ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂಬಾಕು ಉತ್ಪನ್ನಗಳ ದುಷ್ಪರಿಣಾಮ: ಕ್ರಮಕ್ಕೆ ಸೂಚನೆ

ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆ ನಡೆಸಿದ
Published 11 ಜುಲೈ 2024, 6:05 IST
Last Updated 11 ಜುಲೈ 2024, 6:05 IST
ಅಕ್ಷರ ಗಾತ್ರ

ರಾಮನಗರ: ‘ತಂಬಾಕು ಉತ್ಪನ್ನಗಳ ಸೇವನೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪ್ರಚಾರ ಮಾಡುವ ಜೊತೆಗೆ, ನಿಯಮಬಾಹಿರವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೀಡಿ ಅಥವಾ ಸಿಗರೇಟು ಸೇದುವವರಿಗಿಂತಲೂ ಅವರ ಸುತ್ತಮುತ್ತಲಿರುವ ಅಥವಾ ಆ ಪರಿಸರದಲ್ಲಿರುವ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯಾಪಕವಾಗಿ ದುಷ್ಪರಿಣಾಮ ಬೀರುತ್ತದೆ. ಅಂತವರು ಕ್ಯಾನರ್‌ಗೆ ಬಲಿಯಾಗುವ ಸಾಧ್ಯತೆಯೂ ಇದೆ. ಹಾಗಾಗಿ, ಧೂಮಪಾನಿಗಳೂ ಸೇರಿದಂತೆ ನಿಷ್ಟ್ರಿಯ ಧೂಮಪಾನಿಗಳ ಮೇಲೂ ಯಾವುದೇ ರೀತಿಯ ದುಷ್ಪರಿಣಾಮ ಬೀರದಂತೆ ತಂಬಾಕಿನ ಕೆಡಕುಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

‘ತಂಬಾಕು ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜು ಆವರಣ, ಸಾರ್ವಜನಿಕ ಸ್ಥಳ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಹಾಗೂ ಬಸ್‌ಗಳಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕು. ಬಸ್‌ಗಳಲ್ಲಿ ಬೀಡಿ, ಸಿಗರೇಟ್ ಸೇವನೆ ಕಂಡುಬಂದರೆ ಆಯಾ ಬಸ್ ಕಂಡಕ್ಟರ್‌ಗಳನ್ನೇ ನೇರ ಹೊಣೆ ಮಾಡಿ ಕ್ರಮಕೈಗೊಳ್ಳುವ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸುತ್ತೋಲೆ ಹೊರಡಿಸಬೇಕು’ ಎಂದು ಸಲಹೆ ನೀಡಿದರು.

‘ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಸೇವೆನೆಯ ಹಾನಿ ಬಗ್ಗೆ ಬ್ಯಾನರ್ ಅಳವಡಿಸಬೇಕು. ಕರಪತ್ರಗಳನ್ನು ವಿತರಿಸಬೇಕು. ಶಾಲಾ-ಕಾಲೇಜು ಆವರಣಗಳಲ್ಲಿ ಈಗಾಗಲೇ 100 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ತಂಬಾಕು ಸೇವನೆ ಹಾಗೂ ಮಾರಾಟ ನಿಷೇಧಿಸಿರುವ ಕಾರಣ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

‘ಚಲನಚಿತ್ರ ಮಂದಿರಗಳಲ್ಲಿ ಧೂಮಪಾನ ಕಂಡುಬಂದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಆ ಚಿತ್ರಮಂದಿರದ ಪರವಾನಿಗೆ ರದ್ದುಪಡಿಸಿ ನೋಟೀಸ್ ಜಾರಿಗೊಳಿಸಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ವ್ಯಾಪಕವಾಗಿ ಮಾಹಿತಿ ನೀಡಬೇಕು. ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡುವ ಸೂಚನಾ ಫಲಕ ಅಳವಡಿಸಬೇಕು’ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಆರ್‌ಸಿಎಚ್ ಅಧಿಕಾರಿ ಡಾ. ರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಿರಣ್ ಶಂಕರ್, ತಾಲ್ಲೂಕು ಮಟ್ಟದ ಆರೋಗ್ಯಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಕಾರ್ಮಿಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.

‘ಪರವಾನಗಿ ಪಡೆಯುವುದು ಕಡ್ಡಾಯ’

‘ನಗರ ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳ ಮಾರಾಟ ಮಾಡುವುದಕ್ಕೆ ನಗರಸಭೆಯಲ್ಲಿ ಪರವಾನಿಗೆ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒಗಳಿಂದ ಪರವಾನಗಿ ಪಡೆಯಬೇಕು. ಪರವಾನಗಿ ನೀಡುವ ಸಮಯದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ನಿಗದಿಪಡಿಸಿರುವ ಷರತ್ತುಗಳು ಹಾಗೂ ನಿಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇದನ್ನು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪಿಡಿಒಗಳು ನಿಗಾ ವಹಿಸಿ ಪರವಾನಗಿ ನೀಡಬೇಕು. ಆರೋಗ್ಯ ನಿರೀಕ್ಷಕರು ಸಹ ಗಮನ ನೀಡಬೇಕು’ ಎಂದು ಶಿವಾನಂದಮೂರ್ತಿ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT