ಶುಕ್ರವಾರ, ನವೆಂಬರ್ 22, 2019
19 °C

‘ನಾನೇ ದೇವರು’–ಹುಚ್ಚ ವೆಂಕಟ್

Published:
Updated:

ರಾಮನಗರ: ಐದಾರು ದಿನಗಳ ಹಿಂದೆ ರಾಜ್ಯದ ವಿವಿಧ ಭಾಗಗಳಲ್ಲಿ ಪುಂಡಾಟ ನಡೆಸಿ, ಸಾರ್ವಜನಿಕರಿಂದ ಏಟು ತಿಂದಿದ್ದ ಚಿತ್ರನಟ ಹುಚ್ಚ ವೆಂಕಟ್ ಭಾನುವಾರ ಇಲ್ಲಿನ ವಿಜಯನಗರದಲ್ಲಿ ಕೂಲಾಗಿ ಚಹಾ ಸೇವಿಸಿ ಬೆಂಗಳೂರಿಗೆ ತೆರಳಿದರು.

ಭಾನುವಾರ ಬೆಳಿಗ್ಗೆ ಮಂಡ್ಯ ನಗರದ ಹೋಟೆಲ್ ಮುಂಭಾಗದಲ್ಲಿ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಯುವಕರಿಂದ ಹೊಡೆತ ತಿಂದಿದ್ದ ಹುಚ್ಚ ವೆಂಕಟ್ ಅವರನ್ನು ಪೊಲೀಸರು ರಕ್ಷಣೆ ಮಾಡಿ ನಗರದಿಂದ ಬೆಂಗಳೂರು ಕಡೆಗೆ ಕಳಿಸಿದ್ದರು. ಅಲ್ಲಿಂದ ಹೊರಟ ವೆಂಕಟ್ ಬೆಂಗಳೂರು ಹೆದ್ದಾರಿ ಪಕ್ಕದಲ್ಲಿರುವ ರಾಮನಗರದ ವಿಜಯನಗರ ಬಡಾವಣೆಯಲ್ಲಿ ಚಹಾ ಸೇವಿಸಿದರು. ಅಲ್ಲಿ ಅನೇಕ ಅಭಿಮಾನಿಗಳು ಅವರ ಜತೆಗೆ ಹೋಗಿ ಸೆಲ್ಪಿ ತೆಗೆದುಕೊಂಡರು. ಊಟೋಪಚಾರ ಹಾಗೂ ಕುಶಲೋಪರಿ ವಿಚಾರಿಸಿದ ಸಾರ್ವಜನಿಕರಿಗೆ ಸಮಾಧಾನದಿಂದಲೇ ಉತ್ತರಿಸಿದರು.

ನಾನೇ ದೇವರು, ಬೆಟ್ಟಕ್ಕೆ ಹೋಗಲ್ಲ: ಚಹಾದ ಅಂಗಡಿಯಲ್ಲಿದ್ದ ಸಾರ್ವಜನಿಕರು ಪಕ್ಕದಲ್ಲಿಯೇ ರಾಮದೇವರ ಬೆಟ್ಟವಿದ್ದು ಪಟ್ಟಾಭಿರಾಮ ದೇವರ ದರ್ಶನ ಮಾಡುವಂತೆ ತಿಳಿಸಿದ್ದಾರೆ. ಆದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಟ್ ‘ನಾನೇ ದೇವರು, ನಾನ್ಯಾಕೆ ದೇವರ ದರ್ಶನ ಮಾಡಬೇಕು’ ಎಂದಿದ್ದಾರೆ. ಇದನ್ನು ಕೇಳಿ ನಗುನಕ್ಕ ಯುವಕರಿಗೆ ಬೆದರಿಸಿದ್ದು, ಕಾರಿನಲ್ಲಿ ಬೆಂಗಳೂರಿನ ಕಡೆಗೆ ತೆರಳಿದರು ಎಂದು ಸ್ಥಳೀಯರು ತಿಳಿಸಿದರು.

ಪ್ರತಿಕ್ರಿಯಿಸಿ (+)