ಪ್ರಚಾರ ಕಾರ್ಯಕ್ಕೆ ಮಕ್ಕಳ ಬಳಕೆ; ಅಧಿಕಾರಿಗಳು ಕಣ್ಣಿದ್ದು ಕುರುಡು

ಶುಕ್ರವಾರ, ಏಪ್ರಿಲ್ 26, 2019
35 °C
ಪೋಷಕರಲ್ಲೂ ಅರಿವಿನ ಕೊರತೆ

ಪ್ರಚಾರ ಕಾರ್ಯಕ್ಕೆ ಮಕ್ಕಳ ಬಳಕೆ; ಅಧಿಕಾರಿಗಳು ಕಣ್ಣಿದ್ದು ಕುರುಡು

Published:
Updated:
Prajavani

ರಾಮನಗರ: ಮತದಾನ ಮಾಡಲು 18 ವರ್ಷ ತುಂಬಿರಬೇಕು. ಆದರೆ ಪಕ್ಷದ ಪರ ಪ್ರಚಾರ ಮಾಡಲು ಎಷ್ಟು ವಯಸ್ಸಿನವರಾಗಿರಬೇಕು?

–ಇಂತಹದ್ದೊಂದು ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಲೇ ಇದೆ. ಮಕ್ಕಳಿಗೆ ಮತದಾನದ ಹಕ್ಕಿಲ್ಲದಿದ್ದರೂ ಅವರನ್ನು ಪ್ರಚಾರದ ಸರಕಾಗಿ ಬಳಸಿಕೊಳ್ಳಲಾಗುತ್ತಿದೆ, ಹಲವು ಕಾನೂನು–ಕಟ್ಟಳೆಗಳ ನಡುವೆಯೂ ಇದಕ್ಕೆ ಸಂಪೂರ್ಣ ನಿಯಂತ್ರಣ ಹಾಕಲು ಇನ್ನೂ ಆಗಿಲ್ಲ.

ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದ್ದು, ಹಳ್ಳಿ–ಹಳ್ಳಿಗಳಲ್ಲಿ ಮತಯಾಚನೆ ಕಾರ್ಯ ಭರ್ಜರಿಯಾಗಿ ನಡೆದಿದೆ. ಆದರೆ ಹೀಗೆ ನಡೆಯುವ ಪ್ರಚಾರ ಸಭೆಗಳು, ರೋಡ್‌ಶೋಗಳಲ್ಲಿ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ವಿವಿಧ ಪಕ್ಷಗಳ ಬಾವುಟ, ಶಾಲು ಹಿಡಿದು ಓಡಾಡತೊಡಗಿದ್ದಾರೆ.

ಬಹುತೇಕ ಎಲ್ಲ ಪಕ್ಷಗಳೂ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಅದರಲ್ಲೂ ರೋಡ್‌ ಶೋಗಳಲ್ಲಿ ಕರಪತ್ರ ಹಂಚುತ್ತಾ, ಮನೆಮನೆಗೆ ಪ್ರಚಾರ ಸಾಮಗ್ರಿಗಳನ್ನು ತಲುಪಿಸುತ್ತಾ ಪುಟಾಣಿಗಳು ಓಡಾಡಿಕೊಂಡಿದ್ದಾರೆ.

ಅರಿವಿನ ಕೊರತೆ

ಮಕ್ಕಳನ್ನು ರಾಜಕೀಯ ಪ್ರಚಾರಗಳಿಗೆ ಬಳಸಬಾರದು ಎನ್ನುವ ಅರಿವು ಬಹುತೇಕ ಪೋಷಕರಿಗೆ ಇದ್ದಂತೆ ಇಲ್ಲ. ಕೆಲವರು ಪ್ರಚಾರ ಸಭೆಗಳಿಗೆ ತಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯುತ್ತಿದ್ದಾರೆ. ಇನ್ನೂ ಕೆಲವು ಕಡೆ ಮಕ್ಕಳು ತಾವಾಗಿಯೇ ಬಂದು ಪಕ್ಷಗಳ ಬಾವುಟ ಹಿಡಿದು ಓಡಾಡಿಕೊಂಡಿವೆ. ಬುದ್ಧಿವಾದ ಹೇಳಬೇಕಾದ ಹಿರಿಯರು ಕಂಡು ಕಾಣದಂತೆ ಇದ್ದಾರೆ.

‘ರಾಜಕೀಯದ ಗಂಧ–ಗಾಳಿಯೂ ಗೊತ್ತಿಲ್ಲದ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ತಪ್ಪು. ಪೋಷಕರು ಇಂತಹ ಕಾರ್ಯಗಳಿಗೆ ತಮ್ಮ ಮಕ್ಕಳು ಬಳಕೆ ಆಗದಂತೆ ಎಚ್ಚರ ವಹಿಸಬೇಕು’ ಎನ್ನುತ್ತಾರೆ ರಾಮನಗರದ ನಿವಾಸಿ ಹನುಮಂತು.

ಕಣ್ಣಿದ್ದು ಕುರುಡು

‘ಬಹುತೇಕ ಪ್ರಚಾರಗಳ ಮೇಲೆ ಪೊಲೀಸರು, ಚುನಾವಣಾ ಸಿಬ್ಬಂದಿ ಕಣ್ಣಿಟ್ಟಿರುತ್ತಾರೆ. ಕೆಲವು ಕಡೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದನ್ನು ಕಂಡೂ ಕಾಣದಂತೆ ಹೋಗುತ್ತಾರೆ. ಪ್ರಶ್ನಿಸಿದರೆ ಪಕ್ಷಗಳ ಮುಖಂಡರು ತಿರುಗಿ ಬೀಳಬಹುದು ಎನ್ನುವ ಭಯ ಅವರದ್ದು’ ಎನ್ನುತ್ತಾರೆ ಹಿರಿಯರಾದ ರಾಜಣ್ಣ.

ಇಂತಹ ಘಟನೆಗಳು ನಡೆದಾಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕು. ಆಗ ಮಕ್ಕಳ ಬಳಕೆ ತಪ್ಪಬಹುದು ಎನ್ನುವುದು ಅವರ ಅಭಿಪ್ರಾಯ.

ಕಾನೂನು ಕ್ರಮಕ್ಕೆ ಅವಕಾಶ ಉಂಟು

‘14 ವರ್ಷ ಒಳಗಿನ ಮಕ್ಕಳನ್ನು ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಸುವುದು ಬಾಲ ಕಾರ್ಮಿಕ ಕಾಯ್ದೆಯ ಅಡಿ ಅಪರಾಧವಾಗುತ್ತದೆ. ಅಂತಹ ಕೃತ್ಯಗಳಿಗೆ ಕಾನೂನಿನ ಅಡಿ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ವಿಧಿಸಬಹುದಾಗಿದೆ’ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಪಿ. ವಿಜಯ್‌.

‘ಸದ್ಯ ರಾಮನಗರ ವ್ಯಾಪ್ತಿಯಲ್ಲಿ ಅಂತಹ ಘಟನೆಗಳು ವರದಿ ಆಗಿಲ್ಲ. ಈ ಬಗ್ಗೆ ಎಲ್ಲ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿ ಪರಿಶೀಲಿಸಲಾಗುವುದು. ಸಾರ್ವಜನಿಕರು ಅಂತಹ ಪ್ರಕರಣಗಳು ಕಂಡುಬಂದಲ್ಲಿ ಚುನಾವಣಾ ಸಿಬ್ಬಂದಿಗೆ ಮಾಹಿತಿ ನೀಡಬೇಕು’ ಎನ್ನುತ್ತಾರೆ ಅವರು.

* 14 ವರ್ಷ ಒಳಗಿನ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ತಪ್ಪು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು
–ಬಿ.ಪಿ. ವಿಜಯ್‌
ಸಹಾಯಕ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !