ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಸರು ಬದಲಾವಣೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ

ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರುದ್ಧ ಹೋರಾಟ: ಬಿಜೆಪಿ ಮುಖಂಡ ಗೌತಮ್
Published 11 ಜುಲೈ 2024, 6:04 IST
Last Updated 11 ಜುಲೈ 2024, 6:04 IST
ಅಕ್ಷರ ಗಾತ್ರ

ರಾಮನಗರ: ‘ಅಭಿವೃದ್ಧಿ ಹೆಸರಿನಲ್ಲಿ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಹೆಸರು ಬದಲಾವಣೆ ವಿರುದ್ಧ ಬಿಜೆಪಿಯು ಹೋರಾಟ ನಡೆಸಲಿದೆ’ ಎಂದು ಬಿಜೆಪಿ ಮುಖಂಡ ಗೌತಮ್ ಗೌಡ ಹೇಳಿದರು.

‘ಕೇವಲ ಹೆಸರು ಬದಲಾವಣೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ಶಿವಕುಮಾರ್‌ಗೆ ಜಿಲ್ಲೆಯ ಅಭಿವೃದ್ಧಿ ಕುರಿತು ಬದ್ಧತೆ ಮತ್ತು ಇಚ್ಛಾಶಕ್ತಿ ಇದ್ದಿದ್ದರೆ, ರಾಮನಗರವನ್ನೇ ಬ್ರಾಂಡ್ ಆಗಿ ಮಾಡಿ ಅಭಿವೃದ್ಧಿ ಮಾಡಬೇಕಿತ್ತು. ರಾಮ ಎಂಬ ಹೆಸರಿನ ಬಗ್ಗೆ ಭಯಪಡುವ ಕಾಂಗ್ರೆಸ್‌ನವರು, ಯಾರನ್ನೋ ತುಷ್ಟೀಕರಿಸಲು ಹೆಸರು ಬದಲಾವಣೆಗೆ ಮುಂದಾಗಿದ್ದಾರೆ’ ಎಂದು ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ರಿಯಲ್ ಎಸ್ಟೇಟ್ ದಂಧೆಯೇ ಹೆಸರು ಬದಲಾವಣೆ ಹಿಂದಿರುವ ಉದ್ದೇಶ. ಇದರಿಂದ ಸಾವಿರಾರು ಎಕರೆ ಜಮೀನು ಹೊಂದಿರುವ ಡಿ.ಕೆ ಸಹೋದರರು ಹಾಗೂ ಅವರ ಹಿಂಬಾಲಕರಿಗಷ್ಟೇ ಅನುಕೂಲವಾಗಲಿದೆ. ಉಳಿದಂತೆ, ಜಿಲ್ಲೆಯ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಅಭಿವೃದ್ಧಿಯ ಮನಸ್ಥಿತಿ ಇಲ್ಲದವರು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಇಂತಹ ರಾಜಕೀಯ ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಮನಗರದ ಹೆಸರಿನ ಮೂಲದ ಬಗ್ಗೆ ಗೊತ್ತಿಲ್ಲದ ಕಾಂಗ್ರೆಸ್‌ನವರಿಗೆ, ಆ ಹೆಸರಿನ ಜೊತೆಗೆ ಜನರಿಗಿರುವ ಭಾವನಾತ್ಮಕ ಸಂಬಂಧದ ಅರಿವು ಹೇಗಾಗಬೇಕು. ಅದಕ್ಕಾಗಿಯೇ ಹೆಸರು ಬದಲಾಯಿಸಲು ಹೊರಟ್ಟಿದ್ದಾರೆ. ಸರ್ಕಾರ ಈ ಪ್ರಸ್ತಾವ ತಿರಸ್ಕರಿಸಬೇಕು. ಇಲ್ಲದಿದ್ದರೆ, ಪಕ್ಷವು ಜಿಲ್ಲೆಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ರುದ್ರದೇವರು, ಆರ್‌.ವಿ. ಸುರೇಶ್, ಶಿವಾನಂದ, ಹೇಮಾವತಿ, ಜೆಡಿಎಸ್‌ನ ಜಯಕುಮಾರ್ ಹಾಗೂ ಇತರರು ಇದ್ದರು.

- ‘ಸುರೇಶ್‌ ನೇಮಕ ಎಷ್ಟು ಸರಿ?’

‘ಕನಕಪುರ ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ನೇಮಕ ಮಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ಪರಂಪರೆ ಹುಟ್ಟು ಹಾಕಿದ್ದಾರೆ. ಸಾಮಾನ್ಯವಾಗಿ ಸ್ಥಳೀಯ ಶಾಸಕರೇ ಸಮಿತಿ ಅಧ್ಯಕ್ಷರಾಗುವುದು ವಾಡಿಕೆ. ಇಲ್ಲಿ ಅದಕ್ಕೆ ತಿಲಾಂಜಲಿ ಇಟ್ಟಿರುವ ಡಿಸಿಎಂ ತಮ್ಮ ಸಹೋದರನನ್ನೇ ನೇಮಿಸಿದ್ದಾರೆ’ ಎಂದು ಗೌತಮ್ ಗೌಡ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT