ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ: ಇನ್ನಷ್ಟೇ ಸಲ್ಲಿಕೆಯಾಗಬೇಕು ಪ್ರಸ್ತಾವ

ಚುನಾವಣೆ ಕಾರ್ಯ, ನೀತಿಸಂಹಿತೆ ಅಡ್ಡಿ: ಹೊಸ ತಾಲ್ಲೂಕು ರಚನೆ ಕಾರ್ಯಕ್ಕೆ ಹಿನ್ನಡೆ
Last Updated 22 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಐದನೇ ತಾಲ್ಲೂಕಾಗಿ ಹಾರೋಹಳ್ಳಿಯು ಈಗಾಗಲೇ ಘೋಷಣೆಯಾಗಿದ್ದು, ಚುನಾವಣೆ ನೀತಿ ಸಂಹಿತೆಯ ಕಾರಣ ತಾಲ್ಲೂಕು ರಚನೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಾರೋಹಳ್ಳಿ ಹೊಸ ತಾಲ್ಲೂಕು ರಚನೆಯ ಘೋಷಣೆ ಮಾಡಿದ್ದರು. ಅದರ ಬೆನ್ನಿಗೆ ಲೋಕಸಭಾ ಚುನಾವಣೆಯು ಬಂದ ಕಾರಣ ಸದ್ಯ ಈ ವಿಷಯದಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಹೊಸ ತಾಲ್ಲೂಕು ರಚನೆಗೆ ಜಿಲ್ಲಾಡಳಿತದಿಂದ ಇನ್ನೂ ಪ್ರಸ್ತಾವವೇ ಹೋಗಿಲ್ಲ. ರಾಜ್ಯ ಸರ್ಕಾರ ಕೂಡ ಚುನಾವಣೆ ಪ್ರಚಾರದಲ್ಲಿ ಮುಳುಗಿದ್ದು, ಜಿಲ್ಲಾಡಳಿತದೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ.

ಸರ್ಕಾರದ ಘೋಷಣೆಯ ಬಳಿಕ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯು ಉದ್ದೇಶಿತ ತಾಲ್ಲೂಕು ರಚನೆಯ ವ್ಯಾಪ್ತಿ, ಅದರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು, ಜನಸಂಖ್ಯೆ ಮೊದಲಾದ ಮಾಹಿತಿಗಳೆಲ್ಲವನ್ನೂ ನಿಗದಿತ ನಮೂನೆಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಒಪ್ಪಿಗೆ ದೊರೆತ ಬಳಿಕವಷ್ಟೇ ತಾಲ್ಲೂಕು ರಚನೆ ಕಾರ್ಯವು ಅಧಿಕೃತವಾಗಿ ಆರಂಭಗೊಳ್ಳಲಿದೆ.

‘ಅಧಿಕಾರಿಗಳೆಲ್ಲರೂ ಲೋಕಸಭಾ ಚುನಾವಣೆಯ ಕರ್ತವ್ಯದಲ್ಲಿ ನಿರತರಾಗಿದ್ದ ಕಾರಣ ಇನ್ನೂ ಪ್ರಸ್ತಾವ ಸಿದ್ಧಪಡಿಸಲು ಆಗಿಲ್ಲ. ಸದ್ಯ ಚುನಾವಣೆ ಮುಗಿದಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾಗುತ್ತೇವೆ. ಈಗಾಗಲೇ ಇದರ ಪೂರಕ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಪ್ಪಲಿದೆ ಅಲೆದಾಟ: ಕನಕಪುರ ತಾಲ್ಲೂಕು ಸದ್ಯ ಜಿಲ್ಲೆಯ ದೊಡ್ಡ ತಾಲ್ಲೂಕಾಗಿತ್ತು. ಇದೀಗ ಅದರ ವಿಭಜನೆ ಆಗಿದ್ದು, ಆಡಳಿತಾತ್ಮಕವಾಗಿ ಅದರ ಹೊರೆಯು ತಗ್ಗಲಿದೆ. ಹೊಸ ತಾಲ್ಲೂಕಿಗೆ ಹಾರೋಹಳ್ಳಿಯ ಜೊತೆಗೆ ಮರಳವಾಡಿ ಹೋಬಳಿಯು ಸೇರ್ಪಡೆಯಾಗಲಿದೆ. ಈ ಭಾಗದ ಜನರು ಸಣ್ಣಪುಟ್ಟ ಕೆಲಸಗಳಿಗೆ ತಾಲ್ಲೂಕು ಕೇಂದ್ರಕ್ಕೆ ಅಲೆದಾಡುವ ಸ್ಥಿತಿ ತಪ್ಪಲಿದೆ. ಇದರಿಂದ ಜನರ ಹಣ, ಸಮಯವೂ ಉಳಿತಾಯ ಆಗಿ ಸೂಕ್ತ ಸಮಯದಲ್ಲಿ ಸರ್ಕಾರಿ ಸವಲತ್ತು ಪಡೆಯಲು ನೆರವಾಗಲಿದೆ. ಜೊತೆಗೆ ಪ್ರತ್ಯೇಕ ಅನುದಾನವು ಲಭ್ಯ ಆಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅನುಕೂಲ ಆಗಲಿದೆ.

ಮೂಲ ಸೌಕರ್ಯ ಬೇಕು: ಹಾರೋಹಳ್ಳಿಯು ಸದ್ಯ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಅದನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವಕ್ಕೆ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ. ಈ ನಡುವೆ ಹಾರೋಹಳ್ಳಿಗೆ ನೇರ ತಾಲ್ಲೂಕು ಕೇಂದ್ರದ ಸ್ಥಾನಮಾನ ದೊರೆತಿದೆ.

ಬಸ್‌ ನಿಲ್ದಾಣ, ಪೊಲೀಸ್ ಠಾಣೆ ಸೇರಿದಂತೆ ಕೆಲವೇ ಕೆಲವು ಸೌಲಭ್ಯಗಳು ಇಲ್ಲಿವೆ. ತಾಲ್ಲೂಕು ಕೇಂದ್ರಕ್ಕೆ ಬೇಕಾದ ಸರ್ಕಾರಿ ಕಚೇರಿ ಕಟ್ಟಡಗಳು, ಅಗತ್ಯವಾದ ಸಿಬ್ಬಂದಿಯನ್ನು ಸರ್ಕಾರ ಒದಗಿಸಬೇಕಿದೆ.

‘ಮೇ 23ರವರೆಗೂ ರಾಜ್ಯದಲ್ಲಿ ನೀತಿಸಂಹಿತೆಯು ಜಾರಿಯಲ್ಲಿ ಇರಲಿದೆ. ಅದರ ಬಳಿಕ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನ, ಕಾರ್ಯ ನಿರ್ವಹಿಸಲು ಬೇಕಾದ ಸಿಬ್ಬಂದಿ ಎಲ್ಲವನ್ನೂ ಸರ್ಕಾರ ಒದಗಿಸಲಿದೆ’ ಎಂದು ಬಿ.ಪಿ. ವಿಜಯ್‌ ಹೇಳಿದರು.

ಕೈಗಾರಿಕಾ ಕೇಂದ್ರ
ಬೆಂಗಳೂರಿಗೆ ಸಮೀಪದಲ್ಲಿಯೇ ಹಾರೋಹಳ್ಳಿ ಕೈಗಾರಿಕಾ ಪ್ರದೇಶವಿದೆ. ಇದು ಏಷ್ಯಾದ ದೊಡ್ಡ ಕೈಗಾರಿಕಾ ವಸಾಹತುಗಳಲ್ಲಿ ಒಂದಾಗಿದೆ.

ಒಟ್ಟು ನಾಲ್ಕು ಹಂತಗಳಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಇಲ್ಲಿನ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿದೆ. ಮೊದಲ ಹಂತದಲ್ಲಿ 250 ಎಕರೆ, ಎರಡನೇ ಹಂತದಲ್ಲಿ 919 ಎಕರೆ ಪ್ರದೇಶವನ್ನು ಒಳಗೊಂಡ ಕೈಗಾರಿಕಾ ಪ್ರದೇಶವು ಸಂಪೂರ್ಣ ಅಭಿವೃದ್ಧಿ ಕಂಡಿದೆ. ಮೂರನೇ ಹಂತದಲ್ಲಿ 1366 ಎಕರೆ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಭರದಿಂದ ಸಾಗಿದೆ. ನಾಲ್ಕನೇ ಹಂತದಲ್ಲಿ ಕೈಗಾರಿಕಾ ವಿಸ್ತರಣೆಗಾಗಿ 367 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಸದ್ಯ ಇಲ್ಲಿ 219 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನೂ 150 ಕಾರ್ಖಾನೆಗಳು ನಿರ್ಮಾಣದ ಅಂತಿಮ ಹಂತದಲ್ಲಿ ಹಾಗೂ 36 ಕಾರ್ಖಾನೆಗಳು ನಿರ್ಮಾಣದ ಹಂತದಲ್ಲಿ ಇವೆ.

*ಚುನಾವಣೆ ಕರ್ತವ್ಯದ ಕಾರಣ ಸರ್ಕಾರಕ್ಕೆ ಇನ್ನೂ ಪ್ರಸ್ತಾವ ಸಲ್ಲಿಸಲು ಆಗಿಲ್ಲ. ಸದ್ಯ ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು
–ಬಿ.ಪಿ. ವಿಜಯ್‌,ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT