ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಸಂಸದ ಸುರೇಶ್ ಜನ್ಮದಿನ: ವಿಶೇಷ ಪೂಜೆ

Published 19 ಡಿಸೆಂಬರ್ 2023, 5:09 IST
Last Updated 19 ಡಿಸೆಂಬರ್ 2023, 5:09 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರ ಜನ್ಮದಿನವನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಗರದಲ್ಲಿ ಸೋಮವಾರ ಸಂಭ್ರಮದಿಂದ ಆಚರಿಸಿದರು.

ನಗರಸಭೆ ಸದಸ್ಯ ಹಾಗೂ ಜನ ಜಾಗೃತಿ ವೇದಿಕೆ ಅಧ್ಯಕ್ಷರೂ ಆಗಿರುವ ಕೆ. ಶೇಷಾದ್ರಿ ಶಶಿ ಅವರ ನೇತೃತ್ವದಲ್ಲಿ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಜಮಾಯಿಸಿದ ಎಲ್ಲರೂ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ನಾಯಕನಿಗೆ ಆಯಸ್ಸು, ಆರೋಗ್ಯ ಹಾಗೂ ರಾಜಕೀಯದಲ್ಲಿ ಹೆಚ್ಚಿನ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದ ಆವರಣದಲ್ಲಿ ಕೇಕ್ ಕತ್ತರಿಸಿ, ತಮ್ಮ ನೆಚ್ಚಿನ ನಾಯಕನ ಜನ್ಮದಿನ ಆಚರಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಕಾರ್ಯಕರ್ತರು ಡಿ.ಕೆ. ಸುರೇಶ್ ಅವರ ಪರವಾಗಿ ಜೈಕಾರ ಕೂಗಿ ಅಭಿಮಾನ ಮೆರೆದರು.

‘ಈ ದೇಶ ಕಂಡ ಅತ್ಯಂತ ಕ್ರಿಯಾಶೀಲ ಸಂಸದರಲ್ಲಿ ಡಿ.ಕೆ. ಸುರೇಶ್ ಅವರು ಪ್ರಮುಖರು. ಲೋಕಸಭೆಯಲ್ಲಿ ಮೂರು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸಿರುವ ಅವರು ನೀರಾವರಿ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ’ ಎಂದು ಕೆ. ಶೇಷಾದ್ರಿ ಶಶಿ ಅವರು ಶ್ಲಾಘಿಸಿದರು.

‘ಗ್ರಾಮಗಳ ಮಟ್ಟದಲ್ಲಿ ಜನ ಸಂಪರ್ಕ ಸಭೆಗಳನ್ನು ಮಾಡುವ ಮೂಲಕ, ಆಡಳಿತ ಯಂತ್ರವನ್ನು ಜನರ ಬಳಿಗೆ ಕೊಂಡೊಯ್ದರು. ಗ್ರಾಮೀಣ ಜನರ ಅಹವಾಲು ಮತ್ತು ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುತ್ತಾ ಬಂದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ತಿಳಿಸಿದರು.

ಪೌರ ಕಾರ್ಮಿಕರಿಗೆ ಮುಖಂಡರಾದ ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್ ಮಣಿ, ಮಾಜಿ ಶಾಸಕ ಕೆ. ರಾಜು, ಬಮೂಲ್ ನಿರ್ದೇಶಕ ಪಿ. ನಾಗರಾಜ್ ಹಾಗೂ ಇತರರು ಹಣ್ಣು ಹಾಗೂ ವಸ್ತ್ರ ವಿತರಿಸಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಚ್. ಮಂಜು, ನಗರಸಭೆ ಸದಸ್ಯರಾದ ನಿಜಾಮ್ ಷರೀಫ್, ಪಾರ್ವತಮ್ಮ, ಆಯೇಷಾ ಬಾನು, ದೌಲತ್ ಷರೀಫ್, ಆರೀಫ್, ಮೋಯಿನ್ ಖುರೇಷಿ, ಗುತ್ತಿಗೆದಾರರಾದ ವಾಸು, ಜಗದೀಶ್, ಮುಖಂಡರಾದ ದೊಡ್ಡಿ ಸುರೇಶ್, ಶಿವಕುಮಾರ ಸ್ವಾಮಿ, ಕಬಡ್ಡಿ ವಿಜಿ, ಪ್ರವೀಣ್, ಪ್ರಾಣೇಶ್, ಅನಿಲ್ ಜೋಗಿಂದರ್, ವಿವಿಧ ಸಂಘ–ಸಂಸ್ಥೆ ಹಾಗೂ ಸಂಘಟನೆಗಳ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT