ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | 25 ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರ ಭದ್ರ: ಸಿಬ್ಬಂದಿ ಸರ್ಪಗಾವಲು

Published 28 ಏಪ್ರಿಲ್ 2024, 6:49 IST
Last Updated 28 ಏಪ್ರಿಲ್ 2024, 6:49 IST
ಅಕ್ಷರ ಗಾತ್ರ

ರಾಮನಗರ: ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಶುಕ್ರವಾರ ಮತದಾನ ಪೂರೈಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂಗಳಲ್ಲಿ ಶನಿವಾರ ಭದ್ರವಾಗಿ ಇಡಲಾಗಿದೆ. ಮತಪೆಟ್ಟಿಗೆಗಳಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಜೂನ್‌ 4ರಂದು ನಿರ್ಧಾರವಾಗಲಿದೆ.

ಕ್ಷೇತ್ರದ ಒಟ್ಟು 2,829 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿತ್ತು. ಮತದಾನ ಮುಗಿದ ಬಳಿಕ, ವಿಧಾನಸಭಾ ಕ್ಷೇತ್ರವಾರು ಗುರುತಿಸಲಾಗಿದ್ದ ಶಾಲಾ–ಕಾಲೇಜುಗಳಿಗೆ ಬಂದ ಮತಗಟ್ಟೆ ಸಿಬ್ಬಂದಿ, ಮತಯಂತ್ರ ಹಾಗೂ ಚುನಾವಣಾ ಪರಿಕರಗಳನ್ನು ರಾತ್ರಿ ಒಪ್ಪಿಸಿದರು.

ರಾಮನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಪಟ್ಟಣದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಕನಕಪುರದಲ್ಲಿ ರೂರಲ್ ಪದವಿ ಪೂರ್ವ ಕಾಲೇಜು, ಮಾಗಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಣಿಗಲ್‌ನ ಮಹಾತ್ಮ ಗಾಂಧೀಜಿ ಪದವಿ ಪೂರ್ವ ಕಾಲೇಜು, ರಾಜರಾಜೇಶ್ವರಿ ನಗರದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ, ಬೆಂಗಳೂರು ದಕ್ಷಿಣದ ಜಯನಗರ ನ್ಯಾಷನಲ್ ಕಾಲೇಜು ಹಾಗೂ ಆನೇಕಲ್ ಕ್ಷೇತ್ರದಲ್ಲಿ ಚಂದಾಪುರ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಾಲೆಯಲ್ಲಿ ಡಿ ಮಸ್ಟರಿಂಗ್ ನಡೆಸಿ, ಅಂತಿಮವಾಗಿ ರಾಮನಗರದ ಎಂಜಿನಿಯರಿಂಗ್ ಕಾಲೇಜಿಗೆ ಬಿಗಿ ಭದ್ರತೆಯಲ್ಲಿ ತರಲಾಯಿತು.

ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ನೇತೃತ್ವದಲ್ಲಿ ಮತಪೆಟ್ಟಿ  ಪರಿಶೀಲಿಸಲಾಯಿತು. ನಂತರ ಕಾಲೇಜಿನ ಒಟ್ಟು 25 ಸ್ಟ್ರಾಂಗ್ ರೂಂಗಳಲ್ಲಿ ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿಟ್ಟು, ಕೊಠಡಿಗಳ ಬಾಗಿಲುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಸಮಕ್ಷಮದಲ್ಲಿ ಸೀಲ್ ಮಾಡಲಾಯಿತು.

100 ಮಂದಿಯ ಭದ್ರತೆ: ‘ಮತಪೆಟ್ಟಿಗೆ ಇಟ್ಟಿರುವ ಕಾಲೇಜಿಗೆ 100 ಮಂದಿಯ ಬಿಗಿ ಭದ್ರತೆ ಒದಗಿಸಲಾಗಿದೆ. ಒಂದು ತುಕಡಿ ಅರೆ ಸೇನಾಪಡೆ, ಕೆಎಸ್‌ಆರ್‌ಪಿ ಒಂದು ತುಕಡಿ ಹಾಗೂ 50 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶಸ್ತ್ರಸಜ್ಜಿತ ಸಿಬ್ಬಂದಿ ಸ್ಟ್ರಾಂಗ್ ರೂಂಗಳತ್ತ ಯಾರೂ ಸುಳಿಯದಂತೆ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ. ಕಾಲೇಜಿನ ಒಳಭಾಗ ಮತ್ತು ಹೊರಭಾಗದಲ್ಲಿ ಈ ತುಕಡಿಗಳು ಮತ ಎಣಿಕೆ ಕಾರ್ಯ ನಡೆಯುವ ಜೂನ್ 4ರವರೆಗೆ ನಿಗಾ ಇಡಲಿವೆ. ಸ್ಟ್ರಾಂಗ್ ರೂಂಗಳಿಗೆ ಸಕ್ಷಮ ಅಧಿಕಾರಿಯನ್ನು ಬಿಟ್ಟರೆ ಬೇರೆಯವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಮತಯಂತ್ರಗಳನ್ನು ಇಟ್ಟಿರುವ ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕೊಠಡಿಗೆ ಸೀಲಿಂಗ್ ಮಾಡಿದ ಬಳಿಕ ಬಾಗಿಲಿಗೆ ಚೀಟಿ ಅಂಟಿಸಿದ ಚುನಾವಣಾ ಸಿಬ್ಬಂದಿ 
ಮತಯಂತ್ರಗಳನ್ನು ಇಟ್ಟಿರುವ ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕೊಠಡಿಗೆ ಸೀಲಿಂಗ್ ಮಾಡಿದ ಬಳಿಕ ಬಾಗಿಲಿಗೆ ಚೀಟಿ ಅಂಟಿಸಿದ ಚುನಾವಣಾ ಸಿಬ್ಬಂದಿ 
ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್‌ ರೂಂಗಳಲ್ಲಿ ಇಟ್ಟಿರುವ ಮತಯಂತ್ರಗಳು
ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್‌ ರೂಂಗಳಲ್ಲಿ ಇಟ್ಟಿರುವ ಮತಯಂತ್ರಗಳು

ಸಿಸಿಟಿವಿ ಕ್ಯಾಮೆರಾ ನಿಗಾ

ಮತಯಂತ್ರಗಳಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳಡಿಸಲಾಗಿದೆ. ಕಟ್ಟಡದ ಒಳಭಾಗ ಮುಂಭಾಗ ಹಾಗೂ ಹೊರಭಾಗ ಕ್ಯಾಮೆರಾ ಅಳವಡಿಸುವ ಮೂಲಕ ಕಣ್ಗಾವಲು ಇಡಲಾಗಿದೆ. ಕಾಲೇಜಿಗೆ ವಿದ್ಯಾರ್ಥಿಗಳು ಸೇರಿದಂತೆ ಯಾರೇ ಬಂದರೂ ಅವರ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಸ್ಟ್ರಾಂಗ್ ರೂಂಗಳತ್ತ ಯಾರೂ ಹೋಗದಂತೆ ಅಲ್ಲಿನ ಹೋಗುವ ದಾರಿಗಳನ್ನು ಬಂದ್ ಮಾಡಲಾಗಿದೆ. ಸ್ಟ್ರಾಂಗ್ ರೂಂಗಳಿರುವ ಪ್ರದೇಶವನ್ನು ಸಂಪೂರ್ಣವಾಗಿ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT