ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರದ್ದು ಬ್ಲಾಕ್‌ ಮೇಲ್‌ ತಂತ್ರ: ಧನಂಜಯ ನಾಯ್ಕ್ ಆಕ್ರೋಶ

ಕೋವಿಡ್‌ ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲ: ಆರೋಪ
Last Updated 15 ಜುಲೈ 2020, 4:51 IST
ಅಕ್ಷರ ಗಾತ್ರ

ಮಾಗಡಿ: ಕೊರೊನಾ ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದವರನ್ನು ಇರಿಸಿರುವ ಕ್ವಾರಂಟೈನ್ ಕೇಂದ್ರಗಳು ಸೆಂಟ್ರಲ್ ಜೈಲು ಇದ್ದಂತೆ ಎಂದು ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾಜಿಕ ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ವಾರಂಟೈನ್ ಕೇಂದ್ರಗಳಲ್ಲಿ ಇಟ್ಟಿರುವ ಕೂಲಿ ಕಾರ್ಮಿಕರು ಹಸಿವಿನಿಂದ ಕಂಗಾಲಾಗಿದ್ದಾರೆ. ಕೊರೊನಾ ನೆಪದಿಂದ ಅಧಿಕಾರಿಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೋವಿಡ್ ಸೋಂಕು ನಿವಾರಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದು ಸಾವು –ನೋವಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ನೀಡಿರುವ ಹಣ ಎಷ್ಟು? ಎಂಬುದನ್ನು ಜಿಲ್ಲಾಧಿಕಾರಿ ಸಾರ್ವಜನಿಕವಾಗಿ ಪ್ರಕಟಿಸಲಿ. ಕೊರೊನಾ ಗಂಟಲು ದ್ರವ ತೆಗೆದು 8 ದಿನಗಳಾದರೂ ಫಲಿತಾಂಶ ಬರುತ್ತಿಲ್ಲ. ವಿಳಂಬದಿಂದಾಗಿ 7 ಜನರು ಮೃತಪಟ್ಟಿದ್ದಾರೆ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಎಚ್.ಸುರೇಶ್ ಮಾತನಾಡಿ, ಆಶಾ ಕಾರ್ಯಕರ್ತರು ಸಂಕಟದ ಸಮಯದಲ್ಲಿ ಮುಷ್ಕರ ಮಾಡುತ್ತಿರುವುದು ಬ್ಲಾಕ್ ಮೇಲ್ ತಂತ್ರವಾಗಿದೆ. ಜನಪ್ರತಿನಿಧಿಗಳು ಆಶಾ ಕಾರ್ಯಕರ್ತೆಯರ ಮೇಲೆ ತುಂಬಾ ವಿಶ್ವಾಸವಿಟ್ಟು ದಿನಸಿ ಕಿಟ್ ಮತ್ತು ವಸ್ತಗಳನ್ನು ನೀಡಿ ಗೌರವಿಸಿದ್ದಾರೆ. ಇಷ್ಟಾದರೂ ಮುಷ್ಕರದಲ್ಲಿ ಭಾಗವಹಿಸದಿರುವುದು ಸರಿಯಲ್ಲ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೋವಿಡ್ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿಲ್ಲ. ಅಧಿಕಾರಿಗಳು ಉಪಮುಖ್ಯಮಂತ್ರಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ನಿಲ್ಲಿಸಿ, ಕೋವಿಡ್ ಸೋಂಕಿತರಿಗೆ ಬೇಕಾದ ಅನುಕೂಲ ಮಾಡಿಕೊಡಲಿ. ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವಂತೆ ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಜಿ.ನರಸಿಂಹಮೂರ್ತಿ ಮಾತನಾಡಿ, ಬಡವರಿಗೆ ಜಾಬ್ ಕಾರ್ಡ್ ಮಾಡಿಕೊಡುವಲ್ಲಿ ಪಿಡಿಒಗಳು ಇನ್ನಿಲ್ಲದ ಉದಾಸೀನತೆ ತೋರಿಸುತ್ತಿದ್ದಾರೆ. ಇಒ ಕೂಡಲೇ ಪಿಡಿಒಗಳ ಸಭೆ ಕರೆದು ಬುದ್ಧಿವಾದ ಹೇಳಿ ಜನರಿಗೆ ಸೇವೆ ಸಲ್ಲಿಸುವಂತೆ ತಿಳಿ ಹೇಳಬೇಕು. ದನದ ಕೊಟ್ಟಿಗೆ ನಿರ್ಮಾಣದ ಬಿಲ್‌ 2ವರ್ಷವಾದರೂ ನೀಡಿಲ್ಲ. ನರೇಗಾ ಕಾಮಗಾರಿಯಲ್ಲಿ ಒಬ್ಬನೇ ವ್ಯಕ್ತಿ ಹತ್ತಾರು ಕಳಪೆ ಕಾಮಗಾರಿ ಮಾಡಿ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಇಒ ಟಿ.ಪ್ರದೀಪ್ ಮಾತನಾಡಿ, ತಾಲ್ಲೂಕಿನಲ್ಲಿ ₹50ಕೋಟಿ ವೆಚ್ಚದಲ್ಲಿ ನರೇಗಾ ಕಾಮಗಾರಿ ನಡೆದಿದೆ ಎಂದರು.ತಾ.ಪಂ ಸದಸ್ಯರಾದ ದಿವ್ಯಾರಾಣಿ ಚಂದ್ರಶೇಖರ್, ಶಿವಮ್ಮ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಶಂಕರ್, ತೋಟಗಾರಿಕೆ ನಾಗರಾಜು, ಲೋಕೋಪಯೋಗಿ ಇಲಾಖೆ ರಾಮಣ್ಣ, ಸಿಡಿಪಿಒ ಸುರೇಂದ್ರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT