ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂಸಾಚಾರ ಆತಂಕ: ಮತ ಕೇಂದ್ರದಲ್ಲಿ ಭದ್ರತೆ ಒದಗಿಸಲು ಆಯೋಗಕ್ಕೆ ಮಂಜುನಾಥ್ ಪತ್ರ

Published 2 ಜೂನ್ 2024, 23:58 IST
Last Updated 2 ಜೂನ್ 2024, 23:58 IST
ಅಕ್ಷರ ಗಾತ್ರ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ ಎಣಿಕೆ (ಜೂನ್ 4) ದಿನದಂದು ಹಿಂಸಾಚಾರ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಎಣಿಕೆ ಕೇಂದ್ರದಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

‘ಕ್ಷೇತ್ರದಲ್ಲಿ ಚುನಾವಣೆಗೆ ಮುಂಚೆ ಮತ್ತು ನಂತರವೂ ಮತದಾರರನ್ನು ಬೆದರಿಸುವ ಘಟನೆಗಳು ಗಮನಕ್ಕೆ ಬಂದಿವೆ. ನನಗೆ ಬಂದಿರುವ ವಿಶ್ವಸನೀಯ ಮಾಹಿತಿ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಸೋಲುವ ಸಾಧ್ಯತೆ ಕಂಡುಬಂದರೆ ಹಿಂಸಾಚಾರದ ಜೊತೆಗೆ, ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯಲಿವೆ’ ಎಂದು ಜೂನ್ 1ರಂದು ಬರೆದಿರುವ ಪತ್ರದಲ್ಲಿ
ತಿಳಿಸಿದ್ದಾರೆ.

‘ಸುರೇಶ್ ಅವರ ಸಹೋದರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ಪ್ರಭಾವ ಬೀರುವ ಜೊತೆಗೆ, ಸರ್ಕಾರಿ ವ್ಯವಸ್ಥೆಯೇ ಅಂತಹ ಕೃತ್ಯಕ್ಕೆ ಬಳಕೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಎಣಿಕೆ ಕಾರ್ಯವು ಶಾಂತಿಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

‘ಹಿಂಸಾಚಾರಕ್ಕೆ ಅವಕಾಶವಿಲ್ಲದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಎಣಿಕೆ ಕೇಂದ್ರದ ಬಳಿ ಪೊಲೀಸರು ಮತ್ತು ಹೆಚ್ಚುವರಿ ಅರೆ ಸೇನಾಪಡೆಗಳನ್ನು ನಿಯೋಜಿಸಬೇಕು. ಕೇಂದ್ರಕ್ಕೆ ಅನಧಿಕೃತವಾಗಿ ಯಾರೂ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಕೇಂದ್ರದ ಆವರಣಕ್ಕೆ ಬರುವ ಪಕ್ಷಗಳ ಏಜೆಂಟರು, ಅಧಿಕಾರಿಗಳು ಹಾಗೂ ಮಾಧ್ಯಮದವರ ಪೂರ್ವಾಪರವನ್ನು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆದವರಿಗೆ ಮಾತ್ರ ಎಣಿಕೆ ಕೇಂದ್ರಕ್ಕೆ ಪವೇಶ ನೀಡಬೇಕು. ಪ್ರವೇಶದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಐ.ಡಿ ಕಾರ್ಡ್ ಪರಿಶೀಲನೆ ಜೊತೆಗೆ ನಿಷೇಧಿತ ವಸ್ತುಗಳನ್ನು ಒಳಕ್ಕೆ ತಂದರೆ ಪ್ರವೇಶ ದ್ವಾರದಲ್ಲೇ ಪತ್ತೆಹಚ್ಚಲು ಮೆಟಲ್ ಡಿಟೆಕ್ಟರ್‌ ಅಳವಡಿಸಬೇಕು’ ಎಂದು ಸಲಹೆ
ನೀಡಿದ್ದಾರೆ.

‘ಎಣಿಕೆ ಕೇಂದ್ರದ ಒಳಗೆ ಮತ್ತು ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಪರಿಸ್ಥಿತಿಯ ಮೇಲೆ ನಿಗಾ ಇಡಬೇಕು. ಎಣಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಇಡೀ ಪ್ರಕ್ರಿಯೆಯನ್ನು ವೆಬ್ ಕ್ಯಾಸ್ಟಿಂಗ್‌ ಮಾಡಬೇಕು. ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಇದರ ಮೇಲ್ವಿಚಾರಣೆ ನಡೆಸಬೇಕು’ ಎಂದಿದ್ದಾರೆ.

‘ಹಿಂಸಾಚಾರದ ಮೂಲಕ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುವ ಪ್ರಯತ್ನ ನಡೆದರೆ, ತುರ್ತು ನಿರ್ವಹಣೆಗೆ ಮೊದಲೇ ಯೋಜನೆ ರೂಪಿಸಿಕೊಂಡಿರಬೇಕು. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ತಂಡಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು. ಎಣಿಕೆ ಕೇಂದ್ರದ ಬೆಳವಣಿಗೆಗಳ ಮೇಲೆ ನಿಗಾ ಇಡಲು ನಿರ್ವಹಣಾ ಕೋಶವನ್ನು ಸ್ಥಾಪಿಸಬೇಕು. ಕೇಂದ್ರದ ಇಂಚಿಂಚೂ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ತಿಳಿಸುವ ವ್ಯವಸ್ಥೆಯಾಗಬೇಕು’
ಎಂದು ಹೇಳಿದ್ದಾರೆ.

‘ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ, ಚುನಾವಣಾ ಪ್ರಕ್ರಿಯೆಯು ಮುಕ್ತ ಮತ್ತು
ನ್ಯಾಯಸಮ್ಮತವಾಗಿ ನಡೆಯಲು ಮೇಲಿನ ಸುರಕ್ಷತಾ ಮಾನದಂಡಗಳು ನಿರ್ಣಾಯಕವಾಗಿವೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಟ್ಟಿನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ, ಸರ್ಕಾರಿ ವ್ಯವಸ್ಥೆಯು ದುರುಪಯೋಗವಾದಂತೆ ಎಚ್ಚರಿಕೆ ವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಕಾಪಾಡುವ ಚುನಾವಣಾ ಆಯೋಗದ ಬದ್ಧತೆಯ ಮೇಲೆ ನನಗೆ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಎದುರಾಗಿರುವ ಆತಂಕವನ್ನು ಪರಿಹರಿಸುವ ನಿಟ್ಟಿನಲ್ಲಿ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT