ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ಗುರಿ ಸಾಧನೆಗೆ ತಾಕೀತು

ರಾಮನಗರ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ
Last Updated 17 ಡಿಸೆಂಬರ್ 2018, 12:27 IST
ಅಕ್ಷರ ಗಾತ್ರ

ರಾಮನಗರ: ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಇದಕ್ಕೆ ಪಿಡಿಒಗಳ ಕಾರ್ಯವೈಖರಿಯೂ ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈಮುಹಿಲನ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಮನಗರ ತಾಲ್ಲೂಕಿನ ಪಗ್ರತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಹಲವು ಕೊರತೆಗಳಿವೆ ಎಂದು ಪ್ರತಿ ಸಭೆಯಲ್ಲಿಯೂ ಹೇಳುತ್ತೀರಿ. ಆದರೆ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. ಹಾಗಾದರೆ ಅವರಿಗೆ ಸಮಸ್ಯೆಗಳಿಲ್ಲವೆ’ ಎಂದು ಪ್ರಶ್ನಿಸಿದರು. ‘ತೆಗೆದುಕೊಳ್ಳುವ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡಿ. ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಸಹಕರಿಸಿ’ ಎಂದರು.

‘ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಗ್ರಾಮ ಪಂಚಾಯಿತಿಗಳಲ್ಲಿ ಸರಿಯಾಗಿ ಅನುಷ್ಠಾನಗೊಳಿಸಿ. ಇನ್ನು 106 ದಿನಗಳಿವೆ. ಪ್ರತಿ ವಾರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಸಭೆ ಮಾಡಿ ಉಳಿದಿರುವ ಶೇ 70ರಷ್ಟು ಗುರಿಯನ್ನು ಸಾಧಿಸಿ’ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಉಮೇಶ್ ಮಾತನಾಡಿ ‘ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಗ್ರಾಮದ ಜನರಿಗೆ ನರೇಗಾ ಯೋಜನೆ ಮಹತ್ವವನ್ನು ತಿಳಿಸುವ ಮೂಲಕ ಅದರ ಸದುಪಯೋಗಪಡೆದುಕೊಳ್ಳಬೇಕು’ ಎಂದರು.

‘ತಾಲ್ಲೂಕಿನಲ್ಲಿ ನರೇಗಾ ಯೋಜನೆಗೆ ಶೇ 80ರಷ್ಟು ಜನರು ಅರ್ಹರಾಗಿದ್ದಾರೆ. ಪಿಡಿಒಗಳು ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಿದರೆ ಗುರಿ ಸಾಧನೆ ಅಸಾಧ್ಯ ಕೆಲಸವೇನಲ್ಲ’ ಎಂದರು.

4ನೇ ಸ್ಥಾನ: ವಸತಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯು ನಾಲ್ಕನೇ ಸ್ಥಾನದಲ್ಲಿದೆ. ತಾಲ್ಲೂಕಿನಲ್ಲಿ ಈ ಸಾಲಿನಲ್ಲಿ 3898 ಮನೆಗಳ ನಿರ್ಮಾಣದ ಗುರಿ ಇದ್ದು, ಇದರಲ್ಲಿ 2500 ಮನೆಗಳು ಈಗಾಗಲೇ ನಿರ್ಮಾಣವಾಗಿವೆ. ಉಳಿದ ಮನೆಗಳ ನಿರ್ಮಾಣಕ್ಕೆ ಸಿಇಒ ಕ್ರಮ ವಹಿಸಬೇಕು’ ಎಂದು ಸಿಇಒ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಜಿ.ಡಿ. ವೀಣಾ ಮಾತನಾಡಿ ‘ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಯೋಜನೆಗಳು ಸಿಕ್ಕವರಿಗೇ ಸಿಗುತ್ತಿವೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಇನ್ನು ಮುಂದಾದರೂ ಅರ್ಹರಿಗೆ ತಲುಪಿಸಿ’ ಎಂದು ತಿಳಿಸಿದರು.

‘ವಸತಿ ಯೋಜನೆಗಳಿಗೆ ಸರ್ಕಾರಿ ಸ್ಥಳವಿಲ್ಲದಿದ್ದರೆ ನೀವೇ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಿ’ ಎಂದು ಉಪಕಾರ್ಯದರ್ಶಿ ಉಮೇಶ್‌ ತಿಳಿಸಿದರು.

