ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿಗಳ ಸ್ಥಳಾಂತರ: ಕೋವಿಡ್‌ ಮಾರ್ಗಸೂಚಿ ಪಾಲನೆಗೆ ತಾಕೀತು

Last Updated 27 ಏಪ್ರಿಲ್ 2021, 2:47 IST
ಅಕ್ಷರ ಗಾತ್ರ

ಕನಕಪುರ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹಾಗೂ ಜನರ ಗುಂಪನ್ನು ಕಡಿಮೆ ಮಾಡಲು ತಾಲ್ಲೂಕು ಆಡಳಿತ, ನಗರಸಭೆ ಅಧಿಕಾರಿಗಳು ಇಲ್ಲಿನ ಹೂವಿನ ಮಾರುಕಟ್ಟೆಯಲ್ಲಿ ಗುಂಪಾಗಿದ್ದ ಹಣ್ಣು, ತರಕಾರಿ, ಹೂವಿನ ಅಂಗಡಿಗಳನ್ನು ಉರ್ದುಶಾಲೆಯ ಬಯಲು ಪ್ರದೇಶಕ್ಕೆ ಸ್ಥಳಾಂತರಿಸಿದರು.

ಅಂಗಡಿಗಳು ಒಂದೇ ಕಡೆ ಮತ್ತು ಸಾಲಿನಲ್ಲಿ ಇದ್ದುದರಿಂದ ಜನರು ಖರೀದಿಗೆ ಗುಂಪು ಸೇರುತ್ತಿದ್ದು ಸೋಂಕು ಹರಡಲು ಕಾರಣವಾಗಿತ್ತು. ಸೋಮವಾರ ಬೆಳಿಗ್ಗೆ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷ ಮುಕ್ಬುಲ್‌ಪಾಷ, ಪೌರಾಯುಕ್ತ ರಾಘವೇಂದ್ರ, ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ, ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ತಹಶೀಲ್ದಾರ್‌ ವಿಶ್ವನಾಥ್‌ ಮಾತನಾಡಿ, ಸರ್ಕಾರ ಸೋಂಕು ತಡೆಗಾಗಿ ಕೊರೊನಾ ನಿಯಮಗಳನ್ನು ಜಾರಿಗೊಳಿಸಿದೆ. ಅದನ್ನು ಸಾರ್ವಜನಿಕರು ಪಾಲನೆ ಮಾಡಬೇಕಿದೆ. ಒಂದು ವೇಳೆ ಮಾಡದಿದ್ದರೆ ಅನಿವಾರ್ಯವಾಗಿ ಕಠಿಣ ಕ್ರಮ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಮಂಗಳವಾರದಿಂದ 10 ದಿನಗಳ ಕಾಲ ಲಾಕ್‌ಡೌನ್‌ ಆಗಲಿದೆ. ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಅಂಗಡಿಗಳಲ್ಲಿ ಅಂತರ ಕಾಯ್ದುಕೊಂಡು ಖರೀದಿ ಮಾಡಬೇಕು. ಒಂದು ವೇಳೆ ನಿಯಮ ಪಾಲನೆ ಮಾಡದಿದ್ದರೆ ಸಂಬಂಧಪಟ್ಟ ಅಂಗಡಿಗಳನ್ನು ಮುಚ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಾಸ್‌: ಲಾಕ್‌ಡೌನ್‌ ಸಮಯದಲ್ಲಿ ಅಗತ್ಯ ಸೇವೆಗಳಿಗೆ ತೆರಳುವ ವ್ಯಕ್ತಿಗಳಿಗೆ ಪಾಸ್‌ ನೀಡಲಾಗುವುದು. ಪಾಸ್‌ ಇಲ್ಲದೆ ಓಡಾಡುವವರ ವಾಹನಗಳನ್ನು ಸೀಜ್‌ ಮಾಡಿ ಕೇಸ್‌ ದಾಖಲು ಮಾಡಲಾಗುವುದು. ಸೋಂಕು ತಡೆಗಟ್ಟುವಲ್ಲಿ ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಿದೆ. ಜನತೆ ಹೊರಗಡೆ ಬಾರದೆ ಮನೆಯಲ್ಲೇ ಉಳಿದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮುಗಿಬಿದ್ದ ಗ್ರಾಹಕರು: ಸೋಂಕು ನಿಯಂತ್ರಣಕ್ಕೆ ಜನರ ಹೊರಬರದಂತೆ ತಡೆಗಟ್ಟಬೇಕು. ಸೋಂಕಿನ ಸರಪಳಿ ತುಂಡರಿಸಬೇಕೆಂದು ಸರ್ಕಾರ ಲಾಕ್‌ಡೌನ್‌ ಮಾಡಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ಗಂಟೆವರೆಗೆ ಅವಕಾಶ ಕಲ್ಪಿಸಿದೆ. ಆದರೆ, ಜನರು ಖರೀದಿ ವೇಳೆ ಅಂತರ ಕಾಯ್ದುಕೊಳ್ಳದೆ ನಾ ಮುಂದು ತಾ ಮುಂದು ಎಂದು ವಸ್ತುಗಳ ಖರೀದಿಗೆ ಮುಗಿಬಿದ್ದಿದು ಎಲ್ಲೆಡೆ ಕಂಡುಬಂದಿತು.ಭಾನುವಾರ ಮಾಂಸದ ಅಂಗಡಿಗಳ ಮುಂದೆ ಜಾತ್ರೆ ರೀತಿಯಲ್ಲಿ ಜನ ಸೇರಿದ್ದರು.

ಮಾಸ್ಕ್‌ ವಿತರಣೆ: ಬಿಜೆಪಿ ತಾಲ್ಲೂಕು ಯುವ ಘಟಕದಿಂದ ಗ್ರಾಮಗಳಲ್ಲಿ ಉಚಿತವಾಗಿ ಮಾಸ್ಕ್‌ ವಿತರಣೆ ಮಾಡಿ ಸೋಂಕು ಹರಡದಂತೆ ಜಾಗೃತಿ ಮಾಡಿಸುವ ಕೆಲಸ ನಡೆಯಿತು.

ಬಿಜೆಪಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಗನ್ನಾಥ್‌ಗೌಡ ನೇತೃತ್ವದಲ್ಲಿ ಯುವ ಘಟಕದ ಪದಾಧಿಕಾರಿಗಳಾದ ಸ್ಫೂರ್ತಿಕುಮಾರ್‌, ಅಂಕೇಶ್‌ಗೌಡ, ಮುತ್ತುರಾಜು, ಮಹೇಶ್‌, ಕೆಂಪೇಗೌಡ, ಮಂಜುನಾಥ್‌ ಮಾಸ್ಕ್‌ ವಿತರಿಸಿದರು.

ಸೋಂಕಿನಿಂದ ರಕ್ಷಿಸಿಕೊಳ್ಳಲು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಧರಿಸುವ ಮಾಸ್ಕ್‌ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದಲ್ಲದೆ ಮುಖ ಮತ್ತು ಬಾಯಿಗೆ ಸರಿಯಾಗಿ ಹಾಕಿಕೊಳ್ಳಬೇಕು. ಪದೇ ಪದೇ ಕೈಯಿಂದ ಮುಟ್ಟಬಾರದು. ಪ್ರತಿದಿನ ಶುದ್ಧೀಕರಿಸದ ಮಾಸ್ಕ್‌ ಬಳಸಬೇಕು. ವ್ಯಕ್ತಿಯಿಂದ ಕನಿಷ್ಠ 3 ಅಡಿಗಳ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT