ಕನಕಪುರ: ಗ್ರಾಮಸ್ಥರ ದೂರಿನ ಮೇರೆಗೆ ಒತ್ತುವರಿಯಾಗಿದ್ದ ನಕಾಶೆ ರಸ್ತೆಯನ್ನು ಪೊಲೀಸರು ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಗುರುವಾರ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಿದರು.
ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿ ಗ್ರಾಮದ ಸರ್ಕಾರಿ ನಕಾಶೆ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದರು.
ತಹಶೀಲ್ದಾರ್ ಆದೇಶದಂತೆ ಉಪ ತಹಶೀಲ್ದಾರ್ ಹನುಮಂತ ಕುಮಾರ್, ರಾಜಸ್ವ ನಿರೀಕ್ಷಕ ರಜತ್ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಾತನೂರು ಪೊಲೀಸರು ಒತ್ತುವರಿಯಾಗಿದ್ದ ನಕಾಶೆ ರಸ್ತೆಯನ್ನು ಸರ್ವೆ ನಡೆಸಿ ತೆರವುಗೊಳಿಸಿದರು.
ನಕಾಶೆ ರಸ್ತೆಯ ಸುಮಾರು ಎಂಟು ಅಡಿ ಅಗಲವಿದ್ದ ಕಾಲುದಾರಿ ರಸ್ತೆಯನ್ನು ಒಂದು ಕಿಲೋಮೀಟರ್‌ವರೆಗೆ ಒತ್ತುವರಿ ಮಾಡಿದ್ದು, ಒತ್ತುವರಿಯಾಗಿದ್ದ ರಸ್ತೆ ಜಾಗವನ್ನು ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು.