ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಸ್ವತಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ವಿಶ್ರಾಂತ ಕನ್ನಡ ಉಪನ್ಯಾಸಕಿ; ಹಲವು ಪ್ರಶಸ್ತಿ ಮುಡಿಗೆ
Last Updated 28 ಅಕ್ಟೋಬರ್ 2019, 14:29 IST
ಅಕ್ಷರ ಗಾತ್ರ

ವಿಜಯಪುರ: ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿ, ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸ್ವಯಂ ನಿವೃತ್ತಿ ಪಡೆದುಕೊಂಡಿರುವ ಡಾ.ಸರಸ್ವತಿ ಚಿಮ್ಮಲಗಿ ಅವರು ಈ ಬಾರಿಯ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಸವನಬಾಗೇವಾಡಿ ತಾಲ್ಲೂಕು ಚಿಮ್ಮಲಗಿ ಇವರ ಜನ್ಮ ಸ್ಥಳ. ಕಾಖಂಡಕಿ, ಸವನಳ್ಳಿ, ಮಸೂತಿಯಲ್ಲಿ ಪ್ರಾಥಮಿಕ ಹಾಗೂ ವಿಜಯಪುರದಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದ ಇವರು, ಕಲಬುರ್ಗಿಯ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಬಿ.ಎ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದುಕೊಂಡರು. ಆ ಬಳಿಕ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಫಿಲ್, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದುಕೊಂಡರು. ಕಲಬುರ್ಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ, 2006ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಇದಕ್ಕೂ ಮುನ್ನ ಇವರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರು.

ಪ್ರಕಟಿತ ಕೃತಿಗಳು: ‘ನಾವು ನಿಮ್ಮವರೇ ಸ್ವಾಮಿ’ (ಕವನ ಸಂಕಲನ–1977), ‘ಕೋಡಿಲ್ಲದ ಕೋಡಗ’ (ಕವನ ಸಂಕಲನ–1990), ‘ಸಾಹಿತ್ಯ ವಿಹಾರ’ (ಸಂಶೋಧನಾ ಪ್ರಬಂಧ ಸಂಕಲನ–1991), ‘ಮುಳ್ಳು ಬೇಲಿ’ (ಕವನ ಸಂಕಲನ–1994), ‘ಎಡಬಿಡಂಗಿ ದೇವನ ವಚನಗಳು’ (1996), ‘ಹಳೆ ನೆನಪು ಹಸಿರಾದಾಗ’ (1997), ‘ಕಾವ್ಯ ಕುಂಜ–ಭಾಗ–1‘ (1994) ಸೇರಿದಂತೆ 18 ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಜೋಗಿ ಬಾವಿ’, ‘ಕಾಡು ಕುದುರೆ’, ‘ಶಾಂತಲಾ’, ‘ನೀವು ಮಾಡೋದ ಹಿಂಗ’, ‘ಬ್ರೀಫ್ ಕೇಸ್’, ‘ಚೋಮ’ ಹಾಗೂ ‘ಜೋಕುಮಾರ ಸ್ವಾಮಿ’ ಸೇರಿದಂತೆ 18 ರಂಗ ನಾಟಕಗಳಲ್ಲಿ ಅಭಿನಯಿಸಿದ ಹೆಮ್ಮೆ ಇವರದ್ದು. ಇಷ್ಟೇ ಅಲ್ಲ, ಇವರು ಆಕಾಶವಾಣಿಯ ‘ಬಿ’ ಹೈಗ್ರೇಡ್ ಕಲಾವಿದೆಯಾಗಿ 1975ರಿಂದ ಇಲ್ಲಿಯವರೆಗೆ ಸುಮಾರು 100ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲೂ ಪಾಲ್ಗೊಂಡಿದ್ದಾರೆ.

‘ಅಕ್ಕಮ್ಮನ ಶಾಲೆ’, ‘ಹೊಸ ಹಾದಿ’, ‘ನೆರೆ ಹೊರೆಯವರು’ ಇವರ ಸ್ವ ಸ್ವರಚಿತ ನಾಟಕಗಳಾಗಿದ್ದು, ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ‘ಮಹಾ ದಾಸೋಹಿ ಶ್ರೀ ಶರಣ ಬಸವ’, ‘ಹಳ್ಳಿ ಹಳ್ಳಿಯ ಕಥೆ’, ‘ನೋಸಿಲಾ’ ಹಾಗೂ ಡಾಕ್ಯುಮೆಂಟರಿಗಳಲ್ಲಿ ಅಭಿನಯಿಸುವ ಮೂಲಕ ತಾವೊಮ್ಮ ಬಹುಮುಖ ಪ್ರತಿಭೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅಭಿನಯ, ಕ್ರೀಡೆ, ಸಮಾಜ ಸೇವೆ, ಸಾಹಿತ್ಯ, ಸಮಾಜ ಸೇವೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಇವರಿಗೆ ಹಲವು ಶ್ರೇಷ್ಠ ಪ್ರಶಸ್ತಿಗಳೂ ಸಂದಿವೆ. ಇವರ ಪತಿ ವಿ.ಬಿ.ಪೂಜಾರ ನಿವೃತ್ತ ಕೆಎಎಸ್ ಅಧಿಕಾರಿಯಾಗಿದ್ದು, ಇವರ ಕೃಷಿ ಕಾಯಕಕ್ಕೆ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT