ಶನಿವಾರ, ಜನವರಿ 23, 2021
19 °C

ಹಾರೋಹಳ್ಳಿಯಲ್ಲಿ ಶಕ್ತಿ ಬ್ಯಾಟರೀಸ್‌ ಕಾರ್ಖಾನೆಗೆ ಬೆಂಕಿ: ಅಪಾರ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾರೋಹಳ್ಳಿ (ಕನಕಪುರ): ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಶಕ್ತಿ ಬ್ಯಾಟರೀಸ್‌ ಕಾರ್ಖಾನೆಯಲ್ಲಿ ಮಂಗಳವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಸಂಜೆ 6.15ರ ಸುಮಾರಿಗೆ ಕಾರ್ಮಿಕರೆಲ್ಲರೂ ಕಾರ್ಖಾನೆಯಿಂದ ಹೊರಡುವ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕ್ರಮೇಣ ಸುತ್ತಲಿನ ಪ್ರದೇಶಕ್ಕೆ ವ್ಯಾಪಿಸಿ ಹೊತ್ತಿ ಉರಿಯಿತು. ಬೆಂಕಿ ಕಾಣಿಸಿಕೊಳ್ಳುತ್ತಲೇ ಅಲ್ಲಿನ ಸಿಬ್ಬಂದಿ ಹೊರಗೆ ಓಡಿ ಬಂದರು. ದೊಡ್ಡ ಗಾತ್ರದ ಜ್ವಾಲೆಗಳು ಎದ್ದಿದ್ದು, ದಟ್ಟ ಹೊಗೆ ಇಡೀ ಕೈಗಾರಿಕಾ ಪ್ರದೇಶವನ್ನು ಆವರಿಸಿತ್ತು. 20 ಅಗ್ನಿಶಾಮಕ ವಾಹನಗಳೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು. ಅಕ್ಕಪಕ್ಕದ ಕಾರ್ಖಾನೆಗಳಿಗೆ ಬೆಂಕಿ ಹರಡುವ ಆತಂಕ ಇದ್ದು, ಬೆಂಕಿ ಹರಡದಂತೆ ಸಿಬ್ಬಂದಿ ನಿಯಂತ್ರಿಸಿದರು. ಅಗ್ನಿಯ ಶಾಖಕ್ಕೆ ಕಾರ್ಖಾನೆಯಲ್ಲಿನ ಸಿಲಿಂಡರ್ ಒಂದು ಸ್ಫೋಟಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸದಿಂದ ಒಳ ಪ್ರವೇಶಿಸಿ, ಉಳಿದ ಎರಡು ಸಿಲಿಂಡರ್‌ಗಳು ಸ್ಫೋಟಿಸದಂತೆ ತಡೆದು ಹೊರ ತಂದರು ಎನ್ನಲಾಗಿದೆ.

ಕತ್ತಲಿನ ಕಾರಣ ಕಾರ್ಯಾಚರಣೆಗೆ ತೊಡಕಾಗಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರಿದಿತ್ತು. ಪಕ್ಕದಲ್ಲೇ ಔಷಧ ತಯಾರಿಕಾ ಕಾರ್ಖಾನೆಯೂ ಇದ್ದು, ಅಲ್ಲಿನ ಸಿಬ್ಬಂದಿಯೂ ಆತಂಕಕ್ಕೆ ಒಳಗಾಗಿದ್ದರು.

ಕಾರ್ಖಾನೆಯು ಹಾರೋಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ನಾಗರಾಜು ಅವರಿಗೆ ಸೇರಿದ್ದಾಗಿದೆ. 2015ರಲ್ಲಿ ಇದು ಕಾರ್ಯಾರಂಭ ಮಾಡಿದ್ದು, ಇಲ್ಲಿ ಯುಪಿಎಸ್‌ ಬ್ಯಾಟರಿಗಳನ್ನು ಉತ್ಪಾದಿಸಲಾಗುತ್ತಿತ್ತು. ಪ್ರಸ್ತುತ 120 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಜೆ 4.30ರವರೆಗೂ ಮಾಲೀಕ ನಾಗರಾಜು ಕಾರ್ಖಾನೆಯಲ್ಲೇ ಇದ್ದು, ನಂತರದಲ್ಲಿ ಮನೆಗೆ ತೆರಳಿದ್ದರು. ಕಾರ್ಮಿಕರು ಕೆಲಸ ಮುಗಿಸಿ ಹೊರಡುವ ಸಿದ್ಧತೆಯಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ. ಕಾರ್ಮಿಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ. ಅಪಾರ ಪ್ರಮಾಣದ ಬ್ಯಾಟರಿಗಳು ಹಾಗೂ ಯಂತ್ರೋಪಕರಣಗಳು ಬೆಂಕಿಗೆ ಹಾನಿಯಾಗಿವೆ. 20 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಡಿವೈಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಗ್ನಿಶಾಮಕ ಠಾಣೆಗೆ ಒತ್ತಾಯ

ಈಚಿನ ದಿನಗಳಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸುತ್ತಿರುವ ಮೂರನೇ ಅಗ್ನಿ ಅವಘಡ ಇದಾಗಿದೆ. ಈ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕಾ ವಸಾಹತುಗಳಲ್ಲಿ ಒಂದಾಗಿದೆ. ಹೀಗಿದ್ದೂ ಇಲ್ಲಿ ಅಗ್ನಿಶಾಮಕ ಠಾಣೆ ಇಲ್ಲ. ಇಲ್ಲಿಯೇ ಬೆಂಕಿ ನಂದಿಸುವ ವಾಹನಗಳ ಸೇವೆ ಲಭ್ಯ ಇದ್ದಿದ್ದರೆ ಇನ್ನಷ್ಟು ಶೀಘ್ರವಾಗಿ ಬೆಂಕಿಯನ್ನು ನಂದಿಸಬಹುದಿತ್ತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು