ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ ಆರೋಗ್ಯ ಕೇಂದ್ರದಲ್ಲಿ ಸಿಸೇರಿಯನ್‌ ಶಸ್ತ್ರಚಿಕಿತ್ಸೆ

Last Updated 29 ಡಿಸೆಂಬರ್ 2019, 16:30 IST
ಅಕ್ಷರ ಗಾತ್ರ

ಹಾರೋಹಳ್ಳಿ (ಕನಕಪುರ): ಈ ಭಾಗದ ಜನತೆಗೆ ಅನುಕೂಲವಾಗುವಂತೆ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಶಸ್ತ್ರಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗಿದೆ. ಜನರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್‌ ಹೇಳಿದರು.

ಇಲ್ಲಿನ ಹಾರೋಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಿಸೇರಿಯನ್‌ ಶಸ್ತ್ರಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿದರು.

ಹಾರೋಹಳ್ಳಿ ಕೈಗಾರಿಕಾ ಪ್ರದೇಶವಾಗಿ ವೇಗವಾಗಿ ಬೆಳೆಯುತ್ತಿದೆ. ಹಾರೋಹಳ್ಳಿ ಮರಳವಾಡಿ ಹೋಬಳಿಯ ಜನತೆ ಹೆಚ್ಚಿನ ಆರೋಗ್ಯ ಸೇವೆಗೆ ಈ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಸಮಸ್ಯೆ ಉಂಟಾದಾಗ ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಸಿಸೇರಿಯನ್‌ ಮಾಡಬೇಕಾಗುತ್ತದೆ ಎಂದರು.

ಆ ಒಂದು ಸೇವೆಯು ಹಾರೋಹಳ್ಳಿ ಸಮುದಾಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸದಿದ್ದರಿಂದ ಕನಕಪುರ ಅಥವಾ ಬೆಂಗಳೂರಿಗೆ ಕಳಿಸಬೇಕಿದ್ದು ಜನತೆ ಇಂಥ ಚಿಕಿತ್ಸೆ ಘಟಕವನ್ನು ಪ್ರಾರಂಭಿಸುವಂತೆ ಒತ್ತಾಯಿಸುತ್ತಿದ್ದರು ಎಂದು ತಿಳಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜು ಮಾತನಾಡಿ, ಈ ಸಮುದಾಯ ಕೇಂದ್ರವನ್ನು ಕೆರೆಯಲ್ಲಿ ನಿರ್ಮಾಣ ಮಾಡಿರುವುದರಿಂದ ಮಳೆಗಾಲದಲ್ಲಿ ಕೆರೆ ತುಂಬಿ ತುಂಬಾ ತೊಂದರೆ ಆಗುತ್ತದೆ. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ದೊರಕಸಿಕೊಡುವುದು ಕಷ್ಟವಾಗುತ್ತದೆ. ಅಲ್ಲದೆ ಇಲ್ಲಿನ ಪೀಠೋಪಕರಣಗಳು, ಆಸ್ಪತ್ರೆಯ ಒಳಾಂಗಣದಲ್ಲಿ ತೇವಾಂಶ ಉಂಟಾಗುತ್ತದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ 100 ಹಾಸಿಗೆಗಳ ಕಟ್ಟಡ ನಿರ್ಮಿಸಬೇಕಿದೆ ಎಂದು ಮನವಿ ಮಾಡಿದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಕುಟುಂಬ ಕಲ್ಯಾಣ (ಆರ್‌ಸಿಎಚ್‌) ಅಧಿಕಾರಿ ಡಾ.ಜಿ.ಎಲ್‌. ಪದ್ಮಾ ಮಾತನಾಡಿ, ಇಲ್ಲಿ ಶಸ್ತ್ರಚಿಕಿತ್ಸೆ ಘಟಕ ಪ್ರಾರಂಭಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು ಎಂದರು.

ಎಲ್ಲ ಅನುಕೂಲಗಳು ಇದ್ದುದರಿಂದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಶಸ್ತ್ರಚಿಕಿತ್ಸಾ ಘಟಕವನ್ನು ಇಂದು ಪ್ರಾರಂಭಿಸಿದ್ದೇವೆ. ಮೊದಲ ದಿನವೇ ಇಬ್ಬರು ಮಹಿಳೆಯರಿಗೆ ಸಿಸೇರಿಯನ್‌ ಶಸ್ತ್ರಚಿಕಿತ್ಸೆ ಮಾಡಿದ್ದು ಯಶಸ್ವಿಯಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿ ಇದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ (ಡಿಎಲ್‌ಒ) ಡಾ. ಮಂಜುನಾಥ್‌, ಡಾ. ರಘು ಗೋಖಲೆ, ಡಾ. ಪ್ರಕೃತಿ, ಸ್ಥಳೀಯ ಮುಖಂಡರಾದ ಎಂ.ಮಲ್ಲಪ್ಪ, ಪುರುಷೋತ್ತಮ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT