಚೂರಿನ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಆಗುತ್ತಿದೆ.

ಶಾಲೆಯ ಪ್ರವೇಶದ ಮುಂಭಾಗದಲ್ಲಿ ಗುಲಾಬಿ, ಮಲ್ಲಿಗೆ ಸೇವಂತಿಗೆ, ಕೆಂಪು ಮತ್ತು ಬಿಳಿ ದಾಸವಾಳ, ಆಕಾಶ ಮಲ್ಲಿಗೆ ಹೂವಿನ ಗಿಡಗಳು ಮಕ್ಕಳನ್ನು ಸ್ವಾಗತಿಸುತ್ತವೆ, ಅಲ್ಲದೇ ಮಕ್ಕಳ ಬಿಸಿಯೂಟಕ್ಕೆ ಅನುಕೂಲವಾಗುವ ಮೆಂತ್ಯ ಗಿಡದ ಸೊಪ್ಪು, ಪಾಲಕ್, ಕೊತ್ತಂಬರಿ, ಕರಿಬೇವಿ, ಟೊಮೆಟೊ, ಬದನೆಕಾಯಿ, ನುಗ್ಗೆ ಸೇರಿದಂತೆ ಅನೇಕ ತರಹದ ತರಕಾರಿ ಗಿಡಗಳನ್ನು ಬೆಳೆಯಲಾಗಿದೆ. ವಿವಿಧ ಔಷಧ ಸಸ್ಯ ಬೆಳೆಸಲಾಗುತ್ತಿದೆ. ವಿವಿಧ ಬಗೆಯ ಹುಲ್ಲಿನಿಂದ ಉದ್ಯಾನ ಮಾದರಿಯಲ್ಲಿ ಮೈದಾನವನ್ನು ಸಿದ್ದಪಡಿಸಲಾಗಿದೆ.

ವಿಶೇಷವೆಂದರೆ ಈ ಊರು, ಶಾಲೆ ಹತ್ತಿರ ಯಾವುದೇ ನೀರಾವರಿ ಕಾಲುವೆಗಳಿಲ್ಲ. ಕೊಳವೆ ಬಾವಿ ನೀರೇ ಗತಿ. ಈ ಸಮಸ್ಯೆ ನಡುವೆಯೂ ಸರ್ಕಾರಿ ಶಾಲೆ ಅಂಗಳ ಹಸಿರಿನಿಂದ ಕಂಗೊಳಿಸುತ್ತಿದೆ.

ಶಾಲೆಯ ತೋಟಕ್ಕೆ ಬೇಕಾಗುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ ಅವರ ಸಹಕಾರ ನೀಡಿದ್ದಾರೆ. ಶಾಲೆ ಶಿಕ್ಷಕ ವರ್ಗವೇ ಸ್ವಂತ ಖರ್ಚಿನಲ್ಲಿ ಉದ್ಯಾನ ಹಾಗೂ ತೋಟ ಅಭಿವೃದ್ಧಿ ಪಡಿಸಲಾಗಿದೆ. ಶಾಲೆಯ ಶಿಕ್ಷಕರಾದ ಜಗದೀಶ, ಪ್ರಮೀಳಾ, ಮಂಜುಳಾ, ಅನುರಾಧ, ಕುಮಾರ ಗಣೇಶ, ಗುರುರಾಜ, ಮಂಜುನಾಥ ಆರ್‌ ಹಾಗೂ ಸಿಆರ್‌ಸಿ ತಿರುಮಲಾಚಾರ್ಯ ಅವರು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ ಎಂದು ಮುಖ್ಯಾಧ್ಯಾಪಕ ರಾಘವೇಂದ್ರ ಹೇಳುತ್ತಾರೆ.

ತೋಟ ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ದಿನದ ಬಿಸಿಯೂಟದಲ್ಲಿ ಪೌಷ್ಟಿಕಾಂಶವುಳ್ಳ  ತರಕಾರಿ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ಪಾಠ  ಬೋಧನೆ: ಶಾಲೆಯ ಪ್ರತಿಯೊಬ್ಬ ಶಿಕ್ಷಕರು ಅಗತ್ಯ ಪೀಠೋಪಕರಣ ಬಳಸಿಯೇ ಪಾಠ ಬೋಧನೆ ಮಾಡುತ್ತಾರೆ. ಶಾಲಾ ಅವಧಿ ಮುಗಿದ ನಂತರ ಕಲಿಕೆಯಲ್ಲಿ ಹಿಂದುಳಿದ 4ನೇ ತರಗತಿಯಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತದೆ.

ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಉತ್ತಮವಾಗಿದೆ, ಗ್ರಾಮಸ್ಥರ, ಎಸ್‌ಡಿಎಂಸಿ, ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಸಹಕಾರದಿಂದಲೇ ಶಾಲೆಯ ಸುಂದರ ಪರಿಸರ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಕೃತಜ್ಞತೆಯನ್ನು ಮುಖ್ಯಾಧ್ಯಾಪಕ ರಾಘವೇಂದ್ರ ಸಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT