ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘28 ಕ್ಷೇತ್ರದಲ್ಲೂ ಬಿಎಸ್‌ಪಿ ಸ್ಪರ್ಧೆ’

ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧೆ: ಏ.10ರಂದು ಮೈಸೂರಿನಲ್ಲಿ ಮಾಯಾವತಿ ಪ್ರಚಾರ
Last Updated 15 ಮಾರ್ಚ್ 2019, 13:04 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ಬಿಎಸ್ಪಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, 28 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು’ ಎಂದು ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದರು.

‘ಈಗಾಗಲೇ ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯು ಅಂತಿಮಗೊಂಡಿದೆ. ಉಳಿದ 18 ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿದ್ದು, ಅಲ್ಲಿಯೂ ಅಂತಿಮ ತೀರ್ಮಾನ ಕೈಗೊಂಡು ಇನ್ನೆರಡು ದಿನದಲ್ಲಿ ಪಟ್ಟಿ ಪ್ರಕಟಿಸಲಾಗುವುದು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ಪಕ್ಷವು ಹೊರಬಂದಿದೆ. ಮೈತ್ರಿಯಿಂದಾಗಿ ಕೆಲವು ಕಡೆ ಪಕ್ಷ ಸಂಘಟನೆಗೆ ಹಿನ್ನಡೆ ಆಗಿತ್ತು. ಇದನ್ನು ಮನಗಂಡು ಪಕ್ಷದ ವರಿಷ್ಠರು ಸ್ವತಂತ್ರ ಸ್ಪರ್ಧೆಯ ತೀರ್ಮಾನಕ್ಕೆ ಬಂದಿದ್ದಾರೆ’ ಎಂದರು.

ಮೈಸೂರಿಗೆ ಮಾಯಾವತಿ: ಬಿಎಸ್ಪಿ ನಾಯಕಿ ಮಾಯಾವತಿ ಏಪ್ರಿಲ್ 10ರಂದು ಮೈಸೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪಕ್ಷದ ಮುಖಂಡ ಕೃಷ್ಣಪ್ಪ ಮಾತನಾಡಿ, ‘ಈ ಬಾರಿಯ ಲೋಕಸಭಾ ಚುನಾವಣೆಯು ಬಿಜೆಪಿ ಮತ್ತು ಬಿಎಸ್ಪಿ ನಡುವಿನ ಹೋರಾಟವಾಗಿದೆ. ಮಾಯಾವತಿ ಹೇಳಿದಂತೆ ಕಾಂಗ್ರೆಸ್‌ನಿಂದ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತಕ್ಕೆ ಜನ ಪಾಠ ಕಲಿಸಲಿದ್ದು, ಮಾಯಾವತಿ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ’ ಎಂದರು.

‘ಉತ್ತರ ಪ್ರದೇಶದಲ್ಲಿ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಈಗಾಗಲೇ ಮೈತ್ರಿ ಘೋಷಣೆ ಮಾಡಿದೆ. ಅಲ್ಲಿ 70 ಕ್ಷೇತ್ರಗಳಲ್ಲಿ ಮೈತ್ರಿಕೂಟ ಗೆಲುವು ಸಾಧಿಸಲಿದೆ’ ಎಂದರು.

‘ಬಿಜೆಪಿಯು ಪುಲ್ವಾಮ ದಾಳಿ ಹಾಗೂ ಯೋಧರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಕಳೆದ ಐದು ವರ್ಷದ ಅವಧಿಯಲ್ಲಿನ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು’ ಎಂದು ಸಲಹೆ ನೀಡಿದರು. ಮುಖಂಡರಾದ ಕೃಷ್ಣಮೂರ್ತಿ, ಮಲ್ಲಿಕಾರ್ಜುನ್, ಅನ್ನದಾನಪ್ಪ, ನಾಗೇಶ್‌ ಇದ್ದರು.

**
ಮೂವರ ಹೆಸರು ಶಿಫಾರಸು
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಬಿಸ್ಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿದೆ. ಪಕ್ಷದ ಮುಖಂಡರಾದ ಬಿ. ಅನ್ನದಾನಪ್ಪ, ಮಲ್ಲಿಕಾರ್ಜುನ ಸಹಿತ ಮೂವರು ಆಕಾಂಕ್ಷಿಗಳ ಹೆಸರನ್ನು ವರಿಷ್ಠರಿಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT