ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣಮ್ಮ ತಾಯಿ ಪ್ರೌಢಶಾಲೆಗೆ ಸುವರ್ಣ ಸಂಭ್ರಮ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಮುಖ್ಯ ಗುರಿ, ಶಿಕ್ಷಕರು–ಮಕ್ಕಳಿಂದ ರಾಜ್ಯಮಟ್ಟದ ಸಾಧನೆ
Last Updated 8 ಫೆಬ್ರುವರಿ 2017, 7:27 IST
ಅಕ್ಷರ ಗಾತ್ರ

ಮುದಗಲ್: ಸುಕ್ಷೇತ್ರ ಸಜ್ಜಲಗುಡ್ಡ ಗ್ರಾಮದ ಶಿವಶರಣೆ ಶರಣಮ್ಮ ತಾಯಿಯವರ ಸರ್ಕಾರಿ ಪ್ರೌಢ ಶಾಲೆ ಸುವರ್ಣ ಮಹೋತ್ಸವದ ಸಂಭ್ರಮ ಆಚರಿಸಿಕೊಳ್ಳುತ್ತಿದೆ.

ಶಿವಶರಣೆ ಶರಣಮ್ಮನವರ ಪರಿಶ್ರಮದಿಂದ 1966ರಲ್ಲಿ ಕರ್ನಾಟಕ ಸರ್ಕಾರ ಪ್ರೌಢ ಶಾಲೆ ಆರಂಭಿಸಿತು. ಈ ಶಾಲೆ ವಿದ್ಯಾರ್ಥಿಗಳಿಗೆ  ಬದುಕು ಕಟ್ಟಿಕೊಳ್ಳಲು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮುಂತಾದವರು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಶಾಲೆಯ 4 ಎಕರೆ 28 ಗುಂಟೆ ಆವರಣದಲ್ಲಿ ಕಂಗೊಳಿಸುವ ವಿವಿಧ ಜಾತಿಯ 200ಕ್ಕೂ ಹೆಚ್ಚು ಗಿಡಮರ ಹಾಗೂ ಹೂವು ಬಳ್ಳಿಗಳು ಬೆಳೆದು ನಿಂತು ಮಲೆನಾಡಿನ ಸೊಬಗನ್ನು ಮೂಡಿಸಿದೆ. ಈ ಗಿಡಮರಗಳಿಂದ ಶಾಲೆ ಆವರಣ ಅಂದ ಚಂದ ಹೆಚ್ಚಾಗಿದೆ. ಶಾಲೆಯ ಆವರಣ ತಂಪಾಗಿ ಇರುವುದರಿಂದ ಮಠಕ್ಕೆ ಬರುವ ಭಕ್ತರು ಶಾಲೆ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಾರೆ.

ಶಾಲೆಯ ಆವರಣದಲ್ಲಿ ವೈವಿಧ್ಯಮಯ ಗಿಡ ಮರಗಳು, ಹೂವು ಬಳ್ಳಿಗಳು, ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ, ಪಕ್ಷಿಗಳ ಇಂಚರ ನೋಡಿ, ಕೇಳುಗರಿಗೆ ಮನಸ್ಸಿಗೆ ಆನಂದ ನೀಡುತ್ತದೆ.

ಶಾಲೆ ಸುತ್ತಲು ಆಲದ ಮರ, ಬೇವು, ಹುಣಸೆ, ಬದಾಮಿ. ತೆಂಗು, ಶಿವಬಾಲ್, ಅಕೋಕ, ಸಂಕೇಶ್ವರ, ನುಗ್ಗಿ, ಬಾರಿಗಿಡ, ದಾಳಿಂಬೆ ಸೇರಿದಂತೆ ಇನ್ನಿತರ ಗಿಡ ಮರಗಳಿವೆ. ಗುಲ್‌ಮೋರ್, ಆಕಾಶ ಮಲ್ಲಿಗೆ, ಬೋಗನ್ ವಿಲಿಯಂ, ನಂದಿ ಬಟಲು, ನಾಗಲಿಂಗ ಹೂವು, ಮೈಸೂರ ಮಲ್ಲಿಗೆ, ಬಿಚ್ಚು ಮಲ್ಲಿಗೆ ಸೇರಿ ಇನ್ನಿತರ ವಿವಿಧ ಜಾತಿಯ ಹೂವು ಬಳ್ಳಿಗಳಿವೆ.

ಇಲ್ಲಿನ ಗಿಡಮರಗಳು ಸೌಂದರ್ಯದ ಜತೆಗೆ ವಿದ್ಯಾರ್ಥಿಗಳಿಗೆ ಪರಿಸರ ಜ್ಞಾನ ನೀಡಲು ಕ್ರಾಫ್ಟ್ ಶಿಕ್ಷಕರಿದ್ದಾರೆ. ಗಿಡಮರಗಳಿಂದ ಉದುರಿದ ಎಲೆಗಳನ್ನು ಶಾಲೆ ಬಲ ಬದಿಗೆ ಗುಂಡಿಯಲ್ಲಿ ಹಾಕಿ ಸಾವಯವ ಗೊಬ್ಬರ ತಯಾರಿಸಿ ಗಿಡಮರ ಹಾಗೂ ಹೂವು ಬಳ್ಳಿಗಳಿಗೆ ಉಪಯೋಗಿ ಸುತ್ತಾರೆ. ಗಿಡಮರಗಳು ಬೆಳೆದಿದ್ದರಿಂದ ವಿದ್ಯಾರ್ಥಿಗಳಿಗೆ ಪರಿಸರ ಬಗ್ಗೆ ಜಾಗೃತಿ ಮೂಡಿಸಿದಂತೆ ಆಗುತ್ತದೆ.

ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿಯ ಧಾರ್ಮಿಕ, ಜನಪದ ಸೇರಿ ಇನ್ನಿತರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇಲ್ಲಿ ಶಿಕ್ಷಕ ಶಿವರುದ್ರಯ್ಯ ಚೌವಕಿಮಠ ಅವರು ರಾಜ್ಯ ಮಟ್ಟದಲ್ಲಿ ನಡೆಯುವ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನದ ವಿಭಿನ್ನ ತಳಿಗಳ ಮಾರ್ಗದರ್ಶನ ನೀಡಲು ಆಯ್ಕೆಯಾಗಿದ್ದಾರೆ. ಈ ಶಾಲೆಯ ಪ್ರದೀಪ ಕುಮಾರ ರಾಷ್ಟ್ರೀಯ ಪ್ರತಿಭಾ ಪರೀಕ್ಷೆಯಲ್ಲಿ ರ್‍್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ ಮೇಣದ ಭತ್ತಿ, ಪ್ರಥಮ ಚಿಕಿತ್ಸೆ, ಪರಿಸರ ಜ್ಞಾನ, ಆರೋಗ್ಯ ಜ್ಞಾನ, ನೀರಿನ ರಕ್ಷಣೆ, ರೇಷ್ಮೆ, ಸಾವಯವ ಗೊಬ್ಬರ ತಯಾರಿಗೆ ತರಬೇತಿ ನೀಡಲಾಗುತ್ತಿದೆ. ಸ್ಫರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ರಸ ಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.

ಸುವರ್ಣ ಮಹೋತ್ಸವ: ಫೆ.12 ಮತ್ತು 13ರಂದು ಜರುಗುವ ಸುವರ್ಣ ಮಹೋತ್ಸವ ಕಾರ್ಯಕ್ರಮ ಯಶಸ್ವಿ ಗೊಳಿಸಲು ಸಜ್ಜಲಗುಡ್ಡ, ಕೋಡಿಹಾಳ, ನಾಗರಾಳ, ಕಂಬಳಿಹಾಳ, ಲಕ್ಕಿಹಾಳ, ಬೊಮ್ಮನಾಳ, ಕೊಮನೂರು, ಚಾಮ ಲಾಪುರ ಸೇರಿದಂತೆ ಸಜ್ಜಲಗುಡ್ಡದ ಸುತ್ತ ಮುತ್ತಲಿನ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸಜ್ಜಲ ತರಂಗ ಎಂಬ ಸಂಚಿಕೆ ಬಿಡುಗಡೆಗೊಳ್ಳುತ್ತದೆ. ಗುರುವಂದನಾ, ಪ್ರತಿಭಾ ಪುರಸ್ಕಾರ, ದಾನಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರು ಗುತ್ತಿವೆ. ಕಾರ್ಯಕ್ರಮವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ ಸೇಠ್ ಉದ್ಘಾಟಿಸುತ್ತಾರೆ. ಕಾರ್ಯ ಕ್ರಮದ ನೆನಪಿಗಾಗಿ ಎಚ್‌.ಕೆ.ಡಿ.ಪಿ ಅನುದಾನದದಡಿ ಸುವರ್ಣ ಭವನದ ಶಿಲಾನ್ಯಾಸ ಜರುಗುತ್ತದೆ.
-ಶರಣಪ್ಪ ಆನೆಹೊಸೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT