ರಾಮದೇವರ ಬೆಟ್ಟ ಜೀವ ವೈವಿಧ್ಯತೆ ತಾಣ

7
ವನ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ಹೊರ ಸಂಚಾರ ಕಾರ್ಯಕ್ರಮ

ರಾಮದೇವರ ಬೆಟ್ಟ ಜೀವ ವೈವಿಧ್ಯತೆ ತಾಣ

Published:
Updated:
ರಾಮದೇವರ ಬೆಟ್ಟಕ್ಕೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶನಿವಾರ ಚಾರಣ ಹಮ್ಮಿಕೊಂಡಿದ್ದರು

ರಾಮನಗರ: ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವತಿಯಿಂದ ವನ ಮಹೋತ್ಸವದ ಅಂಗವಾಗಿ ಹೊರ ಸಂಚಾರ ಕಾರ್ಯಕ್ರಮವನ್ನು ರಾಮದೇವರ ಬೆಟ್ಟಕ್ಕೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ತಿಂಗಳ ಕೊನೆಯ ಶನಿವಾರ ಹೊರ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ತಾಲ್ಲೂಕಿನಲ್ಲಿರುವ ಐತಿಹಾಸಿಕ ಸ್ಥಳಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುವುದು ಎಂದು ಶಾಲೆಯ ಮುಖ್ಯಶಿಕ್ಷಕ ಎಸ್.ಪಿ. ಬಸವರಾಜಪ್ಪ ಹೇಳಿದರು.

ಈ ಬೆಟ್ಟದ ಅರಣ್ಯ ಪ್ರದೇಶ ಅಪೂರ್ವ ಜೀವವೈವಿಧ್ಯತೆಯ ವಾಸ ಸ್ಥಳವಾಗಿದೆ. ಇಲ್ಲಿರುವ ಜೀವಸಂಪತ್ತು ಮತ್ತು ಸಸ್ಯರಾಶಿಯನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿ ಎತ್ತರದಲ್ಲಿರುವ ರಾಮದೇವರ ಬೆಟ್ಟ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ವೈಶಿಷ್ಟ್ಯತೆಯುಳ್ಳ ಬೆಟ್ಟವಾಗಿದೆ ಎಂದರು.  ಶೋಲೆ, ಹುಲಿಯ ಹಾಲಿನ ಮೇವು ಮೊದಲಾದ ನೂರಾರು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡು ಪ್ರಸಿದ್ಧವಾಗಿವೆ. ಅಳಿವಿನಂಚಿನಲ್ಲಿರುವ ‘ರಣಹದ್ದು’ಗಳ ವನ್ಯಧಾಮವಾಗಿ ಈ ಪ್ರದೇಶವನ್ನು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಿಕ್ಷಕ ಶಿವಸ್ವಾಮಿ ಮಾತನಾಡಿ ರಣಹದ್ದುಗಳ ಜೀವನಕ್ರಮವನ್ನು ಅಧ್ಯಯನ ಮಾಡಿ, ಅವುಗಳಿಗೆ ಅಗತ್ಯವಾದ ಆಹಾರ, ಕುಡಿಯಲು ನೀರು ಒದಗಿಸಬೇಕು. ಬೆಟ್ಟದ ತಪ್ಪಲಿನಲ್ಲಿರುವ ಕೆರೆಯನ್ನು ಸರಿಪಡಿಸಿ ನೀರು ಸದಾಕಾಲ ನಿಲ್ಲುವಂತೆ ಮಾಡಬೇಕು. ಪ್ರಾಣಿ ಪಕ್ಷಿಗಳಿಗೆ ಹಣ್ಣಿನ ಗಿಡ ಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು.

ಪ್ರವಾಸಿಗರು ಪ್ಲಾಸ್ಟಿಕ್ ಬ್ಯಾಗ್, ಕವರ್, ಬಾಟಲ್ ಗಳನ್ನು ಕೊಂಡೊಯ್ಯಲು ಅನುಮತಿ ನೀಡಬಾರದು. ಜನರು ಬೆಟ್ಟದಮೇಲೆ ಊಟಮಾಡಿ ಉಳಿದದ್ದನ್ನು ಬಿಸಾಡಬಾರದು. ಬೇಸಿಗೆಯಲ್ಲಿ ಬೆಂಕಿಬಿದ್ದು ಅಪೂರ್ವ ಸಸ್ಯರಾಶಿ ಬೆಂದುಹೋಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಶಿಕ್ಷಕ ಸಿ.ವಿ. ಜಯಣ್ಣ ಮಾತನಾಡಿ ಬದುಕುವ ಹಕ್ಕು ಮಾನವನಿಗೆ ಮಾತ್ರ ಎನ್ನುವ ದುರಾಲೋಚನೆಯನ್ನು ತೊರೆಯಬೇಕು. ಇತರೆ ಜೀವರಾಶಿಗಳ ವಾಸಸ್ಥಳಕ್ಕೆ ಅನಗತ್ಯವಾಗಿ ಮಾನವನ ಪ್ರವೇಶವನ್ನು ನಿರ್ದಾಕ್ಷಿಣ್ಯವಾಗಿ ನಿಷೇಧಿಸಬೇಕು ಎಂದರು. ಜನರ ಕಲ್ಯಾಣಕ್ಕಾಗಿ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಇದರಲ್ಲಿ ಒಂದಂಶದಷ್ಟಾದರೂ ಪ್ರಾಣಿ, ಪಕ್ಷಿ, ಅರಣ್ಯ ಉಳಿಸಿ ರಕ್ಷಿಸಲು ವಿನಿಯೋಗಿಸಬೇಕು. ಇದರಿಂದ ಮುಂದಿನ ತಲೆಮಾರಿನ ಜನತೆ ಪ್ರಾಣಿಪಕ್ಷಿಗಳನ್ನು ಚಿತ್ರಪಟದಲ್ಲಿ ನೋಡದೆ ಜೀವಂತವಾಗಿ ನೋಡಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಕಕರಾದ ಮಂಗಳಾ ವಿ. ನಾಯಕ್‌, ಕೆ.ಎಸ್. ಪ್ರಭುಲಿಂಗರಾಜು, ಕೆ. ರಮೇಶ್, ಎಂ.ಎಸ್. ಜ್ಯೋತಿ, ವಿಜಯಲಕ್ಷ್ಮಿ, ಲಕ್ಷ್ಮಣ್, ಉಪೇಂದ್ರ, ಎ.ವಿ. ಶಿವರಾಜು, ರತ್ನಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !