ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಯೋಜನೆ ಮಾಹಿತಿ ಮನೆ ಬಾಗಿಲಿಗೆ

ವಾರ್ತಾ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ: ಇದೇ 23ರಂದು ಚಾಲನೆ
Last Updated 18 ನವೆಂಬರ್ 2019, 13:51 IST
ಅಕ್ಷರ ಗಾತ್ರ

ರಾಮನಗರ: ಗ್ರಾಮೀಣ ಜನರಿಗೆ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ‘ಗ್ರಾಮ ಸೇವೆ’ ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ.

ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಸರ್ಕಾರ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತದೆ. ಈ ಯೋಜನೆಗಳು ಸಫಲವಾಗಬೇಕಾದರೆ ಮೊದಲು ಗ್ರಾಮೀಣ ಜನರು ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಯೋಜನೆಗಳಿಂದ ಆಗುವ ಅನುಕೂಲತೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಜನರ ಜೊತೆ ವಾಸ್ತವ್ಯ ಹೂಡಿ ಸರ್ಕಾರದ ಯೋಜನೆಗಳ ಮಾಹಿತಿ ಮನೆ ಬಾಗಿಲಿಗೆ ತಲುಪಿಸಲು 'ಗ್ರಾಮ ಸೇವೆ' ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುತ್ತಾರೆ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ.

ಗ್ರಾಮ ಸೇವೆಯ ಮೊದಲ ಕಾರ್ಯಕ್ರಮವನ್ನು ಕನಕಪುರ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಇರುಳಿಗರು ವಾಸಿಸುವ ಕೂತಗಾನಹಳ್ಳಿಯಲ್ಲಿ ಇದೇ 23 ರಂದು ಆಯೋಜಿಸಿದೆ. ಅಂದು ಇಡೀ ದಿನ ಹಾಗೂ ರಾತ್ರಿ ವಿವಿಧ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮೀಣ ಜನರೊಂದಿಗೆ ಬೆರತು ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು.

'ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ದೃಢ ಹೆಜ್ಜೆಗಳು' ಎಂಬ ಆಶಯದೊಂದಿಗೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು, ಮೀನುಗಾರರ ಸಾಲ ಮನ್ನಾ, ನೇಕಾರರ ಸಾಲಮನ್ನಾ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ₨6 ಸಾವಿರ ಸಹಾಯಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ₨4 ಸಾವಿರಗಳನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರ ಘೋಷಿಸಿರುವ ₨4 ಸಾವಿರಗಳಲ್ಲಿ ಮೊದಲ ಕಂತಿನ 2 ಸಾವಿರಗಳನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ರೈತರು ಬೆಳೆದ ಹಸಿರು ಮೇವು ಖರೀದಿ ದರ ಪ್ರತಿ ಟನ್‍ ಗೆ ₨3 ಸಾವಿರದಿಂದ 4 ಸಾವಿರಗಳಿಗೆ ಹೆಚ್ಚಿಸಲಾಗಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು ₨5 ಲಕ್ಷ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಇಂತಹ ಹಲವಾರು ಮಾಹಿತಿಗಳನ್ನು ಗ್ರಾಮಸ್ಥರಿಗೆ ತಿಳಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳು, ಕ್ರಿಯಾ ಯೋಜನೆಗಳನ್ನು ಒದಗಿಸಿ ಗ್ರಾಮ ಸೇವೆ ಆಯೋಜಿಸಲು ಸಹಕರಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಗ್ರಾಮ ಸೇವೆ ನಡೆಯಲಿರುವ ಕೂತಗಾನಹಳ್ಳಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗ್ರಾಮದ ಸ್ಥಳೀಯ ಸಂಘಟನೆಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಮಸ್ಥರನ್ನು ಒಟ್ಟುಗೂಡಿಸಲಿದೆ. ಗ್ರಾಮದಲ್ಲಿ ಸರ್ಕಾರದ ಕಾರ್ಯಕ್ರಮಗಳ ಪ್ರಚಾರ, ಸ್ವಚ್ಛತಾ ಅಭಿಯಾನ, ಮದ್ಯ, ಮಾದಕ ದ್ರವ್ಯಗಳ ತಡೆಗೆ ಅರಿವು, ಶಿಕ್ಷಣದ ಪ್ರಾಮುಖ್ಯತೆ ಕುರಿತಂತೆ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.

ಸರ್ಕಾರಿ ಯೋಜನೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವುದು ಗ್ರಾಮ ಸೇವೆ ಕಾರ್ಯಕ್ರಮದ ಉದ್ದೇಶ. ಇದರಿಂದ ಅರ್ಹರಿಗೆ ಸೌಲಭ್ಯ ಸಿಗಲು ಸಹಕಾರಿ ಆಗಲಿದೆ

– ಎಸ್‌. ಶಂಕರಪ್ಪ, ಹಿರಿಯ ಸಹಾಯಕ ನಿರ್ದೇಶಕ, ವಾರ್ತಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT