ಮಂಗಳವಾರ, ಅಕ್ಟೋಬರ್ 15, 2019
25 °C
ಮೂರು ತಲೆಮಾರು ಕಂಡ ಉದ್ಯಮ * ಇಂದಿಗೂ ಕುಸಿಯದ ಬೇಡಿಕೆ * ಶುಭ ಕಾರ್ಯಕ್ಕೂ ಅವಶ್ಯ

ಮಾಗಡಿ: ಹರಳೆಣ್ಣೆ ತಯಾರಿಕೆಗೆ ಹೊಸರೂಪ

Published:
Updated:

ಮಾಗಡಿ: ಬೆಂಗಳೂರು - ಕುಣಿಗಲ್ ರಸ್ತೆಯಲ್ಲಿ ಸಂಚರಿಸುವಾಗ ಗಮ್ಮನೆ ಬೇಯಿಸಿದ ಹರಳೆಣ್ಣೆ ಸುವಾಸನೆ ಮೂಗಿಗೆ ರಾಚುತ್ತದೆ. ಮಹಾತ್ಮಗಾಂಧೀಜಿ ಅವರ ಸರ್ವೋದಯ ತತ್ವದಲ್ಲಿ ನಂಬಿಕೆ ಇಟ್ಟ ಅರಳೇಪೇಟೆ ನಿವಾಸಿ ಸಿದ್ದಲಿಂಗಮ್ಮ ಬಸೆಟಪ್ಪ ಅವರು ಈ ಹಿಂದೆ ಹರಳು ಬೀಜ ಹುರಿದು ಒನಕೆಯಿಂದ ಕುಟ್ಟಿ ಪುಡಿ ಮಾಡಿ ಬೇಯಿಸಿ ಹರಳಣ್ಣೆ ತೆಗೆಯುವ ಕಾಯಕ ಜೀವಿ ಆಗಿದ್ದರು. ಈಗ ಆ ಕುಟುಂಬದ ಮೂರನೇ ತಲೆಮಾರಿಗೆ ಈ ಕಾಯಕ ವರ್ಗಾವಣೆಗೊಂಡಿದೆ. 

ಈ ಕುಟುಂಬದ ಲೀಲಾವತಿ ಚಂದ್ರಶೆಖರ್ ಅವರ ‍ಪುತ್ರ ದರ್ಶನ್‌ ಮೂರನೆ ತಲೆಮಾರಿಗೆ ಸೇರಿದವರು. ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರ. ಆದರೆ, ಕುಟುಂಬದ ಮೂಲ ಕಸಬು ಮುಂದುವರಿಸುವ ಉದ್ದೇಶದಿಂದ ಪಟ್ಟಣದ ಬಿ.ಕೆ.ರಸ್ತೆಯಲ್ಲಿ ಮಂಜುನಾಥ ಆಯಿಲ್ ಮಿಲ್ ಹೆಸರಿನಲ್ಲಿ ಹರಳಣ್ಣೆ ಉದ್ಯಮವನ್ನು ಆಧುನೀಕರಿಸಿ ಮತ್ತೊಂದು ಹಂತಕ್ಕೆ ಕೊಂಡೊಯ್ಯದಿದ್ದಾರೆ.

ಹರಳೆಣ್ಣೆ ದೇಹಕ್ಕೆ ತಂಪು ನೀಡಿ ಆರೋಗ್ಯ ಕಾಪಾಡಲು ತುಂಬಾ ಸಹಕಾರಿ ಎಂಬುದು ಲೀಲಾವತಿ ಚಂದ್ರಶೇಖರ್ ಅವರ ನಂಬಿಕೆ. ದೇಸಿ ಉತ್ಪನ್ನಗಳಿಗೆ ಮರುಜೀವ ನೀಡಬೇಕೆಂದ ಉದ್ದೇಶದಿಂದ ಉದ್ಯಮ ಮುಂದುವರಿಸುವ ಪಣತೊಟ್ಟಿದ್ದಾರೆ ದರ್ಶನ್‌. 1 ಕೆ.ಜಿ.ಹರಳು ಬೀಜದ ಬೆಲೆ ₹50. 3ಕೆ.ಜಿ ಹರಳು ಬೀಜ ಹುರಿದು ಕುಟ್ಟಿ ಬೇಯಿಸಿದರೆ 1ಕೆ.ಜಿ ಎಣ್ಣೆ ಉತ್ಪತ್ತಿಯಾಗುತ್ತದೆ. ಲೀಟರ್‌ ಎಣ್ಣೆ ಬೆಲೆ ₹160. ವಿವಿಧ ಬಗೆ ಶಾಂಪು ಬಂದಿದ್ದರೂ ಕೂಡ ಹರಳೆಣ್ಣೆ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಲಾಭ, ನಷ್ಟದ ಕಡೆ ಗಮನಿಸುತ್ತಿಲ್ಲ. ಗ್ರಾಮೀಣ ಗುಡಿ ಕೈಗಾರಿಕೆಗಳು ಉಳಿಯಬೇಕು ಎನ್ನುವ ಕಾಳಜಿ ದರ್ಶನ್‌ ಅವರದ್ದು.

‘ಈ ಉದ್ಯಮಕ್ಕೆ ಹುಲಿಯೂರುದುರ್ಗ, ನಾಗಮಂಗಲ, ಬೆಂಗಳೂರು ಮತ್ತು ತಾಲ್ಲೂಕಿನ ಜನರ ಪ್ರೋತ್ಸಾಹ ಇದೆ. ಸರ್ಕಾರದಿಂದ ಯಾವುದೇ ಸಹಾಯಧನ ಇಲ್ಲ. ಸ್ವಂತ ಹಣದಿಂದಲೇ ಉದ್ಯಮ ನಡೆಸುತ್ತಿದ್ದೇವೆ. ಗುಣಮಟ್ಟ ಕಾಯ್ದುಕೊಳ್ಳುವುದು ಮೊದಲ ಆದ್ಯತೆಯಾಗಿದೆ. ಜುಟ್ಟಿಗೆ ತಂಪು, ಜೀವಕ್ಕೆ ಹಿಂಪು ನಮ್ಮ ಹರಳೆಣ್ಣೆ ಎಂದು ನಂಬಿದ್ದ ಬಾಪೂಜಿ ಅವರ ಆದರ್ಶ ಇಂದಿಗೂ ನಮಗೆ ಅನ್ನದ ಮಾರ್ಗ ತೋರಿಸಿದೆ’ ಎನ್ನುತ್ತಾರೆ ದರ್ಶನ್‌. 

ಹರಳೆ ಗಿಡದ ಹಿನ್ನೆಲೆ...
ಹರಳೇ ಗಿಡದ ಮತ್ತೊಂದು ಪರ್ಯಾಯ ಹೆಸರು ಔಡಲಗಿಡ. ಇದು ಬಹುಪಯೋಗಿ ಸಸ್ಯ. ಇದರ ಎಲೆ, ಬೇರು, ತೊಗಟೆ, ಬೀಜ ಎಲ್ಲವೂ ಉಪಯುಕ್ತ. ಗ್ರಾಮೀಣ ಭಾಗದಲ್ಲಿ ಆಗತಾನೆ ಬೇಯಿಸಿದ ಹರಳೆಣ್ಣೆ ಊಟದ ತಟ್ಟೆಗೆ ಹಾಕಿಕೊಂಡು ತುಪ್ಪದಂತೆ ತಿನ್ನುತ್ತಿದ್ದ ಕಾಲವೊಂದಿತ್ತು. ಹಗಲು ರಾತ್ರಿ ಎನ್ನದೆ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದ ರೈತರು, ಕುರಿಮೇಕೆ ಸಾಕುವವರು ತಲೆಗೆ ಹರಳೆಣ್ಣೆ ಹಚ್ಚಿಕೊಳ್ಳುತ್ತಿದ್ದರು. 

ಯುಗಾದಿ ಹಬ್ಬದಂದು ಮೈಗೆಲ್ಲಾ ಹರಳೆಣ್ಣೆ ಹಚ್ಚಿಕೊಂಡು, ಸೀಗೆಕಾಯಿ ಬಳಸಿ ಸ್ನಾನ ಮಾಡುವುದು ಇಂದಿಗೂ ವಾಡಿಕೆಯಲ್ಲಿದೆ. ದೇಹದಲ್ಲಿನ ಉಷ್ಣ ಮತ್ತು ಶೀತವನ್ನು ಸಮತೋಲನ ಮಾಡುವ ಶಕ್ತಿ ಈ ಎಣ್ಣೆಗೆ ಇದೆ. ‌ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದಾಗ ಹರಳೆಣ್ಣೆ ಬಳಸಲಾಗುತ್ತದೆ. ಮನೆಗೆ ಬಂದ ನೆಂಟರನ್ನು ಬೀಳ್ಕೊಡುವಾಗ ಅವರ ತಲೆಕೂದಲಿಗೆ ಹರಳೆಣ್ಣೆ ಹಚ್ಚಿ ತಲೆಬಾಚಿ ಕಳಿಸುವುದು ಇಂದಿಗೂ ಸಂಪ್ರದಾಯ ಇದೆ ಎನ್ನುತ್ತಾರೆ ಬಸವೇಶ್ವರ ದೇಗಲದ ಅರ್ಚಕ ಉಮಾಮಹೇಶ್ವರ್. 

Post Comments (+)