‘ನಾವು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಆಗುವುದಿಲ್ಲ. ವಶಪಡಿಸಿಕೊಳ್ಳಲು ಮುಂದಾದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತಿದೆ’ ಎಂದು ಬಿಡದಿ ಹೋಬಳಿಯ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ತಿಳಿಸಿದರು.

‘ಅಧಿಕಾರಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದರೆ ನಾವು ಸಹಕಾರ ನೀಡುತ್ತೇವೆ. ಯಾವುದೇ ಚುನಾಯಿತ ಪ್ರತಿನಿಧಿಗಳು ಭೂಸ್ವಾಧೀನಕ್ಕೆ ಮುಂದಾಗುವುದಿಲ್ಲ. ಎಲ್ಲರಿಗೂ ಓಟ್‌ ಬ್ಯಾಂಕ್ ಬೇಕು’ ಎಂದರು.

₹1.20 ಲಕ್ಷ ಸಾಲುವುದಿಲ್ಲ: ‘ಗ್ರಾ.ಪಂ. ವತಿಯಿಂದ ಮನೆ ನಿರ್ಮಿಸಿಕೊಳ್ಳಲು ನೀಡುವ ₹1.20 ಲಕ್ಷ ಸಾಕಾಗುವುದಿಲ್ಲ. ಈ ಹಣದಿಂದ ಮನೆಯ ತಳಪಾಯ ಹಾಕಲು ಸಾಧ್ಯವಿಲ್ಲ. ಮನೆ ನಿರ್ಮಿಸಲು ಬೇಕಾಗುವ ವಸ್ತುಗಳೆಲ್ಲವೂ ದುಬಾರಿಯಾಗಿವೆ. ಆದ್ದರಿಂದ ಅಧಿಕಾರಿಗಳು ಸರ್ಕಾರದ ಗಮನವನ್ನು ಸೆಳೆದು ಅನುದಾನವನ್ನು ಹೆಚ್ಚಿಗೆ ಮಾಡಬೇಕು’ ಎಂದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ತಿಳಿಸಿದರು.

ಕನ್ನಡದಲ್ಲಿ ಸಿದ್ಧಪಡಿಸಿ: ಪಿಡಿಒಗಳು ಸಭೆಗಳಿಗೆ ನೀಡುವ ಮಾಹಿತಿಯನ್ನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಸಿದ್ಧಪಡಿಸಿ, ಸಭೆಗೆ ಪ್ರಸ್ತುತಪಡಿಸಿ ಎಂದು ಮುಲ್ಲೈಮುಹಿಲನ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್. ನಟರಾಜ್ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ದೊರೆಯುವ ಸೌಲಭ್ಯಗಳು ಜನರಿಗೆ ತಲುಪಿದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಅಧಿಕಾರಿಗಳು ಕ್ರಮಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜ್‌, ಸದಸ್ಯರಾದ ಮಂಜುನಾಥ್, ಪ್ರಭಾವತಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಮಾಮಣಿ, ಕಾರ್ಯನಿರ್ವಹಣಾಧಿಕಾರಿ ಬಾಬು ಇದ್ದರು.

**
105 ಶುದ್ಧ ನೀರು ಘಟಕಗಳು
ರಾಮನಗರ ತಾಲ್ಲೂಕಿನಲ್ಲಿ 105 ನೀರಿನ ಘಟಕಗಳಿದ್ದು, ಇದರಲ್ಲಿ 97 ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಕೈಲಾಂಚ ಹೋಬಳಿ ಬನ್ನಿಕುಪ್ಪೆ, ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಸಮಸ್ಯೆ ಇದೆ ಎಂದು ಮುಲ್ಲೈ ಮುಹಿಲನ್ ತಿಳಿಸಿದರು.

ಪಿಡಿಒ ಗಳು ನೀರಿನ ಘಟಕಗಳನ್ನು ಸರಿಪಡಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ 66 ಶುದ್ಧ ನೀರಿನ ಘಟಕಗಳ ನಿರ್ಮಾಣದ ಅನುಮತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಜನರಿಗೂ ಕುಡಿಯಲು ಶುದ್ಧವಾದ ನೀರು ದೊರೆಯಲಿ ಎಂಬ ಉದ್ದೇಶದಿಂದ ಶುದ್ಧ ನೀರಿನ ಘಟಕಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಬರಲಿದೆ. ಈಗಿನಿಂದಲೇ ಅಧಿಕಾರಿಗಳು ನೀರಿನ ಸಮಸ್ಯೆ ಉಂಟಾಗದಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಉಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT