ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯದಿಂದ ಆಹಾರ ಉತ್ಪಾದನೆಗೆ ಸಲಹೆ

ಸಿರಿಧಾನ್ಯ ಬೆಳೆಗಾರರು, ಉದ್ದಿಮೆದಾರರ ನಡುವೆ ಮಾರುಕಟ್ಟೆ ಸೌಲಭ್ಯಗಳ ಕುರಿತ ಸಂವಾದ
Last Updated 27 ಜನವರಿ 2020, 13:33 IST
ಅಕ್ಷರ ಗಾತ್ರ

ರಾಮನಗರ: ‘ಸಮೃದ್ಧ ಪೌಷ್ಠಿಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳಿಂದ ಜನರಿಗೆ ಪ್ರಿಯವಾದ ಮತ್ತು ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲು ವಿವಿಧ ಸಂಘ-ಸಂಸ್ಥೆಗಳು, ರೈತರು ಮುಂದಾಗಬೇಕು’ ಎಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಉಷಾ ಹೇಳಿದರು.

ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಕೃಷಿ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ 'ಸಿರಿಧಾನ್ಯ ಬೆಳೆಗಾರರು ಮತ್ತು ಉದ್ದಿಮೆದಾರರ ನಡುವೆ ಮಾರುಕಟ್ಟೆ ಸೌಲಭ್ಯಗಳ ಕುರಿತ ಸಂವಾದ' ದಲ್ಲಿ ಅವರು ಮಾತನಾಡಿದರು. ಬದಲಾದ ಜೀವನ ಶೈಲಿಯಿಂದ ದಿನೇ ದಿನೇ ಹಲವು ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಒತ್ತಡದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಈ ರೋಗಗಳು ಉಲ್ಬಣಗೊಳ್ಳುತ್ತಿವೆ. ಇವುಗಳಿಗೆ ಸಿರಿ ಧಾನ್ಯಗಳ ಬಳಕೆ ರಾಮಬಾಣವಾಗಿದೆ ಎಂದು ತಿಳಿಸಿದರು.

ಒಂದು ಕಾಲದಲ್ಲಿ ಬಡವರ ಆಹಾರವೆಂದು ಹೇಳಲಾಗುತ್ತಿದ್ದ ಸಿರಿ ಧಾನ್ಯಗಳು ಈಗ ಆರೋಗ್ಯದ ಶ್ರೀಮಂತಿಕೆಯ ಧಾನ್ಯಗಳು ಎಂದು ಗುರುತಿಸಲ್ಪಡುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ಆಹಾರ ತಯಾರಿಸುವುದು ಮತ್ತು ಸೇವಿಸುವ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ರೈತರು ಸಿರಿಧಾನ್ಯಗಳನ್ನು ಬೆಳೆಯುವ ಜತೆಗೆ ತಾವೇ ಅವುಗಳ ಪೌಡರ್‌ ಅನ್ನು ಸಿದ್ಧಪಡಿಸಿ ಮಾರಾಟ ಮಾಡಬೇಕು ಎಂದು ತಿಳಿಸಿದರು.

ಧಾನ್ಯಗಳನ್ನು ಹಿಟ್ಟು ಮಾಡಿ ಮಾರಾಟ ಮಾಡುವುದರಿಂದ ಹಲವರಿಗೆ ಕೆಲಸ ಸಿಗುತ್ತದೆ. ಜತೆಗೆ ಹೆಚ್ಚಿನ ಲಾಭವು ಬರುತ್ತದೆ. ಜನರಿಗೆ ಇಷ್ಟವಾಗುವ ಇಡ್ಲಿ, ದೋಸೆ, ಫಿಜ್ಜಾ, ಬರ್‍ಗರ್, ಸ್ನ್ಯಾಕ್ಸ್ ಗಳನ್ನು ಸಿರಿಧಾನ ಗಳಲ್ಲಿ ತಯಾರಿಸುವ ಯೋಜನೆಗಳನ್ನು ಕೈಗೊಳ್ಳಬೇಕು ಎಂದರು.

ಸಿರಿ ಧಾನ್ಯಗಳು ಅಕ್ಕಿ, ಗೋಧಿಗಿಂತಲೂ ಪೋಷಕಾಂಶ, ಫೈಬರ್, ಕ್ಯಾಲ್ಸಿಯಂ ಅಂಶಗಳಿಗೆ ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಆಧಾರದ ಮೇಲೆ ಹೆಚ್ಚು ಪ್ರಚಾರ ಮಾಡಬೇಕು. ಇವುಗಳ ಉತ್ಪಾದನೆ ಕೂಡ ಅತ್ಯಂತ ಸುಲಭವಾಗಿದೆ. ಒಂದು ಕೆಜಿ ಅಕ್ಕಿ ಬೆಳೆಯಲು 4 ರಿಂದ 5 ಸಾವಿರ ಲೀಟರ್ ನೀರು ಬೇಕು. ಸಿರಿ ಧಾನ್ಯಕ್ಕೆ ಅತ್ಯಂತ ಕಡಿಮೆ ನೀರು ಸಾಕು. ಕಡಿಮೆ ಫಲವತ್ತತೆಯ ಭೂಮಿಯಲ್ಲೂ ಬೆಳೆಯಬಹುದು ಎಂದು ತಿಳಿಸಿದರು. ರೈತರು ತಮ್ಮ ಆರೋಗ್ಯದ ಜತೆಗೆ ಭೂಮಿಯ ಆರೋಗ್ಯದ ಕಡೆಗೂ ಒತ್ತು ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಬಾರದು ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ, ಉಪನಿರ್ದೇಶಕ ಅಶೋಕ್, ವಿವಿಧ ಸಂಸ್ಥೆಗಳ ಮುಖ್ಯಸ್ಥರಾದ ಮಮತಾ, ನಂದಕಿಶೋರ್, ರಾಮಕೃಷ್ಣ, ಅನುರಾಗ್, ಶ್ರೀಧರ್ ಮೂರ್ತಿ, ಗಂಗಾಧರ್ ಇದ್ದರು.

***

ಸಿರಿಧಾನ್ಯಗಳಲ್ಲೇ ರೆಡಿ ಟು ಈಟ್, ರೆಡಿ ಟು ಕುಕ್ ಪದಾರ್ಥಗಳನ್ನು ತಯಾರಿಸಬೇಕು. ಇವುಗಳನ್ನು ಉಪಯೋಗಿಸುವ ಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು
-ಉಷಾ,ಜಿಕೆವಿಕೆ ಪ್ರಾಧ್ಯಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT