ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ತಿಳಿವಳಿಕೆಗಾಗಿ ಶಿಕ್ಷಣ ಪಡೆಯಿರಿ: ಸಂಸದ ಡಿ.ಕೆ.ಸುರೇಶ್‌

ರೂರಲ್‌ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿತರಣೆ
Published 5 ಜನವರಿ 2024, 4:21 IST
Last Updated 5 ಜನವರಿ 2024, 4:21 IST
ಅಕ್ಷರ ಗಾತ್ರ

ಕನಕಪುರ: ಉದ್ಯೋಗ ಪಡೆಯುವುದಕ್ಕಾಗಿ ಶಿಕ್ಷಣ ಪಡೆಯಬೇಡಿ. ಜ್ಞಾನಾರ್ಜನೆಗಾಗಿ ಸಾಮಾಜಿಕ ತಿಳಿವಳಿಕೆಗಾಗಿ ವಿದ್ಯಾಭ್ಯಾಸ ಮಾಡಬೇಕೆಂದು ಸಂಸದ ಡಿ.ಕೆ.ಸುರೇಶ್‌ ಕಿವಿಮಾತು ಹೇಳಿದರು.

ಇಲ್ಲಿನ ರೂರಲ್‌ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮಲಬಾರ್‌ ಗೋಲ್ಡ್‌ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಶಿಕ್ಷಣ ಮತ್ತು ಜೀವನದ ವ್ಯವಸ್ಥೆ ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಮುಂದುವರಿದ ರಾಷ್ಟ್ರಗಳಲ್ಲಿ 18ವರ್ಷದವರೆಗೆ ಮಾತ್ರ ಪೋಷಕರು ಪಾಲನೆ ಮಾಡುತ್ತಾರೆ. ಮುಂದೆ ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬೇಕು. ನಮ್ಮ ರಾಷ್ಟ್ರದಲ್ಲಿ ಮಕ್ಕಳ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಪೋಷಕರೇ ನೋಡಿಕೊಳ್ಳಬೇಕು. ಇಂತಹ ಚಿಂತನೆ ಬದಲಾಗಬೇಕು. ಪೋಷಕರನ್ನು ಅವಲಂಬಿಸದೆ ಮಕ್ಕಳೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಯುವಕ–ಯುವತಿಯರು ಮೊಬೈಲ್‌ ಗೀಳಿನಿಂದ ಹೊರಬೇಕು. ಸ್ವಂತ ಬುದ್ಧಿ ಬಳಸದೆ ಪ್ರತಿಯೊಂದಕ್ಕೂ ಗೂಗಲ್‌ ಹುಡುಕಾಟ ನಡೆಸಿ ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದರು.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದ ಜನರ ಉದ್ಯೋಗ ನಾಶವಾಗುತ್ತಿದೆ. ಮನುಷ್ಯರ ಜಾಗವನ್ನು ಯಂತ್ರಗಳು ಆವರಿಸಿಕೊಂಡು ಉದ್ಯೋಗ ಇಲ್ಲವಾಗುತ್ತಿದೆ ಎಂದರು.

ಶಿಕ್ಷಣದ ವ್ಯವಸ್ಥೆ ಬದಲಾಗಬೇಕಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಧುನಿಕ ಮತ್ತು ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅದು ಸರ್ಕಾರದಿಂದ ಆಗುತ್ತಿರುವ ಲೋಪ. ಇದಕ್ಕಾಗಿ ಪಂಚಾಯಿತಿಗೆ ಒಂದು ಹೈಟೆಕ್‌ ಸರ್ಕಾರಿ ಶಾಲೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಕನಕಪುರ ತಾಲ್ಲೂಕಿನಿಂದಲೇ ಪ್ರಾಯೋಗಿಕವಾಗಿ ಆರಂಭ ಮಾಡಲಾಗುವುದು ಎಂದರು. 

ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದಾಗ ಸಿಎಸ್‌ಆರ್‌ ಅನುದಾನ ಬಳಕೆ ಜಾರಿಗೆ ತಂದರು. ಅದರಡಿ ಬೆಂಗಳೂರು ಮಲಬಾರ್‌ ಗೋಲ್ಡ್‌ನಿಂದ ₹1ಕೋಟಿ ವಿದ್ಯಾರ್ಥಿ ವೇತನವನ್ನು ರೂರಲ್‌ ಕಾಲೇಜಿಗೆ ನೀಡುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಆರ್‌ಇಎಸ್‌ ಅಧ್ಯಕ್ಷ ಎಚ್‌.ಕೆ.ಶ್ರೀಕಂಠ ಮಾತನಾಡಿದರು. ಮಲಬಾರ್‌ ಗೋಲ್ಡ್‌ನ ಅಜ್ಮಾಲ್‌ ರೋಷನ್‌.ಸಿ, ಮೆಹಬೂಬ್‌.ಕೆ.ಸ್‌, ಆರ್‌ಇಎಸ್‌ನ ಕೆ.ಬಿ.ನಾಗರಾಜು, ಮಂಜುನಾಥ್‌, ಪುಟ್ಟಸ್ವಾಮಿ, ಸೂರ್ಯನಾರಾಯಣಗೌಡ, ಪ್ರಾಂಶುಪಾಲರಾದ ಬಾಲಕೃಷ್ಣ, ಗದ್ದಿಗಪ್ಪ ಹಿತ್ತಲಮನಿ, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ರೂರಲ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್‌ ಮಾತನಾಡಿದರು
ರೂರಲ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್‌ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT