ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಪಾಲಿಸಿದರೆ ಸೋಂಕಿನಿಂದ ದೂರ: ತಹಶೀಲ್ದಾರ್ ನಾಗೇಶ್

ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಗ್ರಾಮಕ್ಕೆ ತಹಶೀಲ್ದಾರ್‌ ನಾಗೇಶ್‌ ಭೇಟಿ
Last Updated 3 ಮೇ 2021, 4:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್‌ನಿಂದ ದೂರವಿರಬೇಕು ಎಂದು ತಹಶೀಲ್ದಾರ್ ನಾಗೇಶ್ ಕರೆ ನೀಡಿದರು.

ತಾಲ್ಲೂಕಿನ ಇಗ್ಗಲೂರು ಗ್ರಾಮದಲ್ಲಿ ಶನಿವಾರ ನಡೆದ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಕ್ಕೆ ಬೆಂಗಳೂರು ಸೇರಿದಂತೆ ಹೊರಗಿನಿಂದ ಬರುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅವರನ್ನು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಬೇಕು. ಕೋವಿಡ್ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದರು.

ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಆ ಸಂದರ್ಭದಲ್ಲಿ ಜನಜಂಗುಳಿ ಇರಬಾರದು. ನಿತ್ಯವೂ ಅವಕಾಶ ಇರುವ ಕಾರಣ ಖರೀದಿಗೆ ಮುಗಿಬೀಳುವುದು ಬೇಡ. ಜನರು ಎಚ್ಚರಿಕೆ ವಹಿಸದಿದ್ದರೆ, ಕೊರೊನಾ ತಡೆಗಟ್ಟಲು ಸಾಧ್ಯವಾಗದಿದ್ದರೆ ಲಾಕ್‌ಡೌನ್ ಮುಂದುವರಿಸುವುದು ಅನಿವಾರ್ಯವಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ತಾಲ್ಲೂಕಿನಲ್ಲಿಯೂ ಹೆಚ್ಚು ಪ್ರಕರಣ ಪತ್ತೆಯಾಗುವ ಜೊತೆಗೆ ಸಾವಿನ ಸಂಖ್ಯೆಯೂ ಸಹ ಏರುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಬೇಕು. ಅಂತರ ಕಾಪಾಡಿಕೊಂಡು ಎಚ್ಚರಿಕೆ ವಹಿಸಬೇಕು. ಕೋವಿಡ್ ಎರಡನೇ ಅಲೆ ತಡೆಗಟ್ಟುವುದು ಜನರ ಕೈಯಲ್ಲೇ ಇದೆ. ಯಾಮಾರಿದರೆ ಎಲ್ಲರಿಗೂ ಸಂಕಷ್ಟ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಚಂದ್ರು ಮಾತನಾಡಿ, ಗ್ರಾಮೀಣ ಭಾಗಕ್ಕೂ ಕೊರೊನಾ ಆವರಿಸುತ್ತಿರುವುದು ಆತಂಕಕಾರಿ ವಿಚಾರ. ಸೋಂಕು ಹೆಚ್ಚಾಗಿರುವ ಕಡೆಗಳಲ್ಲಿ ಎಚ್ಚರಿಕೆ ಅತ್ಯಗತ್ಯ. ಅವಶ್ಯವಿರುವ ಕಡೆಗಳಲ್ಲಿ ಗ್ರಾಮ ಪಂಚಾಯಿತಿಗಳ ವತಿಯಿಂದ ಸೋಂಕು ನಿವಾರಣಾ ದ್ರಾವಣ ಸಿಂಪಡಣೆ ಮಾಡಲು ಪಂಚಾಯಿತಿಗಳು ಕ್ರಮ ವಹಿಸಬೇಕು. ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಪಂಚಾಯಿತಿಗಳ ಮೇಲಿದೆ. ಆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೆಯೇ ತಪ್ಪದೆ ಪ್ರತಿಯೊಬ್ಬರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

ಮುಖಂಡರಾದ ಇ.ತಿ. ಶ್ರೀನಿವಾಸ್, ಎಂ. ಕೃಷ್ಣಪ್ಪ, ಸೋಮಸುಂದರ್, ಉಪ ತಹಶೀಲ್ದಾರ್ ದಿನಕರ್, ಕಂದಾಯ ನಿರೀಕ್ಷಕ ರಜತ್, ಗ್ರಾಮ ಲೆಕ್ಕಾಧಿಕಾರಿ ಭರತ್, ಎಎಸ್‌ಐ ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT