ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಫಲಾನುಭವಿಗಳಿಗೆ ಕ್ರಯಪತ್ರ ಶೀಘ್ರ: ಚೇತನ್‌ ಕುಮಾರ್

ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷ ಚೇತನ್‌ಕುಮಾರ್ ಹೇಳಿಕೆ
Published 21 ಜೂನ್ 2024, 5:29 IST
Last Updated 21 ಜೂನ್ 2024, 5:29 IST
ಅಕ್ಷರ ಗಾತ್ರ

ರಾಮನಗರ: ‘ನಗರಾಭಿವೃದ್ದಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಮೂರು ವಸತಿ ಬಡಾವಣೆಗಳಲ್ಲಿ ಹರಾಜು ಮಾಡಿರುವ ನಿವೇಶನಗಳಿಗೆ ಶೀಘ್ರ ಕ್ರಯಪತ್ರ ಮತ್ತು ಖಾತೆಪತ್ರದ ಜೊತೆಗೆ, ಈ ಬಡಾವಣೆಗಳಲ್ಲಿ ಮೂಲಸೌಕರ್ಯ ಒದಗಿಸಲು ತೀರ್ಮಾನಿಸಲಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‍ಕುಮಾರ್ ಹೇಳಿದರು.

‘ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದವು. ಹಿಂದೆ ಪ್ರಾಧಿಕಾರ ರಚಿಸಿರುವ ಜಿಗೇನಹಳ್ಳಿ/ಅರ್ಕಾವತಿ ವಸತಿ ಬಡಾವಣೆ, ಅರ್ಚಕರಹಳ್ಳಿ /ಹೆಲ್ತ್‌ ಸಿಟಿ, ಸುಣ್ಣಘಟ್ಟ/ಕಣ್ವ ವಸತಿ ಬಡಾವಣೆಗಳಲ್ಲಿ ಹಂಚಿಕೆಯಾಗಿರುವ ನಿವೇಶನದಾರರಿಗೆ ಇದುವರೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕ್ರಯಪತ್ರ, ಖಾತಾ ನೋಂದಣಿ ಮತ್ತು ಪ್ರಸ್ತಾವಿತ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸಿ ಕಟ್ಟಡ ಪರವಾನಗಿ ನೀಡಲು ಸಾಧ್ಯವಾಗಿರಲಿಲ್ಲ’ ಎಂದರು.

‘ಈ ವಿಷಯವಾಗಿ ಸರ್ಕಾರದ ಅನುಮತಿ ಕೋರಿ ಪ್ರಾಧಿಕಾರವು ಜನವರಿಯಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆ ಮೇರೆಗೆ, ಮಾರ್ಚ್‌ನಲ್ಲಿ ಸರ್ಕಾರವು ಕೆಲ ಪ್ರಸ್ತಾವಗಳಿಗೆ ಅನುಮೋದನೆ ಕೊಟ್ಟಿದೆ. ಇದಕ್ಕೆ ಹಿಂದಿನ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಕಾರಣರಾಗಿದ್ದಾರೆ’ ಎಂದು ಹೇಳಿದರು.

‘ಮೂರು ಬಡಾವಣೆಗಳಲ್ಲಿ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದ ನೆರವು ಲಭ್ಯವಿಲ್ಲದ ಕಾರಣ ನಿವೇಶನದಾರರ ಸಭೆ ಕರೆದು ಅವರ ಸಲಹೆ ಮತ್ತು ಸಹಕಾರ ಪಡೆಯಲಾಗುವುದು. ಬಡಾವಣೆಗಳಲ್ಲಿ ಸ್ವಚ್ಚತೆ,ರಸ್ತೆ ಬದಿ ಗಿಡ ನೆಡುವುದು, ಉದ್ಯಾನ ಅಭಿವೃದ್ದಿ ಕೆಲಸಗಳಿಗೆ ನಿವೇಶನದಾರರಿಂದಲೇ ಇಂತಿಷ್ಟು ಹಣದ ನೆರವು ಪಡೆಯುವ ಬಗ್ಗೆ ಅಧಿಕಾರಿಗಳು ಮತ್ತು ನಿರ್ದೇಶಕರು ಚರ್ಚೆ ನಡೆಸಿ ತೀರ್ಮಾನಿಸಿದ್ದೇವೆ. ಈ ವಿಷಯವಾಗಿ ಶೀಘ್ರ ನಿವೇಶನದಾರರ ಸಭೆಗೆ ದಿನಾಂಕ ನಿಗದಿಸುವ ಕುರಿತು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು’ ಎಂದು ತಿಳಿಸಿದರು.

‘ಸರ್ಕಾರದ ಅನುಮೋದನೆಯಂತೆ ನಿವೇಶನದಾರರಿಂದ ಮೂಲ ದಾಖಲೆಗಳು, ನಿವೇಶನದ ಮೊತ್ತವನ್ನು ಪೂರ್ಣ ಪಾವತಿಸಿರುವ ಬಗ್ಗೆ ದೃಡೀಕರಿಸಿರುವ ರಸೀದಿ, ಹತ್ತು ವರ್ಷ ಲೀಸ್ ಅವಧಿ ಮುಕ್ತಾಯವಾಗಿರುವ ನಿವೇಶನದಾರರಿಗೆ ಕ್ರಯಪತ್ರ, ಖಾತಾ ನೋಂದಣಿ ನೀಡಲು ಸಭೆ ಸಮ್ಮತಿಸಿತು. ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಸಭೆ ಸರ್ವಾನುಮತದಿಂದ ಸಮ್ಮತಿಸಿತು’ ಎಂದು ಹೇಳಿದರು.

ಪ್ರಾಧಿಕಾರದ ನಿರ್ದೇಶಕರಾದ ಪರ್ವೀಜ್ ಪಾಷ, ಪ್ರವೀಣ್, ಶ್ರೀನಿವಾಸ್, ಶ್ರೀದೇವಿ, ನಾಮನಿರ್ದೇಶಿತ ನಿರ್ದೇಶಕ ಮುತ್ತುರಾಜು, ಆಯುಕ್ತ ಶಿವನಂಕರೀಗೌಡ, ಬೆಸ್ಕಾಂ ಇಇ ನಾಗರಾಜು, ಲೋಕೋಪಯೋಗಿ ಇಲಾಖೆಯ ಇಇ ಶ್ರೀನಿವಾಸ್, ನಗರ ನೀರು ಸರಬರಾಜು ಒಳ ಚರಂಡಿ ಮಂಡಳಿ ಎಇ ಅನಿಲ್‍ಕುಮಾರ್ ಸೇರಿದಂತೆ ಪ್ರಾಧಿಕಾರದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT