ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ‌ ಮೀಸಲಾತಿ: ಮಾದಿಗರ ಪರ ತೀರ್ಪು ಬರುವ ಭರವಸೆ- ಕೇಂದ್ರ ಸಚಿವ ನಾರಾಯಣಸ್ವಾಮಿ

Published 7 ಜನವರಿ 2024, 10:43 IST
Last Updated 7 ಜನವರಿ 2024, 10:43 IST
ಅಕ್ಷರ ಗಾತ್ರ

ಬಿಡದಿ: ‘ಮಾದಿಗರಿಗೆ ಒಳ ಮೀಸಲಾತಿ ನೀಡಬೇಕೆಂಬ ದಶಕಗಳ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಬಲ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮಾದಿಗರ ಪರ ತೀರ್ಪು ಬರುವ ಭರವಸೆ ಇದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ 'ಮಾದಿಗ ಮುನ್ನಡೆ-ಮಾದಿಗರ ಆತ್ಮಗೌರವ ಸಮಾವೇಶ' ಉದ್ಘಾಟಿಸಿ ಅವರು ಮಾತನಾಡಿದರು.

‘ಮೋದಿ ಅವರು ಇತ್ತೀಚೆಗೆ ತೆಲಂಗಾಣದಲ್ಲಿ ಮಾದಿಗ ಸಮಾಜದ ಮುಖಂಡ ಮಂದಾಕೃಷ್ಣ ಅವರ ಸಮ್ಮುಖದಲ್ಲಿ ಮಾದಿಗರ ಮೀಸಲಾತಿ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಮಾದಿಗರಿಗೆ ಮೀಸಲಾತಿ ವರ್ಗೀಕರಿಸುವ ವಿಷಯದ ವಿಚಾರಣೆ ಸುಪ್ರೀಂ ಕೋರ್ಟ್‌ನ ದೊಡ್ಡ ಪೀಠಕ್ಕೆ ಹೋಗಿದೆ. ಮಾದಿಗರಿಗೆ ನ್ಯಾಯ ಒದಗಿಸಿಕೊಡಲು ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಪ್ರಧಾನಿ ಹೇಳಿದ ನಂತರ ಮಾದಿಗರಲ್ಲಿ ದೊಡ್ಡ ಸಂಚಲನವಾಗಿದೆ’ ಎಂದರು.

‘ಕಳೆದ 35 ವರ್ಷಗಳಿಂದ ಆಂಧ್ರಪ್ರದೇಶ ಹಾಗೂ 28 ವರ್ಷಗಳಿಂದ ಕರ್ನಾಟಕ ಹೋರಾಟ ನಡೆಯುತ್ತಿದೆ. ಈ ಅವಧಿಯಲ್ಲಿ ಅನೇಕ ರಾಜಕೀಯ ಪಕ್ಷಗಳು ಆಡಳಿತ ನಡೆಸಿವೆ. ಅನೇಕ ಆಯೋಗಗಳು ಮೀಸಲಾತಿ ಹಂಚಿಕೆ ಬಗ್ಗೆ ವರದಿ ಕೊಟ್ಟಿವೆ. ಯಾವ ಸರ್ಕಾರಗಳು ಕೂಡ ಅದನ್ನು ಪರಿಗಣಿಸಲಿಲ್ಲ. ಆದರೆ, ನರೇಂದ್ರ ಮೋದಿಯವರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ತಿಳಿಸಿದರು.

‘ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಿದರು. ಅದು ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿದೆ. ಮೆಡಿಕಲ್‌, ಎಂಜಿನಿಯರಿಂಗ್‌, ಐಐಟಿಗಳಲ್ಲಿ ಅದರ ಪ್ರಯೋಜನ ಸಿಗುತ್ತಿದೆ. ಆದರೆ, ಅನೇಕರು ನಂಬುವ ಸ್ಥಿತಿಯಲ್ಲಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಕೂಡ ಮಾಡಲಾಯಿತು’ ಎಂದರು.

‘ಒಳಮೀಸಲಾತಿ ಜಾರಿಯಾದ ನಂತರ ನಮ್ಮ ಸಮಾಜದ ಮಕ್ಕಳು ಬೇರೆ ವರ್ಗದ ಮಕ್ಕಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ದರಾಗಬೇಕು. ನಮ್ಮ ಜವಾಬ್ದಾರಿ ಏನೆಂಬುದನ್ನು ಸಮುದಾಯದ ಪ್ರತಿಯೊಬ್ಬರೂ ಮನಗಾಣಬೇಕು’ ಎಂದು ತಿಳಿಸಿದರು.

‘ಮಾದಿಗರ ಕೂಗು ಯಾರಿಗೂ ಕೇಳಿಲ್ಲ. 65 ವರ್ಷ ಕಾಂಗ್ರೆಸ್ಸಿನ ದುರಾಡಳಿತ, ವೋಟ್ ಬ್ಯಾಂಕ್ ರಾಜಕಾರಣದ ಪರಿಣಾಮ ಮೀಸಲಾತಿ ಅಸ್ಪೃಶ್ಯರ ಪಾಲಾಗುವ ಬದಲು ಪ್ರಬಲ ಸಮುದಾಯಗಳ ಪಾಲಾಗಿತ್ತು. ಅದಕ್ಕೆ ಬಿಜೆಪಿ ಸರ್ಕಾರವೇ ಬರಬೇಕಾಯಿತು’ ಎಂದು ಹೇಳಿದರು.

‘ಕೆಪಿಎಸ್‌ಸಿಗೆ ಮಾದಿಗತ ನೇಮಕವಾಗಿಲ್ಲ‘

‘ಕೆಪಿಎಸ್‌ಸಿ ನಡೆಸುವ ನೇಮಕಾತಿಗೆ ಒಬ್ಬ ಮಾದಿಗ ಸಹ ನೇಮಕವಾಗಿಲ್ಲ. ನನ್ನ ಬಳಿ ದಾಖಲೆಯಿದೆ. ಇದರ ಬಗ್ಗೆ ನಮ್ಮ ಸಮುದಾಯದ ಅಧಿಕಾರಿಗಳಿಗೆ ಗಮನವಿಲ್ಲ. ಮಾದಿಗರಿಗೆ ಸ್ಪರ್ಧಾತ್ಮಕ ಗುಣಮಟ್ಟ ಕಡಿಮೆ’ ಎಂದು ನಾರಾಯಣ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಸಂಸತ್ ವಿಧಾನಸಭೆ ಕಲಾಪದಲ್ಲಿ ಚರ್ಚೆಯಾಗಿಲ್ಲ. ಒಳ ಮೀಸಲಾತಿ ಹೋರಾಟ 35 ವರ್ಷದಿಂದ ನಡೆಯುತ್ತಿದ್ದು ಇದರ ಬಗ್ಗೆ ಯಾವುದೇ ಸಂಸತ್ ಹಾಗೂ ವಿಧಾನ ಸಭೆ ಕಲಾಪದಲ್ಲಿ ಯಾವ ಪಕ್ಷವೂ ಕೂಡ ಮಾತಾಡಿಲ್ಲ, ಚರ್ಚೆ ಮಾಡಿಲ್ಲ. ಈ ಸಮುದಾಯದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ’ ಎಂದರು.

‘ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಒಳ ಮೀಸಲಾತಿ ಕೊಡುವ ಅಧಿಕಾರವಿದೆ. ಇದರ ಬಗ್ಗೆ ಯಾವುದೇ ಸರ್ಕಾರ ಗಮನ ಹರಿಸಿಲ್ಲ. ಕೇವಲ ಓಟು ಹಾಕಿಸಿಕೊಳ್ಳಲು ಸುಳ್ಳು ಭರವಸೆ ನೀಡುತ್ತಾ ಬಂದಿವೆ‌. ಬಿಜೆಪಿ ಜೇನುಗೂಡಿಗೆ ಕೈ ಹಾಕುತ್ತಿದೆ ಎಂದು ಮಾತನಾಡಿದರು. ಹಾಗಾದರೆ ನೊಂದವರಿಗೆ ನ್ಯಾಯ ಒದಗಿಸುವುದು ತಪ್ಪಾ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ’ ನಡೆಸಿದರು.

‘ವರದಿ ಬಿಡುಗಡೆಗೆ ನಾಟಕ’

‘ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಮಾಡಿ, ಈಗ ಬಿಡುಗಡೆ ಮಾಡಲು ದಿನಕ್ಕೆ ಒಂದು ರೀತಿಯ ನಾಟಕವನ್ನು ಮಾಡುತ್ತಿದ್ದಾರೆ . ವರದಿ ಮಾಡಿದ್ದು ಯಾಕೆ’ ಎಂದು ಪ್ರಶ್ನೆ ಮಾಡಿದರು.

‘ಎಸ್ಸಿ-ಎಸ್ಟಿಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ‌. ನಮ್ಮ ದಲಿತ ಯಾವ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡಿಲ್ಲ. ಇದರಲ್ಲೇ ತಿಳಿಯುವುದು ಸಮುದಾಯದ ಬಗ್ಗೆ ಇರುವ ಕಾಳಜಿ ಎಂತಹದ್ದು’ ಎಂದರು.

‘ಶೋಷಿತ ವರ್ಗಗಳಿಗೆ ಸಮಾನತೆ ಸಿಗಬೇಕೆನ್ನುವುದು ಸಂಘ ಪರಿವಾರದ ಆಶಯವಾಗಿದೆ. ಮಾದಿಗರ ಒಳಮೀಸಲಾತಿಗೂ ಆರ್‌ಎಸ್‌ಎಸ್‌ ತನ್ನ ಬದ್ಧತೆ ತೋರಿಸಿದೆ. ಆ ಕೆಲಸ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಒಪ್ಪಿಸಿದೆ. ಯಾವುದೇ ಸಮುದಾಯದ ವಿರುದ್ದ ನಮ್ಮ ಹೋರಾಟ ನಡೆಯುತ್ತಿಲ್ಲ. ನಮ್ಮಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಆಗ್ರಹ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಾತನಾಡಿ, ‘ಪ್ರತಿ ಸಮುದಾಯ ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಆಗ ಸಂವಿದಾನದ ಆಶಯ ಈಡೇರುವುದು’ ಎಂದು ಹೇಳಿದರು.

ರಾಜ್ಯ ಬಿಜೆಪಿ ವಕ್ತಾರ ವೆಂಕಟೇಶ್ ದೊಡ್ಡೇರಿ ಹಾಗೂ ಹಲವು ಮುಖಂಡರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT