ಗುರುವಾರ , ಸೆಪ್ಟೆಂಬರ್ 19, 2019
24 °C
ಕನಕಪುರ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಾಹಿತಿ

ಕಾಡಂಚಿನ ಜಮೀನುಗಳಲ್ಲಿ ತಡೆಗೋಡೆ ನಿರ್ಮಿಸಿ

Published:
Updated:
Prajavani

ಉಯ್ಯಂಬಳ್ಳಿ (ಕನಕಪುರ): ‘ಜಮೀನುಗಳಿಗೆ ಕಾಡಾನೆ, ಕಾಡು ಪ್ರಾಣಿಗಳು ಬರದಂತೆ ತಡೆಗಟ್ಟಲು ರೈತರು ಕಾಡಂಚಿನ ತಮ್ಮ ಜಮೀನುಗಳಲ್ಲಿ ತಡೆಗೋಡೆ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ಬಾಬು ತಿಳಿಸಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಿ.ಸುಮಿತ್ರ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಆಲಕುಳಿ, ಅರಕೊಪ್ಪ, ಶಿವನೇಗೌಡನದೊಡ್ಡಿಯ ರೈತರು ಜಮೀನುಗಳಿಗೆ ಕಾಡಾನೆಗಳು ಮತ್ತು ಹಂದಿಗಳು ನಿರಂತರವಾಗಿ ದಾಳಿ ನಡೆಸಿ ಸಂಪೂರ್ಣ ಫಸಲನ್ನು ನಾಶ ಮಾಡುತ್ತಿದ್ದು ಹೇಗಾದರೂ ಮಾಡಿ ಪ್ರಾಣಿಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.

ಅದಕ್ಕೆ ಉತ್ತರಿಸಿದ ಮೋಹನ್‌ಬಾಬು, ‘ನಿಮ್ಮ ಸಮಸ್ಯೆ ಮತ್ತು ಕಷ್ಟ ನನಗೆ ಅರ್ಥವಾಗುತ್ತಿದೆ. ಅರಣ್ಯ ಇಲಾಖೆ ಈಗಾಗಲೆ ಆನೆ ಕಂದಕ ನಿರ್ಮಿಸಿದೆ. ರೈಲ್ವೇ ಬ್ಯಾರಿಕೇಡ್‌ ನಿರ್ಮಾಣ ಮಾಡುತ್ತಿದೆ. ಅದರ ಜತೆಗೆ ನಿಮ್ಮ ನಿಮ್ಮ ಜಮೀನುಗಳಲ್ಲಿ ಕಲ್ಲಿನಿಂದ ತಡೆಗೋಡೆ ನಿರ್ಮಿಸಿಕೊಳ್ಳಲು ನರೇಗಾದಲ್ಲಿ ಹೊಸದಾಗಿ ಅವಕಾಶ ಕಲ್ಪಿಸಿಕೊಡಲಾಗಿದೆ’ ಎಂದು ಹೇಳಿದರು.

ತಡೆಗೋಡೆ ನಿರ್ಮಿಸಿಕೊಳ್ಳುವ ರೈತರು ಗ್ರಾಮ ಸಭೆಯಲ್ಲಿ ಹೆಸರನ್ನು ಬರೆಯಿಸಿ ಕಾಮಗಾರಿ ಪಟ್ಟಿಯಲ್ಲಿ ಸೇರಿಸಬೇಕು, ಜಿಲ್ಲಾ ಪಂಚಾಯಿತಿಯಿಂದ ವರ್ಕ್‌ ಅಪ್ರೂವಲ್‌ ಪಡೆಯಲಾಗುವುದು. ನಂತರ ರೈತರು ತಮ್ಮ ಜಾಬ್‌ ಕಾರ್ಡ್‌ ಬಳಸಿ ತಡೆಗೋಡೆಯನ್ನು ನಿರ್ಮಿಸಬಹುದು. ಅರಣ್ಯದಲ್ಲಿ ಸಿಗುವಂತ ಕಾಡುಗಲ್ಲುಗಳನ್ನೇ ಬಳಸಿ ಸಿಮೆಂಟ್‌ನಿಂದ ನಿರ್ಮಾಣ ಮಾಡಿದರೆ ಸಾಕೆಂದು ತಿಳಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರವು 2019-20 ನೇ ವರ್ಷವನ್ನು ಜಲವರ್ಷವೆಂದು ಘೋಷಣೆ ಮಾಡಿ ಜಲಶಕ್ತಿ ಮತ್ತು ಜಲಾಮೃತ ಅಭಿಯಾನವನ್ನು ಜಾರಿಗೊಳಿಸಿದೆ ಎಂದರು.

ಇರುವ ನೀರನ್ನು ಜೋಪಾನ ಮಾಡುವುದು, ಅಂತರ್ಜಲ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸುವುದಾಗಿದೆ. ಇದರಡಿಯಲ್ಲಿ ಗೋಕಟ್ಟೆ ನಿರ್ಮಾಣ, ಚೆಕ್‌ಡ್ಯಾಂ ನಿರ್ಮಾಣ, ಕೆರೆ ಪುನಶ್ಚೇತನ, ಕುಂಟೆಗಳ ಅಭಿವೃದ್ಧಿ, ಕೊಳವೆಬಾವಿ ರೀಚಾರ್ಚ್‌, ಕಲ್ಯಾಣಿ ನಿರ್ಮಾಣ ಮಾಡಬಹುದಾಗಿದೆ. ರೈತರು ಈ ಕಾಮಗಾರಿಗಳನ್ನು ಮಾಡಬಹುದಾಗಿದೆ ಎಂದರು.

ಬರಗಾಲ ಎದುರಾಗಿರುವುದರಿಂದ ಸರ್ಕಾರವು ಹಸಿರೀಕರಣ ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ರೈತರು ಎಲ್ಲಿ ಅವಕಾಶವಿದೆಯೋ ಅಲ್ಲಿ ಅಥವಾ ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಬಹುದಾಗಿದೆ. ಒಂದು ಗಿಡಕ್ಕೆ ₹ 80 ಸಿಗುತ್ತದೆ. ಎಲ್ಲರೂ ಈ ಯೋಜನೆಯನ್ನು ಬಳಸಿ ಮರಗಳನ್ನು ಬೆಳಸಬೇಕೆಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಮಾದನಾಯ್ಕ್‌ ಮಾತನಾಡಿ, ‘ನಮ್ಮ ಪಂಚಾಯಿತಿಯಲ್ಲಿ ಕುಡಿಯುವ ನೀರು, ಮೂಲ ಸೌಕರ್ಯಗಳ ಕೊರತೆಯಿಲ್ಲ. ಇಲ್ಲಿ ಪ್ರಮುಖವಾಗಿ ನಮ್ಮ ರೈತರಿಗೆ ಕಾಡುಪ್ರಾಣಿಗಳ ಸಮಸ್ಯೆಯಿದೆ. ಕಾಡು ಪ್ರಾಣಿಗಳ ತಡೆಗೆ ಶಾಶ್ವತ ಪರಿಹಾರವನ್ನು ದೊರಕಿಸಿಕೊಟ್ಟರೆ ರೈತರು ನೆಮ್ಮದಿಯಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಾರೆ’ ಎಂದು ತಿಳಿಸಿದರು.

ಪಂಚಾಯಿತಿಯಲ್ಲಿ ಇಲ್ಲಿಯವರೆಗೂ ಯಾರು ಶೌಚಾಲಯ ನಿರ್ಮಾಣ ಮಾಡಿಕೊಂಡಿಲ್ಲವೋ ಅವರಿಗೆ ಮಾಡಿಕೊಳ್ಳಲು ಈಗಲೂ ಅವಕಾಶವಿದೆ. ಶೌಚಾಲಯ ನಿರ್ಮಾಣಕ್ಕೆ ₹ 12 ಸಾವಿರ ಸಹಾಯಧನ ಸಿಗುತ್ತಿದ್ದು ರೈತರು ಶೀಘ್ರವಾಗಿ ಶೌಚಾಲಯ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಂಡರು.

ಸಭೆಯಲ್ಲಿ ರೈತರು ಲಕ್ಷಾಂತರ ರೂಪಾಯಿ ಬೆಳೆ ನಾಶವಾದರೂ ಚಿಲ್ಲರೆಯಾಗಿ ಪರಿಹಾರವನ್ನು ಕೊಡುತ್ತಾರೆ. ₹ 2 ಸಾವಿರ ಸಿಗುವ ಪರಿಹಾರಕ್ಕೆ ₹ 5 ಸಾವಿರ ಖರ್ಚು ಮಾಡಿ ಒಂದು ವರ್ಷವಾದ ಮೇಲೆ ಪಡೆಯಬೇಕಿದೆ. ಇಂತಹ ಪರಿಹಾರ ನಮಗೆ ಬೇಕಿಲ್ಲ. ಕಾಡು ಹಂದಿ ಮತ್ತು ಜಿಂಕೆಗಳು ನೆಲಗಡಲೆ ಮತ್ತು ರೇಷ್ಮೆ ಸೊಪ್ಪನ್ನು ತಿಂದು ನಾಶ ಮಾಡುತ್ತವೆ. ಇವುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.

ಅದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿ ರಾಜೇಶ್‌, ‘ನಾನು ಒಬ್ಬ ಕೆಳಹಂತದ ಅಧಿಕಾರಿ, ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿದ್ದೇನೆ. ನೀವು ಎಲ್ಲರೂ ಒಟ್ಟಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ, ಇಲ್ಲವೇ ಸರ್ಕಾರಕ್ಕೆ ನೇರವಾಗಿ ಪತ್ರವ್ಯವಹಾರ ಮಾಡಿ, ಜನಶಕ್ತಿ ಮುಂದೆ ಯಾರು ಸಮಾನರಲ್ಲ. ನೀವುಗಳೆಲ್ಲಾ ಒಟ್ಟಾಗಿ ಹೋರಾಟ ಮಾಡಬೇಕೆಂದು’ ಸಲಹೆ ನೀಡಿದರು.

ಸಭೆಯಲ್ಲಿ ಸಹಾಯಕ ಕೃಷಿ ಅಧಿಕಾರಿ ಮಂಜುಳ, ರೇಷ್ಮೆ ವಿಸ್ತರಣಾಧಿಕಾರಿ ಎಚ್‌.ಸಿ. ಸುರೇಶ್‌, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಣ್ಣ ನಾಯ್ಕ್‌ ಇಲಾಖೆಗಳ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು.

ಪಂಚಾಯಿತಿ ಅಧ್ಯಕ್ಷ ಜಿ. ಸುಮಿತ್ರ ಕುಮಾರ್‌, ನರೇಗಾ ಎಂಜಿನಿಯರ್‌ ಸಚಿನ್‌ಗೌಡ, ಪಂಚಾಯಿತಿ ಎಸ್‌ಡಿಎ ಸಿದ್ದು ದೇವದುರ್ಗ, ಸಿಬ್ಬಂದಿ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

 

Post Comments (+)