ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್ ಅಭ್ಯರ್ಥಿಗಳ ಗೆಲುವಿಗೆ ಗ್ಯಾರಂಟಿಗಳೇ ಶ್ರೀರಕ್ಷೆ: ಬಸವರಾಜ ಗುರಿಕಾರ

Published 29 ಮೇ 2024, 6:55 IST
Last Updated 29 ಮೇ 2024, 6:55 IST
ಅಕ್ಷರ ಗಾತ್ರ

ರಾಮನಗರ: ‘ಕಾಂಗ್ರೆಸ್‌ನ ಚುನಾವಣಾ ಪೂರ್ವ ಗ್ಯಾರಂಟಿ ಯೋಜನೆಗಳ ಜಾರಿ ಮತ್ತು ಒಂದು ವರ್ಷದ ಜನಪರ ಆಡಳಿತವು ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡಲಿದೆ’ ಎಂದು ಕೆಪಿಸಿಸಿ ಶಿಕ್ಷಕರ ಘಟಕ ಅಧ್ಯಕ್ಷ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.

‘ಪರಿಷತ್‌ನ 3 ಪದವೀಧರರ ಕ್ಷೇತ್ರಗಳು ಹಾಗೂ 3 ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಸರ್ಕಾರ ಶಿಕ್ಷಕರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ಜೊತೆಗೆ ನಿರುದ್ಯೋಗಿ ಪದವೀಧರರಿಗೆ ನೆರವಾಗುವ ಯುವ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾಗಿ, ಇಬ್ಬರೂ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನಿತ ಶಾಲೆಗಳಲ್ಲಿ ವೇತನ ತಾರತಮ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳಿದ್ದವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಶಾಲೆಗಳಿಗೆ 11,494 ಶಿಕ್ಷಕರ ನೇಮಕಾತಿ ಹಾಗೂ 35 ಸಾವಿರ ಅತಿಥಿ ಶಿಕ್ಷಕರ ನೇಮಕ
ಮಾಡಲಾಗಿದೆ’ ಎಂದು ಹೇಳಿದರು.

‘ರಾಜ್ಯದಾದ್ಯಂತ 2,162 ಸರ್ಕಾರಿ ಶಾಲೆಗಳ 7,342 ಕೊಠಡಿಗಳ ದುರಸ್ತಿಗೆ ₹70 ಕೋಟಿ ಅನುದಾನ ನೀಡಲಾಗಿದೆ. 58 ಲಕ್ಷ ವಿದ್ಯಾರ್ಥಿಗಳಿಗೆ ₹280 ಕೋಟಿ ವೆಚ್ಚದಲ್ಲಿ ಪೌಷ್ಟಿಕ ಆಹಾರ ವಿತರಣೆ, 45 ಲಕ್ಷ ಮಕ್ಕಳಿಗೆ ₹43 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ವಿತರಿಸಲಾಗಿದೆ. 29 ಸಾವಿರ ಶಿಕ್ಷಕರಿಗೆ ಅವರು ಬಯಸಿದ ಸ್ಥಳಗಳಿಗೆ ಕೋರಿಕೆಯ ವರ್ಗಾವಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ವಿಶ್ವವಿದ್ಯಾಲಯಗಳಿಗೆ ತಲಾ ₹50 ಲಕ್ಷದಂತೆ 350 ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಕನಿಷ್ಠ ₹5 ಸಾವಿರದಿಂದ ಗರಿಷ್ಠ ₹8 ಸಾವಿರದವರೆಗೆ ವೇತನ ಏರಿಕೆ ಮಾಡಲಾಗಿದೆ. ₹5 ಲಕ್ಷ ವೈದ್ಯಕೀಯ ಸೌಲಭ್ಯದ ಜೊತೆಗೆ 60 ವರ್ಷದ ನಂತರ ನಿವೃತ್ತಿಯಾಗುವವರಿಗೆ ₹5 ಲಕ್ಷ ನೀಡಲು ಕ್ರಮ ಕೈಗೊಂಡಿದೆ’ ಎಂದು ಸರ್ಕಾರದ ಯೋಜನೆಗಳನ್ನು ವಿವರಿಸಿದರು.

‘ನೂತನ ಪಿಂಚಣಿ ಯೋಜನೆಯಲ್ಲಿದ್ದ 19 ಸಾವಿರ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ತರಲಾಗಿದೆ. ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಲಿಸಿ ರಾಜ್ಯ ಶಿಕ್ಷಣ ನೀತಿಯನ್ನು ತರಲು ಸಮಿತಿ ರಚಿಸಿ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಮುನ್ನುಡಿ ಬರೆದಿದೆ. ಈ ಎಲ್ಲಾ ವಿಷಯಗಳು ಪರಿಷತ್ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲಿವೆ’ ಎಂದು ಹೇಳಿದರು.

ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಗುರುಪ್ರಸಾದ್, ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ್ ಸಿ. ರಾಜು ಹಾಗೂ ಮುಖಂಡ ಆರ್‌.ಕೆ. ಬೈರಲಿಂಗಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT