ಮಂಗಳವಾರ, ಸೆಪ್ಟೆಂಬರ್ 28, 2021
21 °C
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರೈತ ಸಂಘದಿಂದ ಗಿಡ ವಿತರಣೆ

ಕೈಗಾರಿಕೆಗಳಿಂದಲೇ ಮರಗಳ ನಾಶ: ಚಂದ್ರಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಪರಿಸರ ಸಮತೋಲನಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಒಂದು ವರ್ಷಕ್ಕೆ ಒಂದು ಗಿಡವನ್ನು ನೆಟ್ಟು ಬೆಳೆಸುವ ಕೆಲಸ ಮಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರೈತ ಸಂಘದ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಆಯೋಜನೆ ಮಾಡಿದ್ದ ಗಿಡ ನೆಡುವ ಹಾಗೂ ಗಿಡಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಕೃತಿಕವಾಗಿ ಬೆಳೆದಿದ್ದ ಮರಗಳನ್ನು ಕಡಿದು ನಾಶ ಮಾಡುತ್ತಿದ್ದೇವೆ. ಒಂದು ಕಡೆ ಕೈಗಾರಿಕೆ ಪ್ರದೇಶ ಅಭಿವೃದ್ಧಿ, ಮತ್ತೊಂದು ಕಡೆ ರಸ್ತೆ ಅಗಲೀಕರಣದ ವೇಳೆ ನೂರಾರು ವರ್ಷದಿಂದ ಬೆಳೆದಿದ್ದ ಮರಗಳನ್ನು ನಾಶ ಮಾಡುತ್ತಿದ್ದೇವೆ’ ಎಂದರು.

‘ಅರಣ್ಯ ಇಲಾಖೆಯ ಪ್ರಕಾರ ಒಂದು ಮರವನ್ನು ಕಡಿಯಬೇಕಾದರೆ ಮತ್ತೊಂದು ಮರವನ್ನು ಬೆಳೆಸಬೇಕೆಂಬ ನಿಯಮ ಮಾಡಿದೆ. ಆದರೆ ಅದು ಎಲ್ಲೂ ಜಾರಿಯಾಗುತ್ತಿಲ್ಲ. ರಸ್ತೆ ಬದಿಯಲ್ಲಿ ಸಾವಿರಾರು ಮರಗಳನ್ನು ಕಡಿದು ನಾಶ ಮಾಡಿದ ಹೆದ್ದಾರಿ ಪ್ರಾಧಿಕಾರದವರು 5 ವರ್ಷಗಳಾದರು ಒಂದು ಸಸಿಯನ್ನು ನೆಟ್ಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಐಡಿಬಿಯವರು 2005 ರಿಂದಲೇ ಇಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ನೈಸರ್ಗಿಕವಾಗಿ ಬೆಳೆದಿದ್ದ ಮರಗಳನ್ನು ನಾಶ ಮಾಡಿ ಭೂಮಿ ಸಮತಟ್ಟು ಮಾಡಿದರು. ಆದರೆ ಕೇವಲ ಶೇ 5ರಷ್ಟು ಮಾತ್ರ ಕೈಗಾರಿಕೆಗಳು ಬಂದಿವೆ. ಉಳಿದ ಭೂಮಿ ಇನ್ನು ಖಾಲಿಯಿದೆ. ಆದರೆ ಕೆಐಡಿಬಿ ನಾಲ್ಕನೇ ಹಂತದವರಿಗೆ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ಅದರಲ್ಲಿದ್ದ ಮರಗಳನ್ನು ನಾಶ ಮಾಡಿದ್ದಾರೆ’ ಎಂದು ದೂರಿದರು.

‘ಕೈಗಾರಿಕಾ ಪ್ರದೇಶದಲ್ಲಿ ಉದ್ಯಾನವನ್ನು ನಿರ್ಮಿಸಿ ರಸ್ತೆ ಬದಿಯಲ್ಲಿ ಮರಗಳನ್ನು ಬೆಳೆಸುವುದಾಗಿ ಕೆಐಡಿಬಿ ಹೇಳಿದೆ. ಆದರೆ ಈವರೆಗೆ ಇಲ್ಲಿ ಅಂತಹ ಯಾವುದೆ ಉದ್ಯಾನವನ ಮತ್ತು ಮರಗಳನ್ನು ಬೆಳೆಸುವ ಕೆಲಸವಾಗಿಲ್ಲ. ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕೈಗಾರಿಕೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೆರೆಗಳಿಗೆ ರಾತ್ರೋರಾತ್ರಿ ಬಿಟ್ಟು ಕೆರೆಗಳನ್ನು ಕಲುಷಿತ ಮಾಡುತ್ತಿವೆ’ ಎಂದು ಆರೋಪಿಸಿದರು.

‘ರೈತ ಸಂಘಟನೆಯು ಇದನ್ನು ಖಂಡಿಸಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೈಗಾರಿಕೆಗಳ ಸಂಘದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಲಿದೆ ಮತ್ತು ಖಾಲಿ ಇರುವ ಪ್ರದೇಶಗಳಲ್ಲಿ ರೈತ ಸಂಘದಿಂದಲೇ ಗಿಡಗಳನ್ನು
ನೆಟ್ಟು ಮರ ಬೆಳೆಸುವ ಕೆಲಸ ಮಾಡಲಿದೆ’ ಎಂದು ಸಸಿ ನೆಡುವ ಪ್ರತಿಜ್ಞೆ ಮಾಡಿದರು.

ರೈತ ಸಂಘದ ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್‌ ಅಮ್ಮಳ್ಳಿ, ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಸೀಬೆಕಟ್ಟೆ ಕೃಷ್ಣಪ್ಪ, ಟಯೋಟ ಚಂದ್ರಶೇಖರ್‌ ಪಾದರಳ್ಳಿ ಕೃಷ್ಣಪ್ಪ, ರಾಜೂಗೌಡ್ರು, ಮಾಗಡಿ ತಾಲ್ಲೂಕು ಗೌರವ ಅಧ್ಯಕ್ಷ ಗಂಗಣ್ಣ, ರಾಮನಗರ ಕಾಂತರಾಜು, ಶೇಕ್‌ ಅಹಮ್ಮದ್‌ ಅಲಿಯಾಸ್‌ ಪ್ಯಾರು ಸಿಡ್ಲುಕಲ್‌, ಗಂಗಾಧರಯ್ಯ ಮೆಳೆಹಳ್ಳಿ, ನಿಸ್ಸಾರ್‌, ಪರ್ವೀಜ್‌ ಪಾಷ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು